ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಜಿಲ್ಲೆ ಅಭಿವೃದ್ಧಿಗೆ ವಿಜನ್ 2050

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ; 30 ವರ್ಷಗಳಲ್ಲಿ ಜಿಲ್ಲೆ ಬದಲಾಯಿಸುವ ಗುರಿ
Last Updated 30 ಮೇ 2021, 5:33 IST
ಅಕ್ಷರ ಗಾತ್ರ

ಕಲಬುರ್ಗಿ: ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಸಾರ ಹಿಂದುಳಿದ ಜಿಲ್ಲೆಗಳ ಪೈಕಿ ಒಂದಾದ ಕಲಬುರ್ಗಿಯನ್ನು ಮುಂದಿನ 30 ವರ್ಷಗಳಲ್ಲಿ ಆಮೂಲಾಗ್ರವಾಗಿ ಬದಲಾಯಿಸಲು ಕಲಬುರ್ಗಿ ವಿಜನ್ 2020–2050 ಯೋಜನೆಯನ್ನು ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ನಿರಾಣಿ, ‘ಜಿಲ್ಲೆಯ ಕೃಷಿ, ಕೈಗಾರಿಕೆ, ನೀರಾವರಿ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ವಿಚಾರಗಳಲ್ಲಿ ಜಿಲ್ಲೆಯನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶ. ಪ್ರತಿ 10 ವರ್ಷಗಳಿಗೊಮ್ಮೆ ಮೂರು ಹಂತಗಳಲ್ಲಿ ಇದು ಅನುಷ್ಠಾನಗೊಳಿಸುವ ಯೋಜನೆ ಇದೆ. ಮುಂದಿನ ಬಾರಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲೆಯ ಬುದ್ಧಿಜೀವಿಗಳು, ವಿಷಯ ತಜ್ಞರನ್ನೊಳಗೊಂಡಂತೆ ಒಂದು ಇಡೀ ದಿನ ಸಮಾಲೋಚನೆ ನಡೆಸಲಾಗುವುದು’ ಎಂದರು.

‘ನಾನು ಪ್ರತಿನಿಧಿಸುವ ಬೀಳಗಿ ತಾಲ್ಲೂಕು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯಮಟ್ಟದಲ್ಲಿ 10ನೇ ಸ್ಥಾನದಲ್ಲಿದೆ. ಪ್ರಸ್ತುತ ಕಲಬುರ್ಗಿ ಜಿಲ್ಲೆ ರ‍್ಯಾಂಕಿಂಗ್‌ನಲ್ಲಿ ಬಹಳ ಹಿಂದೆ ಇದೆ ಎಂಬ ಮಾಹಿತಿಯನ್ನು ಡಿಡಿಪಿಐ ನೀಡಿದ್ದಾರೆ. ಇದನ್ನು ಶೈಕ್ಷಣಿಕವಾಗಿ ಹೇಗೆ ಮುಂದೆ ತರಬೇಕು ಎಂಬುದು ಸದ್ಯದ ಯೋಚನೆ. ಪ್ರತಿವರ್ಷ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಬಂದ ಜಿಲ್ಲೆಯ ಡಿಡಿಪಿಐ ಅವರನ್ನು ಕರೆಸಿ ಆ ಜಿಲ್ಲೆಯ ಸಾಧನೆಗೆ ಕಾರಣವೇನು ಎಂಬುದರ ಮಾಹಿತಿ ಕೊಡಿಸುತ್ತಿದ್ದೇನೆ. ಅದನ್ನೇ ಇಲ್ಲಿ ಅನುಷ್ಠಾನಗೊಳಿಸಬಹುದು’ ಎಂದು ಹೇಳಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ. ರಂಗನಾಥ್, ಯೋಜನಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹಿಂದೆ ಕಲಬುರ್ಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.ಈ ಯೋಜನೆಗೆ ಸಲಹೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಹತ್ತಾರು ಸಕ್ಕರೆ ಕಾರ್ಖಾನೆಗಳಿವೆ. ಆದರೆ, ಕಬ್ಬು ಬೆಳೆಗೆ ಹೊಳೆಯ ನೀರು ಬಳಕೆಯಾಗುತ್ತದೆ. ಕಲಬುರ್ಗಿಯ ಬೆಣ್ಣೊತೊರಾ ಜಲಾಶಯದಲ್ಲಿ ಈಗಲೂ ನೀರಿದೆ. ಆದರೆ, ಅದರ ಅಕ್ಕಪಕ್ಕದಲ್ಲಿ ಹಸಿರೇ ಇರಲಿಲ್ಲ. ಹೀಗಾಗಿ, ನೀರಾವರಿಗೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಶಾಸಕರಾದ ಸುಭಾಷ್ ಗುತ್ತೇದಾರ, ಎಂ.ವೈ. ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯರಾದ ಸುನೀಲ ವಲ್ಯಾಪುರೆ, ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಸಾಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್, ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್ ಇದ್ದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಳಿಕೆ

