ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಾನೂನು ಅರಿವಿನಿಂದ ದೌರ್ಜನ್ಯ ಪ್ರಕರಣಗಳು ಇಳಿಕೆ’

ಪ್ರಗತಿ ಪರಿಶೀಲನಾ ಸಭೆ: ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ
Published 27 ಜೂನ್ 2024, 4:46 IST
Last Updated 27 ಜೂನ್ 2024, 4:46 IST
ಅಕ್ಷರ ಗಾತ್ರ

ಕಲಬುರಗಿ: ‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾಗಳು ರೂಪಿಸಿರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರೆ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಶೇ 50ರಷ್ಟು ಅಪರಾಧ ಪ್ರಕರಣಗಳನ್ನು ತಡೆಗಟ್ಟಬಹುದು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಮಹಿಳೆಯರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ದೌರ್ಜನ್ಯ ಪ್ರಕರಣಗಳನ್ನು ಕಡಿಮೆಗೊಳಿಸಲು ತಿಳಿವಳಿಕೆಯೇ ಪ್ರಾಥಮಿಕ ಅಸ್ತ್ರವಾಗಿದೆ. ಪೋಕ್ಸೊ, ದೌರ್ಜನ್ಯ ತಡೆ, ಬಾಲ್ಯ ವಿವಾಹ ನಿಷೇಧ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಶಾಲೆ, ಕಾಲೇಜು ಹಾಗೂ ವಸತಿ ನಿಲಯಗಳಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಆಯೋಜಿಸಬೇಕು’ ಎಂದರು.

‘ಮಹಿಳೆಯರು ದೂರು ನೀಡಲು ಪೊಲೀಸ್ ಠಾಣೆಗೆ ಬಂದರೆ ಪೊಲೀಸರಿಂದ ಸ್ಪಂದನೆ ಸಿಗುತ್ತಿಲ್ಲ. ಸರಿಯಾಗಿ ವರ್ತಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ದೌರ್ಜನ್ಯ ತಡೆಗೆ ಪೊಲೀಸರೇ ಮಹಿಳಾ ಆಯೋಗಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ಹೀಗಾಗಿ, ಮಹಿಳಾ ಸ್ನೇಹಿ ಪೊಲೀಸ್ ವ್ಯವಸ್ಥೆ ತಂದು, ಸಿಬ್ಬಂದಿಗೆ ಲಿಂಗ‌ಸಂವೇದನೆಯ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಅಧ್ಯಕ್ಷರಾಗಿದ್ದರೂ ಅವರ ಪತಿಯರೇ ಆಡಳಿತ ವಿಚಾರಗಳಲ್ಲಿ ಭಾಗಿಯಾಗುತ್ತಿದ್ದಾರೆ. ಗೊಬ್ಬುರು (ಬಿ) ಗ್ರಾಮಕ್ಕೆ ಭೇಟಿ ನೀಡಿದಾಗ, ಮಹಿಳಾ ಅಧ್ಯಕ್ಷೆಗೆ ಏನೂ ಗೊತ್ತಿರಲಿಲ್ಲ. ಪಿಡಿಒ ಸಹ ಮಾತಾಡಲು ಹೆದರುತ್ತಿದ್ದರು. ಮಹಿಳೆಯರ ಪತ್ನಿಯರೇ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ಸಭೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರು, ಸರ್ಕಾರಿ ಸಭೆ, ಸಮಾರಂಭಗಳಿಗೆ ತಮ್ಮ ಪತಿಯನ್ನು ಆಹ್ವಾನಿಸದಂತೆ ಮಹಿಳಾ ಜನಪ್ರತಿನಿಧಿಗಳಿಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎಸ್‌.ಪಿ ಅಕ್ಷಯ್ ಹಾಕೈ ಮಾತನಾಡಿ, ‘ಪ್ರತಿ ಠಾಣೆಯಲ್ಲಿ ಮಹಿಳಾ ಡೆಸ್ಕ್ ಸ್ಥಾಪಿಸಲಾಗಿದೆ. 6 ತಿಂಗಳಲ್ಲಿ 40 ಮಹಿಳೆಯರು ಹಾಗೂ 22 ಬಾಲಕಿಯರು ಸೇರಿ ಒಟ್ಟು 62 ನಾಪತ್ತೆ ಪ್ರಕರಣಗಳು ದಾಖಲಾಗಿವೆ. 21 ಬಾಲಕಿಯರು ಹಾಗೂ 25 ಮಹಿಳೆಯರನ್ನು ಪತ್ತೆಹಚ್ಚಲಾಗಿದೆ. ಉಳಿದ ಪ್ರಕರಣಗಳು ತನಿಖಾ ಹಂತದಲ್ಲಿವೆ. 9 ಅತ್ಯಾಚಾರ ಪ್ರಕರಣಗಳ ಪೈಕಿ 7ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ’ ಎಂದರು.

ವರದಿ ನೀಡದ ಅಧಿಕಾರಿಗಳು: ಮಹಿಳೆಯರಿಗೆ ಸಂಬಂಧಿಸಿದ ಎಲ್ಲ ತರಹದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾಗಿ ಹೇಳಿಕೊಂಡ ಅಧಿಕಾರಿಗಳು, ಆದರೆ ಅಂಕಿಅಂಶಗಳನ್ನು ನೀಡಲು ತಡಬಡಾಯಿಸಿದರು.

ಸಭೆಯಲ್ಲಿ ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್‌ಪಿ ಶ್ರೀನಿಧಿ, ಎಸಿಪಿ ಬಿಂದುಮಣಿ ಡಿಸಿಪಿಒ ಮಂಗಲಾ ಪಾಟೀಲ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಾಲೆಗಳಲ್ಲಿ ಲಿಂಗಾನುಪಾತ ಅರಿವು:

ಅಧ್ಯಕ್ಷೆ ಅಚ್ಚರಿ ‘ಜಿಲ್ಲೆಯಲ್ಲಿ 1000 ಗಂಡು ಮಕ್ಕಳಿಗೆ 943ರಷ್ಟು ಹೆಣ್ಣು ಮಕ್ಕಳ ಲಿಂಗಾನುಪಾತವಿದೆ. 2 ಗರ್ಭಪಾತ ಪ್ರಕರಣಗಳ ಚಾರ್ಚ್‌ಶೀಟ್ ಆಗಿದೆ. 153 ಸ್ಕ್ಯಾನಿಂಗ್‌ ಕೇಂದ್ರಗಳ ತಪಾಸಣೆ ಮಾಡಲಾಗುತ್ತಿದೆ’ ಎಂದು ಪ್ರಭಾರಿ ಡಿಎಚ್ಒ ಡಾ.ಸುರೇಶ ಮೇಕಿನ್ ತಿಳಿಸಿದರು. ಲಿಂಗಾನುಪಾತ ಸುಧಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವಿನ್ ಯು. ಅವರಿಗೆ ಪ್ರಶ್ನಿಸಿದರು. ನವಿನ್ ಅವರು ‘ಲಿಂಗಾನುಪಾತ ಸುಧಾರಣೆಗೆ ಶಾಲೆಗಳಲ್ಲಿ ಅರಿವು ಕಾರ್ಯಕ್ರಮಗಳು ನಡೆಸಲಾಗುತ್ತಿದೆ’ ಎನ್ನುತ್ತಿದ್ದಂತೆ ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದರು. ‘ಕಳಪೆ ಮೊಟ್ಟೆ ವಿತರಣೆ ಸ್ಯಾನಿಟರಿ ಪ್ಯಾಡ್‌ಗಳ ಅಸಮರ್ಪಕ ಬಳಕೆಯ ಸಂಬಂಧ ಸಾಕಷ್ಟು ದೂರುಗಳು ಬಂದಿವೆ. ಈ ಸಂಬಂಧ ಮುಖ್ಯಮಂತ್ರಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರ‌ ಗಮನಕ್ಕೆ ತರುತ್ತೇನೆ’ ಎಂದು ಡಾ.ನಾಗಲಕ್ಷ್ಮಿ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ತಿನ್ನಲು ಯೋಗ್ಯವಲ್ಲದ ಉಪ್ಪಿಟು’

‘ಪಾಣೆಗಾಂವ ಮತ್ತು ಪಾಣೆಗಾಂವ ತಾಂಡಾದ ಅಂಗನವಾಡಿಗಳಿಗೆ ಭೇಟಿ ನೀಡಿದಾಗ ತಿನ್ನಲು ಯೋಗ್ಯವಲ್ಲದ ಉಪ್ಪಿಟು ತಯಾರಿಸಲಾಗಿತ್ತು. ದೊಡ್ಡವರೇ ತಿಂದು ಅರಗಿಸಿಕೊಳ್ಳಲು ಆಗದ್ದನ್ನು ಮಕ್ಕಳು ನಿತ್ಯ ಹೇಗೆ ತಿನ್ನುತ್ತಾರೆ’ ಎಂದು ಡಾ.ನಾಗಲಕ್ಷ್ಮಿ ಚೌಧರಿ ಬೇಸರ ವ್ಯಕ್ತಪಡಿಸಿದರು. ‘ಅಂಗನವಾಡಿಗೆ ವರ್ಷದಿಂದ ವಿದ್ಯುತ್ ಇಲ್ಲದಿರುವುದು ಪಿಡಿಒ ಜೆಸ್ಕಾಂ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೂ ಬಂದಿರಲಿಲ್ಲ. 40 ಡಿಗ್ರಿ ಸೆಲ್ಸಿಯಸ್ ಸೆಕೆಯಲ್ಲಿ ಮಕ್ಕಳು ಕೂರುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು. ‘ಸಭೆಯಲ್ಲಿ ಮಾತ್ರ ಎಲ್ಲವೂ ಮಾಡಿದ್ದೇವೆ ಎಂದರೆ ಸಾಲದು. ನೀವು ಮಾಡಿದ ಕೆಲಸಗಳ ಬಗ್ಗೆ ಜನರು ಮಾತಾಡಬೇಕು. ಗೊಬ್ಬುರ ಗ್ರಾಮದಲ್ಲಿನ ಆರೋಗ್ಯ ಶಿಬಿರಕ್ಕೆ ಬಂದಿದ್ದ ಹಲವು ಮಹಿಳೆಯರು ತಮಗೆ ತಲುಪದ ಯೋಜನೆಗಳ ಬಗ್ಗೆ ನನ್ನ ಗಮನಕ್ಕೆ ತಂದಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT