ಮಂಗಳವಾರ, ಫೆಬ್ರವರಿ 25, 2020
19 °C
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

ವಾಗ್ವಾದಕ್ಕೆ ಕಾರಣವಾದ ಅಕ್ರಮ ಮರಳು ದಂಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸುಮಾರು 15 ತಿಂಗಳ ಬಳಿಕ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಸಭೆಯಲ್ಲಿ ಅಕ್ರಮ ಮರಳು ದಂಧೆಯು ಶಾಸಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಮಧ್ಯೆ ವಾಗ್ವಾದ ನಡೆಯಿತು.

‘ನಮ್ಮ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಕಂದಾಯ, ಗಣಿ ಮತ್ತು ಭೂವಿಜ್ಞಾನ, ಪೊಲೀಸ್‌ ಹಾಗೂ ಆರ್‌ಟಿಒ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 925 ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ಆ ಬಳಿಕ ಯಾವ ದಾಳಿಗಳೂ ನಡೆದಿಲ್ಲ. ಮರಳು ಮಾಫಿಯಾದೊಂದಿಗೆ ಜಿಲ್ಲಾಡಳಿತ ಕೈಜೋಡಿಸಿದೆಯೇ’ ಎಂದು ಪ್ರಿಯಾಂಕ್‌ ಹೇಳಿದ್ದು ತೇಲ್ಕೂರ ಹಾಗೂ ಆಳಂದ ಶಾಸಕ ಸುಭಾಷ್‌ ಗುತ್ತೇದಾರ ಅವರನ್ನು ಕೆರಳಿಸಿತು. ಪ್ರಿಯಾಂಕ್‌ ಹಾಗೂ ತೇಲ್ಕೂರ ಇಬ್ಬರೂ ಎದ್ದು ನಿಂತು ಪರಸ್ಪರ ದೋಷಾರೋಪದಲ್ಲಿ ತೊಡಗಿದರು.

 ಆಗ ಇಬ್ಬರನ್ನೂ ಕುಳಿತುಕೊಳ್ಳುವಂತೆ ಸೂಚಿಸಿದ ಸಚಿವ ಕಾರಜೋಳ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. 

‘ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸಮನ್ವಯ ಸಾಧಿಸಿ ಮರಳು ಮಾಫಿಯಾಗೆ ಕಡಿವಾಣ ಹಾಕಬೇಕು. ಮರಳು ಅಕ್ರಮ‌ ಸಾಗಾಣಿಕೆ ಪ್ರಕರಣದಲ್ಲಿ ಜಪ್ತಿ ಮಾಡಿ ಸಂಗ್ರಹಿಸಿದ ಮರಳು ಕಾವಲಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಮತ್ತು ಸಾರ್ವಜನಿಕರಿಗೆ ಮರಳು ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಶರತ್ ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮರಳು ಪಡೆಯಲು 14 ಮರಳು ಬ್ಲಾಕ್ ಗಳಿಗೆ ಈಗಾಗಲೇ ಇ-ಟೆಂಡರ್ ಆಗಿದೆ. ಆದರೆ ಹೆಚ್ಚಿನ ದರಕ್ಕೆ ಬಿಡ್ ಮಾಡಿದ್ದರಿಂದ ಆ ದರಕ್ಕೆ ಮರಳು ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ರಾಯಚೂರು ಜಿಲ್ಲೆಯಲ್ಲಿ ಕಡಿಮೆ ದರದಲ್ಲಿ ಮರಳು ಸಿಗುವುದರಿಂದ ಅಲ್ಲಿಂದಲೇ ತರಿಸುತ್ತಾರೆ. ಆದಾಗ್ಯೂ, ಮರಳು ದಂಧೆ ತಡೆಯಲು ಅಧಿಕಾರಿಗಳ ತಂಡ ರಚಿಸಿ ಖುದ್ದು ನಿಗಾ ವಹಿಸುವೆ’ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿಗೆ ತರಾಟೆ: ಜಿಲ್ಲೆಯಲ್ಲಿರುವ ಎಆರ್‌ಟಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಾಧವರಾವ್‌ ಪಾಟೀಲ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

‘ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಿ? ನಿಮ್ಮ ಇಲಾಖೆಯ ಬಗ್ಗೆ ಮಾಹಿತಿಯೇ ಇಲ್ಲ ಎಂದರೆ ಹೇಗೆ? ನಾನೇನೋ ಕೇಳುತ್ತಿದ್ದೇನೆ. ನೀವೇನೋ ಕೇಳುತ್ತಿದ್ದೀರಿ. ಕೆಲಸ ಮಾಡದಿದ್ದರೆ ಈ ಸ್ಥಾನದಲ್ಲಿ ಮುಂದುವರಿಯುವ ಅಗತ್ಯವಿಲ್ಲ’ ಎಂದು ತಾಕೀತು ಮಾಡಿದರು.

ವಾಡಿ ಪಟ್ಟಣದಲ್ಲಿ ಹಾವು ಕಚ್ಚಿ ಸಕಾಲಕ್ಕೆ ಔಷಧಿ ಸಿಗದೇ ಬಾಲಕಿಯೊಬ್ಬಳು ಸಾವಿಗೀಡಾದ ವಿಚಾರವನ್ನು ಶಾಸಕ ಪ್ರಿಯಾಂಕ್‌ ಸಭೆಯ ಗಮನಕ್ಕೆ ತಂದರು. ದಾಖಲೆಯಲ್ಲಿ ಔಷಧಿ ಇದೆ ಎಂದು ತೋರಿಸಿ ಅಲ್ಲಿ ಇಲ್ಲ ಎಂದರೆ ಹೇಗೆ? ಅಂದು ಡ್ಯೂಟಿಯಲ್ಲಿದ್ದ ವೈದ್ಯರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಿ ಎಂದು ಡಿಸಿಎಂ ಆದೇಶಿಸಿದರು.

ಆಟೊ ಚಾಲಕರ ವಿರುದ್ಧ ಕ್ರಮ: ನಗರ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗೆ ಆರಕ್ಕಿಂತ ಹೆಚ್ಚು ಮಕ್ಕಳನ್ನು ಕರದೊಯ್ಯಬಾರದು ಎಂಬುದು ನಿಯಮವಿದೆ. ಆದರೂ, ಕಿಕ್ಕಿರಿದು ತುಂಬಿಸಿಕೊಂಡು ಹೋಗುವ ಬಗ್ಗೆ ದೂರುಗಳಿವೆ. ಕೂಡಲೇ ಖಾಸಗಿ ಶಾಲಾ ಆಡಳಿತ ಮಂಡಳಿ ಹಾಗೂ ಆಟೊ ಸಂಘಟನೆಗಳ ಸಭೆ ಕರೆದು ಈ ಬಗ್ಗೆ ತಾಕೀತು ಮಾಡಿ ಎಂದು ಸಚಿವರು ಡಿಡಿಪಿಐ ಶಾಂತಗೌಡ ಅವರಿಗೆ ನಿರ್ದೇಶನ ಮಾಡಿದರು.

ಸೂಚನೆ ನೀಡಿದ ಬಳಿಕವೂ ಅತ್ಯಧಿಕ ಮಕ್ಕಳನ್ನು ಕರೆದೊಯ್ಯುವುದು ಮುಂದುವರಿದರೆ ಶಾಲಾ ಆಡಳಿತ ಮಂಡಳಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೇ ಹಾಳಾಗಿವೆ ಎಂದು ಹಲವು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿ.ಪಂ. ಸಿಇಒ ಡಾ.ರಾಜಾ ಪಿ, ‘ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವಿವಿಧ ಇಲಾಖೆಗಳು ಅಳವಡಿಸಿವೆ. ಎಲ್ಲವುಗಳನ್ನೂ ಈ ತಿಂಗಳಾಂತ್ಯದಲ್ಲಿ ಗ್ರಾಮೀಣ ಕುಡಿಯುವ ನೀರಿ ವಿಭಾಗದ ವ್ಯಾಪ್ತಿಗೆ ಪಡೆದು ದುರಸ್ತಿ ಮಾಡಿಸಿ ನಿರ್ವಹಣೆ ಮಾಡಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಶಾಸಕರಾದ ಬಸವರಾಜ ಮತ್ತಿಮೂಡ, ಬಿ.ಜಿ.ಪಾಟೀಲ ಇದ್ದರು. 

 

ಬಾಕ್ಸ್‌...1

ಕಾಳಗಿ ಸೇರ್ಪಡೆಗೆ ತಡೆ

ಇಲ್ಲಿಯವರೆಗೆ ಲೋಕೋಪಯೋಗಿ ಇಲಾಖೆಯ ಸೇಡಂ ಉಪವಿಭಾಗದಲ್ಲಿದ್ದ ಕಾಳಗಿ ತಾಲ್ಲೂಕನ್ನು ಏಕಾಏಕಿ ಕಲಬುರ್ಗಿ ಉಪವಿಭಾಗಕ್ಕೆ ಸೇರಿಸಿದ ಬಗ್ಗೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಚಿವರ ಗಮನಕ್ಕೆ ತಂದರು. ಕೂಡಲೇ ಇಲಾಖೆಯ ಕಾರ್ಯದರ್ಶಿ ಅವರಿಗೆ ಕರೆ ಮಾಡಿದ ಸಚಿವ ಕಾರಜೋಳ, ಈ ಪ್ರಕ್ರಿಯೆಗಳನ್ನು ಕೂಡಲೇ ನಿಲ್ಲಿಸಿ ಮತ್ತೊಮ್ಮೆ ತಮಗೆ ಪ್ರಸ್ತಾವ ಕಳಿಸುವಂತೆ ಸೂಚನೆ ನೀಡಿದರು.

 

ಬಾಕ್ಸ್‌...2

ಹಾಸ್ಟೆಲ್‌ ವಾರ್ಡನ್‌ ವರ್ಗಾವಣೆಗೆ ಸೂಚನೆ

ಆಳಂದ ತಾಲ್ಲೂಕಿನ ಬಾಲಕಿಯರ ಹಾಸ್ಟೆಲ್‌ನಲ್ಲಿ ಸರಿಯಾಗಿ ಊಟ ಕೊಡುವುದಿಲ್ಲ. ಬರೀ 17 ವಿದ್ಯಾರ್ಥಿನಿಯರು ಇದ್ದರೂ 50 ಜನ ಇದ್ದಾರೆ ಎಂದು ಖೊಟ್ಟಿ ದಾಖಲೆ ಸೃಷ್ಟಿಸಿ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆಳಂದ ಶಾಸಕ ಸುಭಾಷ್‌ ಗುತ್ತೇದಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.

ಸಭೆಗೆ ಇಲಾಖೆ ವರದಿ ನೀಡುತ್ತಿದ್ದ ಇಲಾಖೆ ಜಂಟಿ ನಿರ್ದೇಶಕ ಸತೀಶ್‌ ಕೆ.ಎಚ್. ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಬಡ ಮಕ್ಕಳಿಗೂ ಊಟ ಹಾಕದಷ್ಟು ಇಲಾಖೆ ಬಡವಾಗಿದೆಯೇ? ಪರಿಶಿಷ್ಟ ಮಕ್ಕಳಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಕೂಡಲೇ ವಾರ್ಡನ್‌ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿರಿ ಎಂದು ಸೂಚಿಸಿದರು.

ಶಾಸಕರು ಹೇಳಿದ ಹಾಸ್ಟೆಲ್‌ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಸತೀಶ್‌ ಅವರಿಗೆ ನಿರ್ದೇಶನ ನೀಡಿದರು.

 

ಬಾಕ್ಸ್‌...3

‘ನಿಮ್ಮಂಥ ಗೌಡರೇ ಜಾಗ ಕೊಡಬೇಕು’

ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳನ್ನು ಆರಂಭಿಸಲು ಸರ್ಕಾರಿ ಜಾಗವೇ ಇಲ್ಲದಂತಾಗಿದೆ ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ ಸಚಿವರ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ‘ಸರ್ಕಾರಿ ಜಾಗ ಬಹುತೇಕ ಕಡೆ ಲಭ್ಯವಿರುವುದಿಲ್ಲ. ನಿಮ್ಮೂರಲ್ಲಿ ಶಾಲೆ ಬೇಕಾದರೆ ನಿಮ್ಮ ಜಮೀನು ಕೊಡಿ. ನಿಮ್ಮಂಥ ಗೌಡರು ಜಾಗವನ್ನು ದಾನ ಮಾಡಲು ಮುಂದಾದರೆ ಶಾಲೆಗಳನ್ನು ಆರಂಭಿಸಬಹುದು. ಇದರಿಂದ ನಿಮ್ಮ ಹೆಸರೂ ಉಳೀತದ. ಸ್ವಲ್ಪ ದೊಡ್ಡ ಮನಸು ಮಾಡಬೇಕು ಗೌಡ್ರೆ’ ಎಂದು ಚಟಾಕಿ ಹಾರಿಸಿದರು.

 

ಬಾಕ್ಸ್‌...4

ಅಜಯ್‌ ಸಿಂಗ್, ಪಾಟೀಲ ಗೈರು

ವರ್ಷದ ಬಳಿಕ ನಡೆದ ಕೆಡಿಪಿ ಸಭೆಯಲ್ಲಿ ಜೇವರ್ಗಿ ಶಾಸಕ ಡಾ.ಅಜಯ್‌ ಸಿಂಗ್‌, ಕಲಬುರ್ಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಗೈರು ಹಾಜರಾಗಿದ್ದರು.

**

ಡಿಸಿಸಿ ಬ್ಯಾಂಕ್ ಸೂಪರ್‌ ಸೀಡ್: ತನಿಖಾ ವರದಿಗೆ ನಿರ್ದೇಶನ

ಅವ್ಯವಹಾರ, ಅಧಿಕಾರ ದುರುಪಯೋಗ, ನಿಯಮಗಳ ಉಲ್ಲಂಘನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಸೂಪರ್‌ ಸೀಡ್‌ಗೊಳಿಸುವ ನಿಟ್ಟಿನಲ್ಲಿ ಮುಂದಿನ 15 ದಿನಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಗೋವಿಂದ ಕಾರಜೋಳ ಸಹಕಾರಿ ಇಲಾಖೆಯ  ಉಪನಿಬಂಧಕರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ 2.20 ಲಕ್ಷ ರೈತರ ಪೈಕಿ ಕೇವಲ 50 ಸಾವಿರ ರೈತರಿಗೆ ಮಾತ್ರ ಸಾಲ ವಿತರಣೆಯಾಗಿದೆ. ಬೆಳೆಸಾಲದ ಬದಲು ಟ್ರ್ಯಾಕ್ಟರ್‌, ನೀರಾವರಿಗೆ ಹೆಚ್ಚಿನ ಪ್ರಮಾಣದ ಸಾಲ ನೀಡುವ ಮೂಲಕ ಬ್ಯಾಂಕ್‌ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಬಾಗಲಕೋಟೆ, ವಿಜಯಪುರದ ಡಿಸಿಸಿ ಬ್ಯಾಂಕ್‌ಗಳು ಹಾಗೂ ಗ್ರಾಮಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೋಟ್ಯಂತರ ರೂಪಾಯಿ ಸಾಲ ನೀಡಿ ವಸೂಲಿಯನ್ನು ಮಾಡಿ, ಲಾಭ ಮಾಡುತ್ತಿವೆ. ಆದರೆ, ಇಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಬ್ಯಾಂಕ್ ಅನ್ನು ಕೆಲವರು ಸ್ವಂತದ್ದೆಂದು ಭಾವಿಸಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸೂಪರ್‌ಸೀಡ್‌ ಮಾಡಬೇಕು ಎಂದು ಒತ್ತಾಯಿಸಿದರು.

ತನಿಖಾ ವರದಿ ಬಂದ ನಂತರವೇ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಕಾರಜೋಳ ಸ್ಪಷ್ಟಪಡಿಸಿದರು.

**

ನೀರಾವರಿ ಕಾಮಗಾರಿ ಮುಗಿಯುವುದು ಯಾವಾಗ?

‘ಮಲ್ಲಾಮಾರಿ, ಬಂಡೋರಿ ನಾಲಾ, ಅಮರ್ಜಾ, ಕಾರಂಜಾ ನೀರಾವರಿ ಯೋಜನೆಗಳ ಬಗ್ಗೆ 40 ವರ್ಷಗಳಿಂದ ಕೇಳುತ್ತಿದ್ದೇನೆ. ಆಗಿನಿಂದ ಕಾಮಗಾರಿಗಳು ನಡೆದೇ ಇವೆ. ಈಗಲೂ ಮುಗಿದಿಲ್ಲವೇ’ ಎಂದು ಕಾರಜೋಳ ಅವರು ಪ್ರಶ್ನಿಸಿದರು.

₹50ರಿಂದ ₹100 ಕೋಟಿಯಲ್ಲಿ ಮುಗಿಯಬೇಕಾಗಿದ್ದ ಯೋಜನೆಗಳಿಗೆ ಈಗ ₹500ರಿಂದ ₹600 ಕೋಟಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಮಲ್ಲಾಮಾರಿ ನೀರಾವರಿ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಗುತ್ತಿಗೆದಾರರಿಗೆ ಹಣ ಪಾವತಿ ಮಾಡದಂತೆ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಸೂಚನೆ ನೀಡಿದ್ದೆ. ಆದರೆ, ಸೂಚನೆಯನ್ನೂ ಮೀರಿ ಹಣ ಪಾವತಿ ಮಾಡಲಾಗಿದೆ’ ಎಂದರು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಕಾರಜೋಳ, ‘ಸಚಿವರ ಸೂಚನೆ ಮೀರಿ ಬಿಲ್‌ ಪಾವತಿ ಮಾಡಲು ಹೇಗೆ ಸಾಧ್ಯ. ಯಾರು ಮಾಡಿದ್ದು’ ಎಂದು ಪ್ರಶ್ನಿಸಿದರು. ಸಭೆಗೆ ಉತ್ತರಿಸಿದ ಅಧಿಕಾರಿ ‘ನಾನು ಕೆಲ ತಿಂಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಹಿಂದಿನ ಕಾರ್ಯನಿರ್ವಾಹಕ ಎಂಜಿನಿಯರ್ ಅವಧಿಯಲ್ಲೇ ಬಿಲ್‌ ಪಾವತಿಯಾಗಿದೆ. ಆದರೆ, ₹124 ಕೋಟಿ ಪೈಕಿ ₹65 ಕೋಟಿಯಷ್ಟು ಪಾವತಿಯಾಗಿದ್ದು, ಉಳಿದ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು.

 **

 

ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಮಾಹಿತಿಯನ್ನು ಶಾಸಕರ ಗಮನಕ್ಕೆ ತರಬೇಕು. ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಆಹ್ವಾನಿಸಬೇಕು

ಗೋವಿಂದ ಕಾರಜೋಳ

ಉಪಮುಖ್ಯಮಂತ್ರಿ

**

ವಿಧಾನಪರಿಷತ್‌ ಸದಸ್ಯನಾಗಿರುವ ನನಗೇ ನಮ್ಮೂರಿನ ಶಾಲೆಗೆ ಶಿಕ್ಷಕರನ್ನು ಹಾಕಿಸಿಕೊಳ್ಳಲು ಆಗಿಲ್ಲ. ಇದ್ದ ಶಿಕ್ಷಕರು ವರ್ಗಾವಣೆಯಾಗಿ ಹೋಗಿದ್ದಾರೆ. ನಮ್ಮ ಮಕ್ಕಳು ಶಿಕ್ಷಣ ಪಡೆಯುವುದು ಬೇಡವೇ?

ತಿಪ್ಪಣ್ಣಪ್ಪ ಕಮಕನೂರ

ವಿಧಾನಪರಿಷತ್ ಸದಸ್ಯ

**

ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಕ್ರಕಟ್ಟಾದಲ್ಲಿರುವ ಸರ್ಕಾರಿ ಶಾಲೆಗೆ ಶಾಸಕರ ನಿಧಿಯಿಂದ ₹80 ಲಕ್ಷ ಬಿಡುಗಡೆ ಮಾಡಿದ್ದೇನೆ. ಕೂಡಲೇ ಅಭಿವೃದ್ಧಿ ಆಗುವಂತೆ ನೋಡಿಕೊಳ್ಳಿ

ಕನೀಜ್ ಫಾತಿಮಾ

ಶಾಸಕಿ

**

ಕಲಬುರ್ಗಿ–ಬೀದರ್‌ ಹಾಲು ಒಕ್ಕೂಟದವರಿಗೆ ನಾನೂ ಎಮ್ಮೆ ಹಾಲನ್ನು ಪೂರೈಕೆ ಮಾಡುತ್ತೇನೆ. ಆದರೆ, ಅವರು ಅದನ್ನು ಆಕಳ ಹಾಲು ಎಂದು ದಾಖಲಿಸಿಕೊಳ್ಳುತ್ತಾರೆ

ಸುಭಾಷ್‌ ಗುತ್ತೇದಾರ

ಆಳಂದ ಶಾಸಕ

**

ಚಿಂಚೋಳಿ ತಾಲ್ಲೂಕಿನಲ್ಲಿ 90 ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದರು. ಆದರೆ, ಈಗ 40ಕ್ಕಿಂತ ಕಡಿಮೆ ಎನ್ನುತ್ತಿದ್ದಾರೆ. ಯಾವುದನ್ನು ನಂಬಬೇಕು

ಡಾ.ಅವಿನಾಶ್‌ ಜಾಧವ

ಚಿಂಚೋಳಿ ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು