ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಸ ಸಾಹಿತ್ಯಕ್ಕೆ ಪ್ರತ್ಯೇಕ ವಿ.ವಿ ಸ್ಥಾಪಿಸಿ’

Last Updated 27 ಮಾರ್ಚ್ 2023, 15:57 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯದಲ್ಲಿ ದಾಸ ಸಾಹಿತ್ಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಗುಲಬರ್ಗಾ, ರಾಯಚೂರು ಮತ್ತು ಕಡಗಂಚಿಯಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ದಾಸ ಸಾಹಿತ್ಯ ಕುರಿತ ಸಂಶೋಧನಾ ಮತ್ತು ಅಧ್ಯಯನ ಕೇಂದ್ರಗಳನ್ನು ಆರಂಭಿಸಬೇಕು ಎಂಬ ನಿರ್ಣಯ ಕಲಬುರಗಿ ವಿಭಾಗ ಮಟ್ಟದ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು.

ನಗರದ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹಾಗೂ ಪರಿಷತ್ತಿನ ದಕ್ಷಿಣ ವಲಯದ ಸಹಯೋಗದಲ್ಲಿ ನಡೆದ ಸಮ್ಮೇಳನದಲ್ಲಿ ‘ದಾಸ ಸಾಹಿತ್ಯದ ಅಪ್ರಕಟಿತ ಕೃತಿಗಳನ್ನು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಪ್ರಕಟಿಸಬೇಕು. ರಾಯಚೂರು ವಿಶ್ವವಿದ್ಯಾಲಯಕ್ಕೆ ಹರಿದಾಸ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಬೇಕು. ದಿ. ಗೋರೆಬಾಳ ಹನುಮಂತರಾಯರ ಹೆಸರಿನಲ್ಲಿ ದಾಸ ಸಾಹಿತ್ಯ ಸಂರಕ್ಷಕ ಪ್ರತಿಷ್ಠಾನ ಆರಂಭಿಸಬೇಕು. ಕಲಬುರಗಿ ನಗರದ ಯಾವುದಾದರೂ ಒಂದು ವೃತ್ತಕ್ಕೆ ಪುರಂದರ ದಾಸರ ಹೆಸರಿಡಬೇಕು’ ಎಂದು ಒತ್ತಾಯಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ದಾಸ ಮತ್ತು ಶರಣ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಎರಡು ಕಣ್ಣುಗಳಿದ್ದಂತೆ. ಉಭಯ ಸಾಹಿತ್ಯಗಳು ಸಮಾನತೆ ಮತ್ತು ಸಾಮರಸ್ಯ ಕಟ್ಟಬೇಕಿದೆ. ಹರಿದಾಸರು ಅದ್ಭುತ ಮತ್ತು ಕ್ರಾಂತಿಕಾರಿ ಸಾಹಿತ್ಯವನ್ನು ಕೊಟ್ಟು, ಜನರ ಬದುಕಿಗೆ ದಾರಿದೀಪವಾಗಿದ್ದಾರೆ’ ಎಂದರು.

‘ಕನ್ನಡದ ಸತ್ವ, ಶಕ್ತಿ ತೋರಿಸಿ ಭಕ್ತಿಯಲ್ಲೂ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಭಕ್ತ ಮತ್ತು ಪರಮಾತ್ಮನ ನಡುವೆ ಕೊಂಡಿಯಾಗಿ ದಾಸ ಸಾಹಿತ್ಯ ಕೆಲಸ ಮಾಡಿರುವುದು ಕಂಡುಬರುತ್ತದೆ’ ಎಂದು ಹೇಳಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಕಲ್ಯಾಣ ಕರ್ನಾಟಕದಲ್ಲಿ ದಾಸರು ಮತ್ತು ಶರಣರು ಸಮಾಜದಲ್ಲಿನ ಬದಲಾವಣೆಗೆ ಶ್ರಮಿಸಿದ್ದಾರೆ. ಸೂಫಿ ಸಂತರು ಸಹ ಸಮಾಜ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ಪರಿಷತ್ತಿನ ದಕ್ಷಿಣ ವಲಯ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ದಿಕ್ಸೂಚಿ ಭಾಷಣ ಮಾಡಿದರು. ದಾಸ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರವಿ ಲಾತೂರ್‌ಕರ್ ಅವರು ‘ದಾಸ ಚಿಂತನ ಸ್ಮರಣ’ ಸಂಚಿಕೆ ಬಿಡುಗಡೆ ಮಾಡಿದರು.

ಸ್ವಾಮಿರಾವ್ ಕುಲಕರ್ಣಿ ಅವರ ‘ನುಡಿಜೇನು ಮತ್ತು ದಾಸ ಸಾಹಿತ್ಯ ದೃಷ್ಟಿ-ಸೃಷ್ಟಿ’ ಮತ್ತು ಕಮಲಾಕರ ಕುಲಕರ್ಣಿ ಅವರ ‘ಹರಿದಾಸ ತತ್ವದಲ್ಲಿ ವೈರಾಗ್ಯ ತತ್ವ’ ಪುಸ್ತಕಗಳನ್ನು ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಬಿಡುಗಡೆ ಮಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಮೇಯರ್ ವಿಶಾಲ ದರ್ಗಿ, ಪ್ರಹ್ಲಾದ್ ಪೂಜಾರಿ ಇದ್ದರು.

ಅನಂತ ಚಿಂಚನಸೂರ್ ತಂಡ ಭರತನಾಟ್ಯ ಮತ್ತು ಮಹೇಶ ಬಡಿಗೇರ ತಂಡ ನಾಡಗೀತೆ ನಡೆಸಿಕೊಟ್ಟಿತು. ಶರಣರಾಜ್ ಛಪ್ಪರಬಂದಿ ಸ್ವಾಗತಿಸಿದರು. ಶೃತಿ ಸಗರ ಪ್ರಾರ್ಥಿಸಿದರು. ಜೋತ್ಸ್ನಾ ಹೇರೂರ್ ನಿರೂಪಿಸಿದರು. ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ ನಿರ್ವಹಿಸಿದರು.

ಅಧ್ಯಕ್ಷರ ಮೆರವಣಿಗೆ: ಇದಕ್ಕೂ ಮುನ್ನ ಉದನೂರು ಕ್ರಾಸ್‌ನಿಂದ ಜಯತೀರ್ಥ ಕಲ್ಯಾಣ ಮಂಟಪದವರೆಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಿತು. ಮಹಾನಗರ ಪಾಲಿಕೆ ಸದಸ್ಯೆ ಶೋಭಾ ದೇಸಾಯಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಕಸಾಪ ಜಿಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿ ಕಲ್ಯಾಣರಾವ ಶೀಲವಂತ, ಸುನೀಲ ಕುಮಾರ ಒಂಟಿ, ಕೆ.ಪಿ.ಗಿರಿಧರ, ಲಕ್ಷ್ಮಿ ನಾರಾಯಣ ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಪಾಲ್ಗೊಂಡಿದ್ದರು. ಲಕ್ಷ್ಮಣರಾವ ದೇಶಪಾಂಡೆ ಹಾಗೂ ಮಕ್ಕಳು ದಾಸರ ವೇಷ ತೊಟ್ಟು ಮೆರವಣಿಗೆಯಲ್ಲಿ ಗಮನ ಸೆಳೆದರು.

ಕಲಬುರಗಿ ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಜೆಸ್ಕಾಂ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾ ಅಧ್ಯಕ್ಷ ನಾಗೀಂದ್ರಪ್ಪ ಥಂಬೆ, ನಾಗರತ್ನಾ ಪಾಟೀಲ, ರಮೇಶ ರಾಗಿ, ಮಂಜುಳಾ ಭಜಂತ್ರಿ ಇದ್ದರು.

‘ದಾಸರ ವಿಚಾರಗಳ ಪ್ರಚಾರ ಅಗತ್ಯ’

‘ದಾಸರ ಸಮಾಜಮುಖಿ ವಿಚಾರಗಳ ಸಾಹಿತ್ಯದ ಕುರಿತು ಜನರಿಗೆ ತಿಳಿಸುವ ಅಗತ್ಯವಿದೆ’ ಎಂದು ಸಮ್ಮೇಳನದ ಅಧ್ಯಕ್ಷ ಸ್ವಾಮಿರಾವ್ ಕುಲಕರ್ಣಿ ಅಭಿಪ್ರಾಯಪಟ್ಟರು.

‘ಕೇವಲ ಭಕ್ತಿಯೊಂದೇ ದಾಸರ ಸಾಹಿತ್ಯದ ಉದ್ದೇಶ ಆಗಿರಲಿಲ್ಲ. ಬದುಕಿಗೂ ಅಷ್ಟೇ ಮಹತ್ವ ನೀಡಿದ್ದರು. ದಾಸರ ಆಂದೋಲನ, ಸಾಹಿತ್ಯ, ಸಮಾಜಮುಖಿ, ಜನಪರ ಕಾಳಜಿಯನ್ನು ಅವರ ವಿಚಾರಗಳಲ್ಲಿ ಕಾಣಬಹುದು. ದೇವರು, ಧರ್ಮ, ತತ್ವ, ಭಕ್ತಿಯ ಆವರಣದಲ್ಲಿ ಬದುಕು ಭದ್ರಗೊಳಿಸುವ ಇಚ್ಛೆಯನ್ನು ದಾಸರು ಹೊಂದಿದ್ದರು’ ಎಂದರು.

‘ದೇವರು, ಧರ್ಮ, ಶುದ್ಧ ಆಚರಣೆ, ಕೃತ್ರಿಮವಲ್ಲದ ನಡವಳಿಕೆ, ನೈತಿಕ ಮೌಲ್ಯ, ದುರಾಸೆಯ ಜೀವನ, ಮಾನವ ಪ್ರೀತಿ, ಸಾಮಾಜಿಕ ಸಾಮರಸ್ಯದಂತಹ ವಿಚಾರಗಳನ್ನು ದಾಸರ ರಚನೆಗಳಲ್ಲಿ ಮಾತ್ರವಲ್ಲ, ಅವರ ಬದುಕಿನ ರೀತಿಯಲ್ಲೂ ಕಾಣುತ್ತೇವೆ’ ಎಂದು ಹೇಳಿದರು.

‘ದಾಸಸಾಹಿತ್ಯ ಜ್ಞಾನ ಮತ್ತು ಶಕ್ತಿ ಸಾಹಿತ್ಯಗಳನ್ನು ಒಳಗೊಂಡಿದೆ. ಭಕ್ತಿ ಸಾಹಿತ್ಯ ಬದುಕಿಗೆ ಉಪಯುಕ್ತವಾಗಬೇಕು ಎಂಬುದು ಭಕ್ತಿ ಮಾರ್ಗದ ಉದ್ದೇಶ. ದಾಸ ಸಾಹಿತ್ಯದ ಅಧ್ಯಯನ, ವಿಮರ್ಶೆ ವಿಶ್ಲೇಷಣೆ ನಡೆಯಬೇಕು’ ಎಂದರು.

‘ಕ್ರಿ.ಶ 15ರಿಂದ 19ನೇ ಶತಮಾನದ ಅವಧಿಯಲ್ಲಿ 320 ದಾಸರ ಬದುಕು-ಬರಹಗಳು ಲಭ್ಯವಾಗಿವೆ. ಸುಮಾರು 45 ಸಾವಿರ ಕೀರ್ತನೆ, ಉಗಾಭೋಗ, ಸುಳಾದಿಗಳು ದೊರಕಿವೆ. ಲಭ್ಯವಿರುವ 300ಕ್ಕೂ ಹೆಚ್ಚು ದಾಸರಲ್ಲಿ ಶೇ 90ರಷ್ಟು ದಾಸರು ಕಲಬುರಗಿ ವಿಭಾಗಕ್ಕೆ ಸೇರಿದ್ದರು ಎಂಬುದು ಸಂತಸ ಸಂಗತಿ’ ಎಂದರು.

‘ಮಹಿಳಾ ಹರಿದಾಸರ ಕಡೆಗಣನೆ’

‘ರಾಷ್ಟ್ರಕವಿ ಕುವೆಂಪು ಅವರು ರಚಿಸುವ ಮೊದಲು ಮಹಿಳಾ ಹರಿದಾಸರಾದ ಅಂಬಾಬಾಯಿ ಅವರು ಮಹಾಕಾವ್ಯ ರಚಿಸಿದ್ದರು. ಅಂಬಾಬಾಯಿ ಅವರ ಕೊಡುಗೆ ಇತಿಹಾಸಕಾರರ ಕಣ್ಣಿಗೆ ಕಾಣಿಸಲಿಲ್ಲ’ ಎಂದು ಪತ್ರಕರ್ತ ಶ್ರೀನಿವಾಸ ಸಿರನೂರಕರ ಬೇಸರ ವ್ಯಕ್ತಪಡಿಸಿದರು.

ದಾಸ ಸಾಹಿತ್ಯ ಸಮ್ಮೇಳನದ ‘ಪೊರೆಕಳೆಚುವ ಪರಿ’ ಗೋಷ್ಠಿಯ ಅಧ್ಯಕ್ಷ ವಹಿಸಿ ಅವರು ಮಾತನಾಡಿದರು.

‘ದಾಸ ಸಾಹಿತ್ಯಕ್ಕೆ‌ ಅಪಾರ ಕೊಡುಗೆ ನೀಡಿದ ಅಂಬಾಬಾಯಿ ಅವರ ಹೆಸರು ಪ್ರಚಲಿತಕ್ಕೆ ಬರಲಿಲ್ಲ. ದಾಸ ಪರಂಪರೆಯಲ್ಲಿ 120ಕ್ಕೂ ಹೆಚ್ಚು ಮಹಿಳಾ ಸಾಧಕಿಯರ ಬಗ್ಗೆ ತಿಳಿದುಕೊಳ್ಳಲು‌ ಆಗುತ್ತಿಲ್ಲ.‌ ಅವರ ಕರಿತು ಜನರಿಗೆ ತಿಳಿಸುವ ನಿಟ್ಟಿನಲ್ಲಿ ದಾಸ ಸಾಹಿತ್ಯದ ಸಂಶೋಧನೆ ನಡೆಸಬೇಕಿದೆ’ ಎಂದರು.

ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಸವರಾಜ ಕೋಡಗುಂಟಿ ಮಾತನಾಡಿ, ‘ದಾಸರು ಮೂಢನಂಬಿಕೆ, ಕಂದಾಚಾರವನ್ನು ಪ್ರತಿಭಟಿಸಿ, ಭಕ್ತಿಯ ಮೂಲ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ. ದಾಸರು ಬದುಕುನ‌ ಮಾರ್ಗ ತೋರಿಸಿಕೊಟ್ಟಿದ್ದು, ಅವರ ತತ್ವಗಳನ್ನು ಅಳವಡಿಸಿಕೊಳ್ಳುತ್ತಿಲ್ಲ’ ಎಂದರು.

ರಾಯಚೂರಿನ ರಾಜಶ್ರೀ ಕಲ್ಲೂರ ಅವರು ‘ದಾಸ ಸಾಹಿತ್ಯದಲ್ಲಿ ವಿಶ್ವ ಮಾನವತ್ವದ’, ಲಕ್ಷ್ಮಿಕಾಂತ ಮೋಹರೀರ ಅವರು ‘ದಾಸ ಸಾಹಿತ್ಯ ಪರಂಪರೆ ನಡೆದು ಬಂದ ದಾರಿ’ ಕುರಿತು ಉಪನ್ಯಾಸ ಮಂಡಿಸಿದರು.

ಆರ್.ಜೆ ಕಾಲೇಜು ಪ್ರಾಚಾರ್ಯ ಪ್ರಹ್ಲಾದ ಬುರ್ಲಿ, ನಾರಾಯಣ ಕುಲಕರ್ಣಿ ಇದ್ದರು.


ಹರಿದಾಸ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ ವಿಭಾಗದ ಏಳು ಜಿಲ್ಲೆಗಳಲ್ಲಿ ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಗೋಪಾಲಾಚಾರ್ಯ ಅಕಮಂಚಿ, ವ್ಯಾಸರಾಜ ಸಂತೆಕೆಲ್ಲೂರ, ರಾಮರಾವ ಕುಲಕರ್ಣಿ ಕಣಮೇಶ್ವರ, ಡಾ. ಮಹೇಶಕುಮಾರ ಬಡಿಗೇರ, ಹಳ್ಳೇರಾವ ಕುಲಕರ್ಣಿ, ರವೀಂದ್ರ ಲಂಜವಾಡಕರ್, ಕೆ.ಎಸ್.ಬಂಧು ಸಿದ್ದೇಶ್ವರ, ಸಿದ್ದರಾಮ ಹೊನ್ಕಲ್, ಪ್ರೊ. ಪರಿಮಳಾ ಅಂಬೇಕರ್ ಅವರಿಗೆ ಹರಿದಾಸರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅನಂತ ಮಿಸ್ತ್ರಿ, ಸಂಜೀವರಾವ ಮಹಿಪತಿ, ಕೃಷ್ಣ ಕಾಕಲವಾರ, ಲಕ್ಷ್ಮಿ ಶಂಕರ ಜೋಶಿ, ಸುನಂದಾ ಸಾಲವಡಗಿ, ಅನಂತ ಚಿಂಚನಸೂರ, ನರಸಿಂಹ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT