ಭಾನುವಾರ, ಮೇ 9, 2021
22 °C
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ

ಸಮಾಜದ ಮೆಚ್ಚುಗೆಗೆ ಪಾತ್ರವಾದ ಮಂಗಲಗಿ ಸರ್ಕಾರಿ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ಸರ್ಕಾರಿ ಶಾಲೆ ಎಂದರೆ ಅದೇಷ್ಟೊ ಜನರು ಈಗಲೂ ಮೂಗು ಮುರಿಯುತ್ತಾರೆ. ಅದರಲ್ಲಿಯೂ ಕಾಳಗಿ ತಾಲ್ಲೂಕಿನ ಮಂಗಲಗಿ ಊರು ಎಂದರೆ ಹೌಹಾರುವ ಜನರೇ ಹೆಚ್ಚು. ಆದರೆ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆ ಎಲ್ಲದಕ್ಕೂ ಅಪವಾದ ಎಂಬಂತೆ ಬೆಳೆಯುತ್ತಿದೆ ಎಂದರೆ ಆಶ್ಚರ್ಯದ ಸಂಗತಿಯಾಗಿದೆ.

ಹೌದು, ಮಂಗಲಗಿ ಊರಿನಿಂದ ಕೊಡದೂರ ಮಾರ್ಗದಲ್ಲಿ ಒಂದು ಕಿ.ಮೀ ದೂರದಲ್ಲಿ ಅಡವಿಯಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಇದಕ್ಕೆ ಸಾಕ್ಷಿ.

1948ರ ನವೆಂಬರ್ 28ರಂದು ಪ್ರಾರಂಭಗೊಂಡಿರುವ ಈ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ ಇಲ್ಲಿವರೆಗೂ ಕನಿಷ್ಠ 5ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ವರ್ಷ 1ರಿಂದ 8ನೇ ತರಗತಿವರೆಗೆ ಒಟ್ಟು 224 ಮಕ್ಕಳು, 6ಜನ ಕಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2 ತರಗತಿ ಕೊಠಡಿಗಳಿದ್ದು ವಿಶಾಲವಾದ ಆಟದ ಮೈದಾನವಿದೆ.

ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಅತಿಥಿ ಶಿಕ್ಷಕರಿಂದ ಸಂಗ್ರಹವಾಗಿರುವ ಒಟ್ಟು 2,000 ಪುಸಕ್ತಗಳು ತುಂಬಿಕೊಂಡಿರುವ ಸುಸಜ್ಜಿತ ಗ್ರಂಥಾಲಯದಲ್ಲಿ ಮಕ್ಕಳೇ ಎಲ್ಲಾ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ.

ವಿಜ್ಞಾನ ಶಿಕ್ಷಕಿ ಯಶೋಧಾ ಬದಾಮಿ ಅವರು ವಿಜ್ಞಾನದ ಯಾವುದೇ ಪ್ರಯೋಗ ಮಾಡಲು ಮಕ್ಕಳಿಗೆ ಪ್ರಯೋಗಾಲಯಕ್ಕೆ ಕರೆದೊಯ್ಯುವ ರೂಢಿ ಹಾಕಿದ್ದಾರೆ. 5 ಗಣಕ ಯಂತ್ರಗಳಿರುವ ಕಂಪ್ಯೂಟರ್ ಕೇಂದ್ರದಲ್ಲಿ ಮಕ್ಕಳು ಗಣಕಯಂತ್ರ ಬಳಕೆ ಮಾಡುವುದರಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಗ್ರಾಮೀಣ ಪ್ರದೇಶದ ಶಾಲೆಗಳಲ್ಲೇ ಇಲ್ಲಿ ವಿಶೇಷ.

ವಿದ್ಯಾರ್ಥಿಗಳು ಈ ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆ ಇದ್ದರೂ ಕೂಡ ಎಲ್ಲವುದರ ಜತೆಗೆ ಕ್ರೀಡೆಗಳಲ್ಲಿಯೂ ಅಷ್ಟೇ ಆಸಕ್ತಿಯಿಂದ ಪಾಲ್ಗೊಂಡು ಹೋಬಳಿ ಮಟ್ಟದಿಂದ ಜಿಲ್ಲಾ ಸ್ತರದವರೆಗೆ ಅನೇಕ ಪ್ರಶಸ್ತಿಗಳು ತಮ್ಮದಾಗಿಸಿ ಕೊಂಡಿದ್ದಾರೆ.

ಒಟ್ಟಾರೆ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸಮಪರ್ಕವಾಗಿ ಉಪಯೋಗಿಸಿಕೊಳ್ಳುತ್ತಿರುವ ಇಲ್ಲಿನ ಶಿಕ್ಷಕರು ಮತ್ತು ಮಕ್ಕಳು ಸರ್ಕಾರಿ ಶಾಲೆ ಬೇರೆ ಯಾವ ಶಾಲೆಗೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಸಮಾಜಕ್ಕೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಈಚೆಗಷ್ಟೇ ಈ ಶಾಲೆ ಹಸಿರು ಪರಿಸರ ಮಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದಕ್ಕೆಲ್ಲ ಮಕ್ಕಳ ಶ್ರಮವೇ ಮುಖ್ಯಕಾರಣ’ ಎಂದು ಶಿಕ್ಷಕ ಸುರೇಶ ಮಡಿವಾಳ ಹೆಮ್ಮೆಯಿಂದ ನುಡಿದರು. ಶಾಲೆಯ ಪ್ರತಿಯೊಂದು ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಗ್ರಾಮಸ್ಥರು ಶಾಲೆಯ ಬಗ್ಗೆ ಅಷ್ಟೇ ಖುಷಿಯನ್ನು ವ್ಯಕ್ತಪಡಿಸುತ್ತಾರೆ.

ಈ ನಡುವೆ ಶಾಲೆಯಲ್ಲಿ ಕಲಿತಿರುವ ಹಳೆಯ ವಿದ್ಯಾರ್ಥಿಗಳು (ಈಗ ಅವರು ಹಿರಿಯರು) ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಈಚೆಗೆ ಏರ್ಪಡಿಸಲಾಗಿತ್ತು. ಹಿರಿಯರು ತಮ್ಮ ಶಾಲೆ ಬಗೆಗಿನ ಹಳೆಯ ನೆನಪು ಮೆಲಕು ಹಾಕಿದ್ದು ಚಿಕ್ಕವರಿಗೆ ದಿಕ್ಸೂಚಿಯಾಗಿತ್ತು ಎನ್ನುತ್ತಾರೆ ಶಿಕ್ಷಣಪ್ರೇಮಿ ಮೋನಪ್ಪ ಬಡಿಗೇರ.

ಕೈ ತೋಟದ ಜೊತೆಗೆ ಬದುಕಿನ ಪಾಠ

ಇಲ್ಲಿನ ಮಕ್ಕಳಿಗೆ ಕೇವಲ ಅಕ್ಷರಭ್ಯಾಸ ಹೇಳಿ ಕೊಡದೆ ಬದುಕಿಗೆ ಬೇಕಾದ ಶಿಕ್ಷಣವನ್ನು ಕಲಿಸುತ್ತಿರುವವುದು ವಿಶೇಷ. ಶಿಕ್ಷಕರು ಮಕ್ಕಳೊಂದಿಗೆ ಶಾಲಾ ಆವರಣದಲ್ಲಿ ಕೈತೋಟ ನಿರ್ಮಿಸಿ ಅವರಿಂದಲೇ ಅದರ ನಿರ್ವಹಣೆ ಮಾಡಿಸುತ್ತಾರೆ.

ಔಷಧಿ ಸಸ್ಯಗಳು, ಹೂವಿನ ಗಿಡಗಳು, ತರಕಾರಿ, ಅಲಂಕಾರಿಕ ಗಿಡಗಳು, ಹೊಂಗೆ ಮರ ಸೇರಿದಂತೆ 188 ಬಗೆಯ ಗಿಡಗಳು ಇಲ್ಲಿ ನಳನಳಿಸುತ್ತಿವೆ. ಬೋರವೆಲ್ ನೀರು, ಇಂಗುಗುಂಡಿ, ತುಂತುರು ಹನಿ ನೀರಾವರಿ ವ್ಯವಸ್ಥೆ ಮಕ್ಕಳು ಮಾಡಿದ್ದಾರೆ ಎನ್ನುತ್ತಾರೆ ಶಿಕ್ಷಕರು.

**

ಈ ಶಾಲೆಯಲ್ಲಿ ಉತ್ತಮವಾಗಿ ಗ್ರಂಥಾಲಯ ಮತ್ತು ಪ್ರಯೋಗಾಲಯ ವ್ಯವಸ್ಥೆ ಇದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಬಾಬಾಗೌಡ ಬಿರಾದಾರ, ಮುಖ್ಯಶಿಕ್ಷಕ

**

ನಮ್ಮ ಶಾಲೆಯಲ್ಲಿ ಅಕ್ಷರಭ್ಯಾಸದ ಜತೆಗೆ ಕೈತೋಟ ಮಾಡುವುದನ್ನು ಮತ್ತು ಬಿಡುವಿನ ವೇಳೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.
ನಾಗಮ್ಮ ಮುನ್ನೆಪ್ಪ, 7ನೇ ತರಗತಿ ವಿದ್ಯಾರ್ಥಿನಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು