ಮಂಗಳವಾರ, ಆಗಸ್ಟ್ 16, 2022
21 °C
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕನಕ ಜಯಂತಿ

ಸಮಾನತೆ ದೀಪ ಹಚ್ಚಿದ ಕನಕದಾಸರು: ಡಾ.ನಿಂಗಪ್ಪ ಮುದೇನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಸಂಶಯ ಕಾಲದಲ್ಲಿ ಬದುಕುತ್ತಿರುವವರಿಗೆ ಔಷಧಿ ರೂಪದಲ್ಲಿ ಚಿಂತನೆ ನೀಡಿದವರು ಕನಕದಾಸರು. 12ನೇ ಶತಮಾನದ ವಚನ ಚಳವಳಿ ನಂತರ ದಾಸ ಪರಂಪರೆಯಲ್ಲಿ ಶ್ರೇಷ್ಟ ದಾರ್ಶನಿಕರೇ ಹೊರಬಂದರು. ಶೂದ್ರ ಸಮುದಾಯದಿಂದ ಬಂದ ಕನಕರು ಶ್ರೇಷ್ಠ ದಾಸರಾಗಿ ಹೊರಹೊಮ್ಮಿದರು. ಮೌಢ್ಯ ಕಳೆದು ಸಮಾನತೆ ದೀಪ ಹಚ್ಚಿದರು’‌ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಕನಕದಾಸ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಕನಕದಾಸರು ಕರ್ನಾಟಕದಲ್ಲಿ ಹೊಸ ಬಂಡಾಯ ಹುಟ್ಟುಹಾಕಿದರು. ಅವರ ರಾಮಧಾನ್ಯ ಕೃತಿಯು ಕನ್ನಡ ನಾಡಿನ ದುಡಿಯುವ ವರ್ಗದ ಶ್ರೇಷ್ಠತೆ ಮತ್ತು ಅನ್ನದ ಚರಿತೆ ಕಟ್ಟಿಕೊಡುತ್ತದೆ. ಉಡುಪಿಯ ಶ್ರೀಕೃಷ್ಣನ ಕುರಿತು ಪ್ರಶ್ನಾತ್ಮಕವಾಗಿ ವೈಚಾರಿಕ ಸಂಬಂಧ ಕಟ್ಟಿದಾತ ಕನಕದಾಸರು. 15-16ನೇ ಶತಮಾನದ ಕಾಲಮಾನದಲ್ಲಿ ಬದುಕಿದ ಕನಕದಾಸರು, ವೈಷ್ಣವ ದಾಸಪಂಥದ ಜೊತೆಗೆ ಗುರುತಿಸಿಕೊಂಡು ಮಾನವೀಯ ಮೌಲ್ಯ ರೂಪಿಸಿದರು’ ಎಂದರು.

ವಿ.ವಿ ಪ್ರಭಾರಿ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಮಾತನಾಡಿ, ‘ಕನಕದಾಸರ ವಾಣಿಯಂತೆ ಅಜ್ಞಾನಿಗಳ ಜೊತೆಗೂಡಿ ಜಗಳವಾಡುವುದಕ್ಕಿಂತ ಸುಜ್ಞಾನಿಗಳ ಕೂಡ ಜಗಳವೇ ಶ್ರೇಷ್ಠ. ದಾಸರು ಸಮ ಸಮಾಜದ, ಸ್ವತಂತ್ರ ಅಭಿವೃದ್ಧಿಯನ್ನು ಕಲ್ಪಿಸಿಲು ಪ್ರಯತ್ನಿಸಿದಂತಹ ತತ್ವಜ್ಞಾನಿ’ ಎಂದರು.

ಜಯಂತ್ಯುತ್ಸವ ಸಂಚಾಲಕಾರದ ಪ್ರೊ.ಎಚ್.ಟಿ.ಪೋತೆ ಮಾತನಾಡಿದರು. ಕುಲಸಚಿವ ಪ್ರೊ.ಸಿ.ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಸಂಜೀವ ಕುಮಾರ ಕೆ.ಎಂ., ವಿತ್ತಾಧಿಕಾರಿ ಪ್ರೊ.ಬಿ.ವಿಜಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು