ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಪ್ರಜ್ಞೆ ಮೂಡಿಸಿದ ಶರಣರು: ಸಾಹಿತಿ ಡಾ. ಶ್ರೀಶೈಲ ನಾಗರಾಳ

ಕಾಯಕದ ಶರಣರು; ವಚನ ಚಳವಳಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ
Last Updated 31 ಮಾರ್ಚ್ 2021, 3:17 IST
ಅಕ್ಷರ ಗಾತ್ರ

ಕಲಬುರ್ಗಿ: ‘ಶರಣರ ಮಾನವೀಯ ಚಿಂತನೆ, ವೈಚಾರಿಕ ವಿಚಾರಗಳು, ಕಾಯಕ ಪ್ರಜ್ಞೆಯನ್ನು ಮೂಡಿಸಿದರು. ಬಸವಣ್ಣನ ವ್ಯಕ್ತಿತ್ವ, ಶಿವಭಕ್ತಿ ಸಾರುವುದರಲ್ಲಿ ನಿಸ್ಸೀಮರು. ಕಾಯಕ ಚಳವಳಿಗೆ ಬಸವಣ್ಣನೇ ನಾಯಕ’ ಎಂದು ಸಾಹಿತಿ ಡಾ. ಶ್ರೀಶೈಲ ನಾಗರಾಳ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಮಂಗಳವಾರ ಕಾಯಕ ಶರಣರ ಜಯಂತ್ಯುತ್ಸವ ನಿಮಿತ್ತ ಕಾಯಕದ ಶರಣರು: ವಚನ ಚಳವಳಿ’ ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದ ಗೋಷ್ಠಿಯಲ್ಲಿ ಅವರು ಬಸವಣ್ಣ ಕಂಡ ಕಾಯಕದ ಶರಣರು ಕುರಿತು ಮಾತನಾಡಿದರು.

‘ಕಾಯಕ ವರ್ಗದ ಜನರಿಗೆ ರಾಜ್ಯವ್ಯವಸ್ಥೆಯ ಪುರೋಹಿತ ವ್ಯವಸ್ಥೆಯ ವಿರುದ್ಧ ಹೋರಾಡೋಣವೆಂದು ಆಗ ಶರಣರು ಬಸವಣ್ಣನ ಹೆಗಲಿಗೆ ಹೆಗಲು ಕೊಟ್ಟ ಸಹಕರಿಸಿದರು. ಜನರಿಗೆ ತಿಳಿವಳಿಕೆ ನೀಡುವ ಹಿನ್ನೆಲೆಯಲ್ಲಿ ಕಾಯಕ ವೃತ್ತಿ ಗೌರವ ತರಬೇಕೆಂದುಕೊಂಡು ವಿಶ್ವಾಸಕ್ಕೆ ತೆಗೆದುಕೊಂಡರು. ಎಲ್ಲ ವರ್ಗದ ವಿಚಾರ ಚಿಂತನೆ, ಕಾಯಕ ಜೀವಿಗಳನ್ನು ಗುರುತಿಸಿ ಅವರ ವಿಚಾರಗಳಿಗೆ ಮುನ್ನಣೆ ನೀಡಿ ಪ್ರೋತ್ಸಾಹಿಸುವಂತಹ ಕೆಲಸ ಬಸವಣ್ಣ ಮಾಡಿದ’ ಎಂದರು.

ಜೇಡರ ದಾಸಿಮಯ್ಯ ಮತ್ತು ಹಡಪದ ಅಪ್ಪಣ್ಣ ದಂಪತಿ ಕುರಿತು ಡಾ. ಬಿ.ಬಿ. ಪೂಜಾರ, 12ನೇ ಶತಮಾನದ ಶರಣರು ಕಾಯಕದಲ್ಲೇ ಸಂತೃಪ್ತಿ ಸಂತೋಷವನ್ನು ಕಂಡುಕೊಂಡಿದ್ದರು. ಕಾಯಕ ನಮ್ಮಲ್ಲಿರುವ ಅಧ್ಯಾತ್ಮ ಸಾಮಾಜಿಕ, ಸಾಂಸ್ಕೃತಿಕ ಚಿಂತನೆಗಳು ಪ್ರಭಾವ ಬೀರುತ್ತವೆ ಎಂದು ಹೇಳಿದರು.

ಡಾ. ಹಣಮಂತ ಮೇಲಕೇರಿ ಮತ್ತು ಡಾ. ಶೈಲಜಾ ಬಾಗೇವಾಡಿ ಪ್ರತಿಕ್ರಿಯೆ ನೀಡಿದರು.

ಡಾ. ಸೂರ್ಯಕಾಂತ ಸುಜ್ಯಾತ್ ಅವರು ಸಮಗಾರ ಹರಳಯ್ಯ ಮತ್ತು ಮಾದಾರ ಚನ್ನಯ್ಯನ ಕಾಯಕ ವಿಚಾರ ಚಿಂತನೆ ಪ್ರಾಮಾಣಿಕತೆ ನಿಷ್ಠೆಯನ್ನು ಕುರಿತು ಪ್ರಬಂಧ ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಕಲ್ಯಾಣರಾವ್ ಜಿ. ಪಾಟೀಲ ಆಯ್ದಕ್ಕಿ ಮಾರಯ್ಯ ಮತ್ತು ಮೋಳಿಗೆ ಮಾರಯ್ಯ ದಂಪತಿಯ ಕಾಯಕ ಪ್ರಜ್ಞೆಯನ್ನು ವೈಚಾರಿಕ ಚಿಂತನೆಯನ್ನು ದಾಸೋಹ ಪರಿಕಲ್ಪನೆಯನ್ನು ವಿಶ್ಲೇಷಿಸಿದರು. ಡಾ. ಉಮಾದೇವಿ ಆರ್. ದಂಡೋತಿ ಪ್ರತಿಕ್ರಿಯೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ಈ ನಾಡಿನ ಬಹುದೊಡ್ಡ ಕೊಡುಗೆ ಎಂದರೆ ಹಲವಾರು ವಿದ್ವಾಂಸರನ್ನು ಬೆಳೆಸಿದೆ. ಹಲವಾರು ಸಂಶೋಧಕರನ್ನು ಹುಟ್ಟು ಹಾಕಿದ ಕೀರ್ತಿ ಇದಕ್ಕಿದೆ ಎಂದರು.

ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ಡಾ. ಟಿ.ಆರ್. ಗುರುಬಸಪ್ಪ ಮಾತನಾಡಿದರು.

ಡಾ. ಅನಿಲಕುಮಾರ ತೆಗ್ಗಿನಮನಿ ವಂದಿಸಿದರು. ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT