ಶನಿವಾರ, ಜನವರಿ 22, 2022
16 °C

ಕಲ್ಲಯ್ಯಗೆ ‘ಕಲ್ಯಾಣ ಕರ್ನಾಟಕ ಕೋಗಿಲೆ’ ಕಿರೀಟ; ₹51 ಸಾವಿರ ನಗದು, ಪಾರಿತೋಷಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕರ್ನಾಟಕ ಸಂಘಟನಾ ವೇದಿಕೆ ವತಿಯಿಂದ ನಗರದಲ್ಲಿ ಭಾನುವಾರ ನಡೆದ ಬೃಹತ್‌ ರಿಯಾಲಿಟಿ ಶೋದಲ್ಲಿ ಕಲಬುರಗಿಯ ಯುವ ಗಾಯಕ ಕಲ್ಲಯ್ಯ ಅವರು ‘ಕಲ್ಯಾಣ ಕರ್ನಾಟಕ ಕೋಗಿಲೆ’ ಆಗಿ ಹೊರಹೊಮ್ಮಿದರು.

ಇಲ್ಲಿನ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಹಾಕಿದ್ದ ವರ್ಣರಂಜಿತ ವೇದಿಕೆಯಲ್ಲಿ ಈ ಗಾಯಕನಿಗೆ ₹ 51 ಸಾವಿರ ನಗದು, ಪಾರಿತೋಷಕ ನೀಡಲಾಯಿತು. ಎರಡನೇ ಸ್ಥಾನ ಪಡೆದ ಲಕ್ಷ್ಮಿ ಅಂಗಡಿ ₹ 21 ಸಾವಿರ ನಗದು, ಮೂರನೇ ಸ್ಥಾನ ಪಡೆದ ಪ್ರೀತಿ ಕುಲಕರ್ಣಿ ₹ 11 ಸಾವಿರ ನಗದು ಹಾಗೂ ಪಾರಿತೋಷಕ ಪಡೆದರು. ಅಂಗವೈಕಲ್ಯವನ್ನೂ ಮೀರಿ ಬೆಳೆದ ಗಂಗಾಧರ ಅವರಿಗೆ ಸಮಾಧಾನಕರ ಪ್ರಶಸ್ತಿ ನೀಡಲಾಯಿತು.‌

ಚಲನಚಿತ್ರ ಗಾಯಕರಾದ ರಾಜೇಶ್‌ ಕೃಷ್ಣನ್, ಡಾ.ಶಮಿತಾ ಮಲ್ನಾಡ್‌, ಆದಿತಿ ಖಂಡೆಗಳ, ಅನಂತರಾಜ್‌ ಮಿಸ್ಟಿ, ಕಿರುತೆರೆ ನಟ ಕಿರಣರಾಜ್‌, ನಟಿಯರಾದ ಅನುಷಾ ಹಾಗೂ ದೀಪಾ ಅವರು ವಿಜೇತರಿಗೆ ಬಹುಮಾನ ನೀಡಿದರು.

ರಂಜಿಸಿದ ಗಾಯಕರು: ಪುನೀತ್‌ ರಾಜ್‌ಕುಮಾರ್‌ ವೇದಿಕೆಯಲ್ಲಿ ದಿನವಿಡೀ ಹಾಡು, ಕುಣಿತ, ಸನ್ಮಾನಗಳು ವರ್ಣರಂಜಿತವಾಗಿ ನಡೆದವು. ಇದಕ್ಕೂ ಮುನ್ನ ನಡೆದ ಮೆಗಾ ಫೈನಲ್‌ ಸುತ್ತಿನಲ್ಲಿ 15 ಗಾಯಕರು ವಿವಿಧ ಚಲನಚಿತ್ರ ಗೀತೆಗಳನ್ನು ಹಾಡಿದರು. 6ನೇ ತರಗತಿ ವಿದ್ಯಾರ್ಥಿನಿ ಶ್ರೀಗೌರಿ ‘ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ...’ ಗೀತೆ ಹಾಡುತ್ತಿದ್ದಂತೆಯೇ ಪ್ರೇಕ್ಷಕರ ಗ್ಯಾಲರಿಯಿಂದ ಸಿಳ್ಳೆ, ಚಪ್ಪಾಳೆಗಳ ಭೋರ್ಗರೆತ. ಗಾಯಕ ಗಂಗಾಧರ ಅವರು ‘ದೇಹವೆಂದರೆ ಓ ಮನುಜ ಮೂಳೆ ಮಾಂಸಗಳ ಕುಡಿಕೆ ನಿಜ...’ ಎಂಬ ಗೀತೆಯನ್ನು ರಾಜ್‌ಕುಮಾರ್‌ ಧ್ವನಿ ಅನುಕರಿಸಿ ಹಾಡಿದರು. ನಂತರ ಬಂದ ಚನ್ನಪ್ಪ ‘ಹೃದಯ ಸಮುದ್ರ ಕಲಕಿ ಹೊತ್ತಿದ ದ್ವೇಷದ ಬೆಂಕಿ...’ ಗೀತೆ ಪ್ರಸ್ತುತಪಡಿಸಿ ಸಭಾಂಗಣದಲ್ಲಿ ಸಂಚಲನ ಮೂಡಿಸಿದರು. ‘ಸರಿಗಮಪದನಿ ಸಾವಿರದ ಶರಣು...’ ಗೀತೆಗೆ ಧ್ವನಿಯಾದ ಶಿಕ್ಷಕಿ ಪ್ರೀತಿ ಕುಲಕರ್ಣಿ ತಮ್ಮ ಸುಮಧುರ ಕಂಠದಿಂದ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದವರು. ಲಕ್ಷ್ಮಿ ಅವರಂತೂ ‘ಕನಸಲು ನೂರು ಬಾರಿ ಕರೆಯುವ ನಿನ್ನನೇ ನಾನು...’ ಎಂಬ ಪ್ರೇಮಗೀತೆಯ ಮೂಲಕ ಜನಮನ ಗೆದ್ದರು. ಕಲ್ಲಯ್ಯ ಅವರ ‘ಗೊಂಬೆ ಆಟವಯ್ಯ...’ ಹಾಡಿಗೆ ಮನಸೋಲದವರೇ ಇಲ್ಲ. ಚನ್ನಪ್ಪ, ಕವಿತಾ ಮುಕ್ಕ, ಅಪೂರ್ವ, ಭಾಗ್ಯಶ್ರೀ, ಕರುಣೇಶ್, ಸೌಮ್ಯಶ್ರೀ, ಶರಣು, ಮೇಘಾ, ಶಿವಶಂಕರ್‌ ಕೂಡ ತೀವ್ರ ಸ್ಪರ್ಧೆ ಒಡ್ಡಿದರು. ಕಾರ್ಯಕ್ರಮ ಆಯೋಜಕ ಗುರುರಾಜ ಸಿ. ಬಂಡಿ, ಅಣ್ಣಾರಾವ್‌ ಶೆಳ್ಳಗಿ ಮಾತನಾಡಿದರು. ಮುಖಂಡರಾದ ನವೀನ್‌ ಗುತ್ತೇದಾರ, ರವಿ ಚವಾಣ್, ಡಾ.ಶರಣಬಸಪ್ಪ ಕಾಮರೆಡ್ಡಿ, ನೀಲಕಂಠರಾವ್ ಮೂಲಗೆ, ಮಹೇಶ್ವರಿ ವಾಲೆ ಸೇರಿದಂತೆ ಹಲವರು ಮುಖ್ಯಅತಿಥಿಗಳಾಗಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು