ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕ್ರೀಡಾಪಟುಗಳಿಗೆ ಅವಕಾಶ ಕೈತಪ್ಪುವ ಆತಂಕ

ಕೊಕ್ಕೊ ಸ್ಪರ್ಧೆಗೆ ಆಯ್ಕೆ ಟ್ರಯಲ್ಸ್‌ ನಡೆಸಿದರೂ ತಂಡ ಪ್ರಕಟಿಸದ ಸಿಯುಕೆ
Published 23 ಡಿಸೆಂಬರ್ 2023, 5:26 IST
Last Updated 23 ಡಿಸೆಂಬರ್ 2023, 5:26 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೊಕ್ಕೊ ತಂಡವು ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಡಿ.26ರಿಂದ ಮೂರು ದಿನಗಳ ಕಾಲ ಕೇರಳದ ಕ್ಯಾಲಿಕಟ್‌ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯದ ಕೊಕ್ಕೊ ಕ್ರೀಡಾಕೂಟ ನಡೆಯಲಿದೆ. ಈತನಕವೂ ಆಟಗಾರರ ಅಂತಿಮ ತಂಡವನ್ನು ಪ್ರಕಟಿಸದ ಕೇಂದ್ರೀಯ ವಿಶ್ವವಿದ್ಯಾಲಯದ ಕ್ರಮಕ್ಕೆ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಳೆದ ತಿಂಗಳು ಕಬಡ್ಡಿ ಕ್ರೀಡಾಕೂಟದ ವೇಳೆಯೂ ವಿಶ್ವವಿದ್ಯಾಲಯವು ತಂಡ ಪ್ರಕಟಿಸಲು ಮೀನಮೇಷ ಎಣಿಸಿತು. ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯಬೇಕಿದ್ದ ಕ್ರೀಡಾಕೂಟಕ್ಕೆ ಹಲವು ಸಮಜಾಯಿಷಿಗಳನ್ನು ನೀಡಿ ತಂಡವನ್ನೇ ಕಳುಹಿಸಲಿಲ್ಲ’ ಎಂದು ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ.

‘ಕೊಕ್ಕೊ ಕ್ರೀಡಾಕೂಟಕ್ಕೆ ಡಿಸೆಂಬರ್‌ 20ರಂದು ಆಯ್ಕೆ ಟ್ರಯಲ್ಸ್ ನಡೆಸಿದ್ದರೂ, ಈತನಕ ತಂಡದ ಸದಸ್ಯರ ಹೆಸರನ್ನು ಪ್ರಕಟಿಸಿಲ್ಲ. ಕೇಳಿದರೆ ಆಟದ ಗುಣಮಟ್ಟ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. 12 ಮಂದಿಯ ಕೊಕ್ಕೊ ತಂಡದಲ್ಲಿ ಆಡುವುದು 9 ಮಂದಿ. ಅದರಲ್ಲಿ 6 ಆಟಗಾರರಿಗೆ ಶಾಲೆ–ಕಾಲೇಜು ಹಂತದಲ್ಲಿ ರಾಜ್ಯಮಟ್ಟ ಹಾಗೂ ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಆಟವಾಡಿದ ಅನುಭವವಿದೆ’ ಎನ್ನುತ್ತಾರೆ ಕೊಕ್ಕೊ ಆಟಗಾರ ಜೆ.ತರುಣ್‌.

‘ಟ್ರಯಲ್ಸ್ ವೇಳೆ ಬೆನ್ನುತಟ್ಟಿದ್ದವರೇ ಕ್ರೀಡಾಕೂಟಕ್ಕೆ ಕಳುಹಿಸದಿರಲು ನಂತರ ಕೌಶಲವಿಲ್ಲ, ಸಾಕಷ್ಟು ಅಭ್ಯಾಸ ಮಾಡಿಲ್ಲ ಎನ್ನುತ್ತಿದ್ದಾರೆ. ವಿವಿಯಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲದಿದ್ದರೂ, ನಾವೆಲ್ಲ ಕೈ–ಕಾಲು ಗಾಯಮಾಡಿಕೊಂಡು ಅಭ್ಯಾಸ ನಡೆಸಿದ್ದೇವೆ. ಸ್ವಂತ ಖರ್ಚಿನಲ್ಲಿ ಹೋಗಲು ಸಿದ್ಧರಿದ್ದರೂ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅವಕಾಶವನ್ನೇ ನೀಡಿದಿದ್ದರೆ ನಮ್ಮ ಪ್ರತಿಭೆಯನ್ನು ತೇರಿಸುವುದಾದರೂ ಹೇಗೆ? ಒಂದು ವೇಳೆ ಆರ್ಥಿಕ ತೊಂದರೆ ಇದ್ದರೆ, ವಿ.ವಿಯ ಇತರ ಕ್ರೀಡೆಗಳ ತಂಡಗಳನ್ನು ಏಕೆ ಕಳುಹಿಸಿದ್ದಾರೆ? ಕೊಕ್ಕೊ ವಿಚಾರದಲ್ಲಿ ಮಾತ್ರ ಏಕೆ ತಾರತಮ್ಯ ಮಾಡಲಾಗುತ್ತಿದೆ’ ಎಂದು ಮತ್ತೊಬ್ಬ ಆಟಗಾರ ನವೀನ್ ಬಿ. ಪ್ರಶ್ನಿಸುತ್ತಾರೆ.

‘ಕಬಡ್ಡಿ ತಂಡ ಕಳುಹಿಸದಿರಲು ಆರ್ಥಿಕ ಕೊರತೆ ಎಂಬ ಮಾಹಿತಿ ದೊರೆತಿತ್ತು. ಆದರೆ, ಬಳಿಕ ಫುಟ್‌ಬಾಲ್‌, ವಾಲಿಬಾಲ್‌, ಬ್ಯಾಡ್ಮಿಂಟನ್‌ ತಂಡಗಳನ್ನು ಕ್ರೀಡಾಕೂಟಗಳಿಗೆ ಕಳುಹಿಸಿತು. ಇದನ್ನು ನೋಡಿದರೆ, ಎಸ್ಸಿ–ಎಸ್ಟಿ ಆಟಗಾರರೇ ಹೆಚ್ಚಾಗಿರುವ ಕಬಡ್ಡಿ ಹಾಗೂ ಕೊಕ್ಕೊ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸಿದೆ ವಿಶ್ವವಿದ್ಯಾಲಯ ಅನ್ಯಾಯ ಮಾಡುತ್ತಿರುವಂತೆ ಕಂಡುಬರುತ್ತಿದೆ’ ಎಂದು ವಿಶ್ವವಿದ್ಯಾಲಯದ ಅಂಬೇಡ್ಕರ್‌ ಸ್ಟೂಡೆಂಟ್ಸ್‌ ಅಸೋಸಿಯೇಷನ್‌ ಡಿ.14ರಂದು ಕುಲಸಚಿವರಿಗೆ ಪತ್ರ ಬರೆದಿತ್ತು.

ಕೊಕ್ಕೊ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸದಿರುವುದನ್ನು ಪ್ರಶ್ನಿಸಿ ಡಿ. 21ರಂದು ಕ್ರೀಡಾಪಟುಗಳು ಕುಲಸಚಿವರಿಗೆ ಸಲ್ಲಿಸಿದ ಮನವಿಗೂ ವಿಶ್ವವಿದ್ಯಾಲಯ ಇನ್ನೂ ಸಮರ್ಪಕ ಕಾರಣ ನೀಡಿಲ್ಲ ಎಂದು ಕ್ರೀಡಾಪಟುಗಳು ದೂರಿದ್ದಾರೆ.

ಕೊಕ್ಕೊ ತಂಡದ ಪ್ರದರ್ಶನ ನಿಗದಿತ ಮಾನದಂಡಗಳಿಗೆ ಅನುಗುಣವಾಗಿರದ ಕಾರಣ ಆಯ್ಕೆ ಸಮಿತಿಯು ಅವರನ್ನು ಕ್ರೀಡಾಕೂಟಕ್ಕೆ ಕಳುಹಿಸದಿರಲು ನಿರ್ಧರಿಸಿದೆ

-ಸಾಯಿ ಅಭಿನವ ಕ್ರೀಡಾಸಂಯೋಜಕ ಸಿಯುಕೆ

12 ಜನರ ತಂಡದ ಆಯ್ಕೆಗೆ ಬೆಳಿಗ್ಗೆ 17 ಆಟಗಾರರು ಬಂದಿದ್ದರು. ಆ ಪೈಕಿ 14 ಆಟಗಾರರಷ್ಟೇ ಸಂಜೆಯ ಆಯ್ಕೆ ಟ್ರಯಲ್ಸ್‌ಗೆ ಬಂದಿದ್ದರು. ಮೂರ್ನಾಲ್ಕು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರ ಪ್ರದರ್ಶನ ಚೆನ್ನಾಗಿರಲಿಲ್ಲ.

-ಮಲ್ಲಪ್ಪ ಪಸೋಡಿ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಸಿಯುಕೆ

ಕೊಕ್ಕೊ ತಂಡದ ಗುಣಮಟ್ಟದ ಕುರಿತು ಆಯ್ಕೆ ಸಮಿತಿ ನೀಡಿದ ಶಿಫಾರಸಿನ ಆಧಾರದಲ್ಲಿ ದಕ್ಷಿಣ ವಲಯ ಅಂತರ ವಿವಿ. ಕ್ರೀಡಾಕೂಟಕ್ಕೆ ಕಳುಹಿಸಿಲ್ಲ

-ಆರ್‌.ಆರ್‌.ಬಿರಾದಾರ ಕುಲಸಚಿವ ಸಿಯುಕೆ

‘ಎಲ್ಲ ವಿದ್ಯಾರ್ಥಿಗಳೂ ಒಂದೇ...’

‘ಎಸ್ಸಿ ಎಸ್ಟಿ ಕ್ರೀಡಾಪಟುಗಳನ್ನು ನಿರ್ಲಕ್ಷ್ಯಿಸಲಾಗುತ್ತಿದೆ’ ಎಂಬ ಆರೋಪಕ್ಕೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಯುಕೆ ಕುಲಸಚಿವ ಆರ್‌.ಆರ್‌.ಬಿರಾದಾರ ‘ಕ್ರೀಡಾಪಟುಗಳ ಜಾತಿ ಸಮುದಾಯವನ್ನು ನೋಡಿ ನಾವು ಯಾವುದೇ ತಂಡವನ್ನು ಕ್ರೀಡಾಕೂಟಕ್ಕೆ ಕಳುಹಿಸುವುದಿಲ್ಲ. ಅವಕಾಶ ಸಿಗದಿದ್ದಾಗ ವಿದ್ಯಾರ್ಥಿಗಳು ಹೀಗೆ ಭಾವಿಸುವುದು ಸರಿಯಲ್ಲ. ವಿಶ್ವವಿದ್ಯಾಲಯದ ಇತರ ಕ್ರೀಡಾ ತಂಡಗಳಲ್ಲಿ ಬೇರೆ ಬೇರೆ ಸಮುದಾಯದವರು ಇದ್ದಾರೆ ಎಂಬುದು ನಮ್ಮ ಭಾವನೆ. ನಮಗೆ ಎಲ್ಲ ವಿದ್ಯಾರ್ಥಿಗಳೂ ಒಂದೇ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT