ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಂಕಿಂಗ್ ವ್ಯವಸ್ಥೆಯಿಂದ ಆರ್ಥಿಕತೆ ಸುಧಾರಣೆ’

ಕಲಬುರ್ಗಿಯಲ್ಲಿ ಕರ್ಣಾಟಕ ಬ್ಯಾಂಕ್‌ನ 14ನೇ ಪ್ರಾದೇಶಿಕ ಕಚೇರಿ ಆರಂಭ
Last Updated 22 ಮೇ 2019, 14:24 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನದಿಂದ ಆರ್ಥಿಕತೆಯಲ್ಲಿ ಸುಧಾರಣೆ ಕಾಣುತ್ತಿದ್ದೇವೆ. ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ ಇಲ್ಲದಿದ್ದರೆ ವಿದೇಶದಲ್ಲಿ ಓದುತ್ತಿರುವ ನಮ್ಮ ಮಕ್ಕಳಿಗೆ ಹಣ ಕಳಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಆರ್‌.ನಿರಂಜನ ಅಭಿಪ್ರಾಯಪಟ್ಟರು.

ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕರ್ಣಾಟಕ ಬ್ಯಾಂಕ್‌ನ 14ನೇ ಪ್ರಾದೇಶಿಕ ಕಚೇರಿಯನ್ನು ಇಲ್ಲಿನ ಹಳೇ ಜೇವರ್ಗಿ ರಸ್ತೆ ಬಾಲಾಜಿ ನಗರದ ಓಂ ಕಾಂಪ್ಲೆಕ್ಸ್‌ನಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.

‘ತಂತ್ರಜ್ಞಾನದ ಪರಿಣಾಮಕಾರಿ ಅನುಷ್ಠಾನದಿಂದಾಗಿ ಬ್ಯಾಂಕುಗಳು ಹೆಚ್ಚು ಗ್ರಾಹಕ ಸ್ನೇಹಿಯಾಗಿವೆ. ಸಾಂಪ್ರದಾಯಿಕ ಬ್ಯಾಂಕಿಂಗ್‌ ಸೇವೆಯ ಜೊತೆಗೇ ಜೀವವಿಮೆ, ಸಾಮಾನ್ಯ ವಿಮೆಯಂತಹ ಸೇವೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ರೈತರಿಗೆ ಬೆಳೆ ಸಾಲ ನೀಡುವುದು, ನಿರುದ್ಯೋಗಿ ಯುವಕರಿಗೆ ವಿವಿಧ ಬಗೆಯ ಸ್ವಯಂ ಉದ್ಯೋಗಿಗಳಿಗೆ ಸಾಲ ನೀಡುವ ಮೂಲಕ ಆರ್ಥಿಕತೆಯನ್ನು ಸುಧಾರಿಸುತ್ತಿವೆ’ ಎಂದು ಶ್ಲಾಘಿಸಿದರು.

‘ಗುಲಬರ್ಗಾ ವಿಶ್ವವಿದ್ಯಾಲಯದ ಎಲ್ಲ ಹಣಕಾಸು ವ್ಯವಹಾರಗಳನ್ನು ಆನ್‌ಲೈನ್‌ ಮಾಡಿದ ‍ಪರಿಣಾಮ ವಿದ್ಯಾರ್ಥಿಗಳ ಬೋಧನಾ ಶುಲ್ಕ, ಕಾಲೇಜಿನ ಮಾನ್ಯತೆ ಪಡೆಯಲು ಸಂಗ್ರಹಿಸುವ ಶುಲ್ಕದಲ್ಲಿ ಗಣನೀಯ ಹೆಚ್ಚಳ ಕಂಡು ಬಂದಿದೆ’ ಎಂದರು.

ಬ್ಯಾಂಕ್‌ನ ಚೀಫ್‌ ಬಿಜಿನೆಸ್‌ ಆಫೀಸರ್‌ (ಸಿಬಿಒ) ಗೋಕುಲದಾಸ್‌ ಪೈ ಮಾತನಾಡಿ, ‘1924ರಲ್ಲಿ ಆರಂಭವಾದ ಬ್ಯಾಂಕ್‌ ಸತತವಾಗಿ ಲಾಭ ಗಳಿಸುತ್ತಲೇ ಬಂದಿದೆ. ನಮ್ಮ ಶೇ 99ಕ್ಕೂ ಅಧಿಕ ಗ್ರಾಹಕರು ಬ್ಯಾಂಕ್‌ನಿಂದ ಪಡೆದ ಸಾಲವನ್ನು ನಿಯಮಿತವಾಗಿ ಪಾವತಿ ಮಾಡುತ್ತ ಬ್ಯಾಂಕ್‌ ಏಳಿಗೆಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ. 1,23 ಲಕ್ಷ ಕೋಟಿ ವಹಿವಾಟು ಹೊಂದಿರುವ ಬ್ಯಾಂಕು ₹ 5,784 ಕೋಟಿ ಸ್ವಂತ ಬಂಡವಾಳ ಹೊಂದಿದೆ. ದೇಶದಾದ್ಯಂತ 836 ಶಾಖೆಗಳು ಹಾಗೂ 1,535 ಎಟಿಎಂಗಳನ್ನು ಹೊಂದಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ₹ 477 ಕೋಟಿ ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ 35ರಷ್ಟು ಡಿವಿಡೆಂಡ್‌ ನೀಡಲು ಶಿಫಾರಸು ಮಾಡಲಾಗಿದೆ’ ಎಂದು ಹೇಳಿದರು.

ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ರಾವ್‌, ‘ವಿವಿಧ ಬಗೆಯ ಸಾಲ ನೀಡುವ ಮೂಲಕ ಜನಗಳ ಆರ್ಥಿಕ ಮಟ್ಟವನ್ನು ಮೇಲೆತ್ತಲು ಪ್ರಯತ್ನಿಸಿದ್ದೇವೆ. ವಿದ್ಯುತ್‌ ಸರಿಯಾಗಿ ಇಲ್ಲದ ಪ್ರದೇಶಗಳಲ್ಲಿಯೂ ಕೋರ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ಕಲ್ಪಿಸುವ ಮೂಲಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ’ ಎಂದು ವಿವರಿಸಿದರು.

ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಜಿಎಂ) ಬಸವರಾಜ ದೇಸಳ್ಳಿ, ಹೈದರಾಬಾದ್‌ ಪ್ರಾದೇಶಿಕ ಕಚೇರಿಯ ಎಜಿಎಂ ಅನಿಲ್‌ ಮೊರಾಸ್‌, ಹುಬ್ಬಳ್ಳಿ ಕಚೇರಿಯ ನಾಗರಾಜ ಐತಾಳ ಇದ್ದರು.

ಹೈದರಾಬಾದ್‌, ಹುಬ್ಬಳ್ಳಿ ಹಾಗೂ ತುಮಕೂರು ಪ್ರಾದೇಶಿಕ ಕಚೇರಿಯ 60 ಶಾಖೆಗಳನ್ನು ಬೇರ್ಪಡಿಸಿ ಕಲಬುರ್ಗಿ ಪ್ರಾದೇಶಿಕ ಕಚೇರಿಯಲ್ಲಿ ವಿಲೀನಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT