ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆಯ ಫಲಿತಾಂಶದಲ್ಲಿನ ತಾಂತ್ರಿಕ ದೋಷ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಆತಂಕಕ್ಕೆ ಗುರಿ ಮಾಡಿತ್ತು.
ಪ್ರಾಧಿಕಾರವು ಆ.11ರ ರಾತ್ರಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಫಾರ್ಮಸಿ ಸೇರಿ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳ ಅಣಕ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಿತ್ತು.
‘ನೀಟ್ ಪರೀಕ್ಷೆಯಲ್ಲಿ ನನ್ನ ಮಗಳು 567 ಅಂಕಗಳಿಸಿ 50,991 ಶ್ರೇಯಾಂಕ ಗಳಿಸಿದ್ದಳು. 1.61 ಲಕ್ಷ ಶ್ರೇಯಾಂಕ ಗಳಿಸಿದ ವಿದ್ಯಾರ್ಥಿಯೊಬ್ಬರಿಗೆ ಮೆಡಿಕಲ್ ಸೀಟು ಹಂಚಿಕೆ ಆಗಿದ್ದು ಕಂಡು ಆತಂಕವಾಯಿತು. ದಾಖಲಾತಿ ಸಲ್ಲಿಕೆಯಲ್ಲಿ ಏನಾದರೂ ತಪ್ಪು ಮಾಹಿತಿ ನೀಡಿದ್ದನಾ ಎಂದು ಚಿಂತೆಗೀಡಾದೆ. ಸ್ನೇಹಿತರ ಮಗಳದ್ದು ಸೇರಿದಂತೆ ಹಲವರು ಇದೇ ರೀತಿ ಆಗಿದ್ದು ಗೊತ್ತಾಯಿತು. ಕೆಇಎ ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ. ಇದರಿಂದ ಮಗಳು ದುಃಖಿತಳಾದಳು’ ಎಂದು ಪೋಷಕ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ 371 (ಜೆ) ಅಡಿ ಮೀಸಲಾತಿ ಪಡೆಯುವ ವಿದ್ಯಾರ್ಥಿಗಳಲ್ಲಿ ಕೆಲವರು ಆನ್‌ಲೈನ್ ಮತ್ತೆ ಕೆಲವರು ಪ್ರಾಧಿಕಾರಕ್ಕೆ ಭೇಟಿ ನೀಡಿ, ಆರ್‌ಡಿ ಸಂಖ್ಯೆಯ ಪರಿಷ್ಕರಣೆ ಮಾಡಿದ್ದರು. ಕೆಲವರು ಪರಿಷ್ಕರಣೆ ಮಾಡಿಯೇ ಇಲ್ಲ. ಹೀಗಾಗಿ, ಅಣಕು ಸೀಟು ಹಂಚಿಕೆ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಕೊಪ್ಪಳ ಸೇರಿ ಇತರೆ ಜಿಲ್ಲೆಗಳಲ್ಲಿ ಕಡಿಮೆ ಅಂಕ ತೆಗೆದವರಿಗೆ ಮೆಡಿಕಲ್ ಸೀಟು ಹಂಚಿಕೆಯಾಗಿದ್ದು ಪ್ರಕಟವಾಗಿತ್ತು. ಹೆಚ್ಚು ಅಂಕಗಳಿಸಿದವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಅಣಕು ಸೀಟು ಹಂಚಿಕೆಯ ಫಲಿತಾಂಶದಲ್ಲಿನ ಗೊಂದಲವು ಪ್ರಾಧಿಕಾರದ ಗಮನಕ್ಕೆ ಬರುತ್ತಿದ್ದಂತೆ ಕೆಇಎ ತನ್ನ ಮೆಡಿಕಲ್ ವೆಬ್‌ಸೈಟ್ ಅನ್ನು ಸ್ಥಗಿತಗೊಳಿಸಿ, ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಪರಿಷ್ಕೃತ ಫಲಿತಾಂಶ ಪಟ್ಟಿ ನೀಡುವುದಾಗಿ ಪ್ರಕಟಣೆ ಹೊರಡಿಸಿತು.
‘ಆಗಸ್ಟ್ 11ರಂದು ಪ್ರಕಟಿಸಲಾದ ಅಣಕು ಫಲಿತಾಂಶ ಪಟ್ಟಿಯಲ್ಲಿ ಕೆಲವು ಅಭ್ಯರ್ಥಿಗಳ ಹೆಸರುಗಳು ತಾಂತ್ರಿಕ ಕಾರಣಗಳಿಂದ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಕಾರಣ ಸೀಟು ಹಂಚಿಕೆಯಲ್ಲಿ ಏರುಪೇರಾಗಿತ್ತು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆ ಫಲಿತಾಂಶದ ಪ್ರಕಟಣೆಯಲ್ಲಿ ಕಡಿಮೆ ಅಂಕ ಗಳಿಸಿದ್ದರೂ ಮೆಡಿಕಲ್ ಸೀಟ್ ಲಭ್ಯವಾಗಿದ್ದನ್ನು ಕಂಡು ಕೆಲವು ವಿದ್ಯಾರ್ಥಿಗಳು ಅಚ್ಚರಿ ಜತೆಗೆ ಸಂತಸವೂ ವ್ಯಕ್ತಪಡಿಸಿದರು. ತಮಗೆ ವೈದ್ಯಕೀಯ ಸೀಟು ಸಿಕ್ಕಿರುವುದಾಗಿ ಸ್ನೇಹಿತರು ಸಂಬಂಧಿಗಳಿಗೆ ಹಂಚಿಕೊಳ್ಳುವಲ್ಲಿ ನಿರತವಾದರು. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದು ಸಿಇಟಿಯಲ್ಲಿ 550ಕ್ಕೂ ಅಧಿಕ ಅಂಕಗಳಿಸಿದ್ದರೂ ಅಣಕು ಫಲಿತಾಂಶದಲ್ಲಿ ಸೀಟು ಹಂಚಿಕೆ ಆಗದಕ್ಕೆ ಹಲವು ವಿದ್ಯಾರ್ಥಿಗಳು ಬೇಸರಗೊಂಡು ಆತಂಕಕ್ಕೆ ಒಳಗಾಗಿದರು. ಮಕ್ಕಳಲ್ಲಿನ ಆತಂಕ ಕಂಡು ಪೋಷಕರು ದಿಗಿಲುಗೊಂಡು ಕೆಇಎ ಸಹಾಯವಾಣಿಗೆ ಕರೆ ಮಾಡಿದರು. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಧ್ಯಮಗಳ ಮೊರೆ ಹೋದರು. ಮಾಧ್ಯಮ ಪ್ರತಿನಿಧಿಗಳ ಮೂಲಕ ತಾಂತ್ರಿಕ ದೋಷ ತಿಳಿಯುತ್ತಿದ್ದಂತೆ ವೆಬ್‌ಸೈಟ್ ನಿಷ್ಕ್ರಿಯೆಗೊಳಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸುವ ಮೂಲಕ ತಪ್ಪು ತಿದ್ದಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.