ತಿಂಗಳ ಹಿಂದೆ ಸಾಕಷ್ಟು ಸಮಸ್ಯೆ ಸೃಷ್ಟಿಸಿದ್ದ ಕೊರೊನಾ ಸೋಂಕು ಜಿಲ್ಲೆಯಲ್ಲಿ ಇಳಿಮುಖವಾಗಿದ್ದು ಸಮಾಧಾನದ ಸಂಗತಿ. ಇದಕ್ಕೆ ಅಹರ್ನಿಶಿ ದುಡಿದ ಅಧಿಕಾರಿಗಳ ಶ್ರಮ ಕಾರಣ. ಜಿಮ್ಸ್‌ನ 404 ಬೆಡ್‌ಗಳ ಪೈಕಿ 170 ಬೆಡ್‌ಗಳು ಖಾಲಿ ಇವೆ. ಲಾಕ್‌ಡೌನ್‌ ಬಳಿಕ ಪರಸ್ಪರ ಸಂಪರ್ಕ ಬಾರದೇ ಇದ್ದುದರಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕಡಿಮೆಯಾಗಿದೆ. ಆಮ್ಲಜನಕ, ರೆಮ್‌ಡೆಸಿವಿರ್‌ಗೆ ಬೇಡಿಕೆಯೂ ತಗ್ಗಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ಸಾಮೂಹಿಕವಾಗಿ ಕೋವಿಡ್ ಲಸಿಕೆ ಹಾಕುವುದೇ ನಮ್ಮ ಗುರಿಯಾಗಿದ್ದು, ಮುಖ್ಯಮಂತ್ರಿ ಅವರೊಂದಿಗೆ ನಡೆದ ವಿಡಿಯೊ ಕಾನ್ಫ್‌ರೆನ್ಸ್‌ನಲ್ಲಿಯೂ ಜಿಲ್ಲೆಗೆ ಹೆಚ್ಚಿನ ಲಸಿಕೆಯನ್ನು ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾಗಿ ನಿರಾಣಿ ಹೇಳಿದರು.

ಈಗಾಗಲೇ ಮೂರು ತಾಲ್ಲೂಕುಗಳಿಗೆ ಆಮ್ಲಜನಕ ಉತ್ಪಾದನಾ ಘಟಕಗಳು ಮಂಜೂರಾಗಿದ್ದು, ಅಳವಡಿಕೆ ಕಾರ್ಯ ನಡೆಯುತ್ತಿದೆ. ಎಲ್ಲ ತಾಲ್ಲೂಕುಗಳಿಗೂ ಘಟಕಗಳು ಬರಲಿವೆ ಎಂದು ಹೇಳಿದರು.

‘ಇಲ್ಲಿ ಸ್ಪರ್ಧಿಸುವ ಆಸೆಯಿಲ್ಲ’

‘ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರಿಂದ ನನ್ನ ಕೈಲಾದ ಮಟ್ಟಿಗೆ ಜಿಲ್ಲೆಗೆ ಅಗತ್ಯವಾದ ಕೆಲಸಗಳನ್ನು ಮಾಡುತ್ತಿದ್ದೇನೆ. ಇಲ್ಲಿಂದ ಸ್ಪರ್ಧಿಸುವ ಯಾವುದೇ ಆಸೆ ಇಲ್ಲ. ಬೀಳಗಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಈ ಬಗ್ಗೆ ಯಾರಿಗೂ ಆತಂಕ ಬೇಡ’ ಎಂದು ಸಚಿವ ನಿರಾಣಿ ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT