ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕನ ಅಪಹರಣ: ಇಬ್ಬರ ಬಂಧನ

ಶಿಕ್ಷಕರ ಪುತ್ರನನ್ನು ಬಿಡಲು ₹ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು
Last Updated 6 ಜನವರಿ 2023, 16:30 IST
ಅಕ್ಷರ ಗಾತ್ರ

ಕಲಬುರಗಿ: ಶಾಲಾ ಬಾಲಕನ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಗುರುವಾರ ರಾತ್ರಿ ಬಂಧಿಸಿದ್ದಾರೆ.

ನಗರದ ಸಂತ್ರಾಸವಾಡಿ ನಿವಾಸಿಗಳಾದ ಅರುಣ ಭಜಂತ್ರಿ, ಲಕ್ಷ್ಮಣ ಭಜಂತ್ರಿ ಬಂಧಿತರು. ಕಳೆದ ಬುಧವಾರ ನಗರದ ಸಿದ್ದೇಶ್ವರ ಕಾಲೊನಿಯ ಸುದರ್ಶನ ಎಂಬ ಬಾಲಕ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಪಹರಣ ಮಾಡಲಾಗಿತ್ತು. ನಂತರ ಬಾಲಕನ ತಂದೆಯಾಗಿರುವ ಗುರುನಾಥ ರಾಠೋಡ ಅವರ ಬಳಿ ₹ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ಪೊಲೀಸರಿಗೆ ಮಾಹಿತಿ ನೀಡಿದರೆ ಮಗುವನ್ನು ಜೀವಂತವಾಗಿ ಬಿಡುವುದಿಲ್ಲ ಎಂದೂ ಬೆದರಿಕೆ ಹಾಕಿದ್ದರು. ಆದರೂ, ಬೆದರಿಕೆಗೆ ಬಗ್ಗದ ಗುರುನಾಥ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿ.ವಿ. ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಅರುಣ ಮುರಗುಂಡಿ ನೇತೃತ್ವದ ತಂಡವು ಸಾದಾ ಬಟ್ಟೆ ಧರಿಸಿಕೊಂಡು ಖಾಸಗಿ ವಾಹನಗಳಲ್ಲಿ ನಗರದ ಸುತ್ತಮುತ್ತ ಗಸ್ತು ಆರಂಭಿಸಿದ್ದರು. ಇತ್ತ ಗುರುನಾಥ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದು, ಹಣವನ್ನು ಎಲ್ಲಿಗೆ ಮುಟ್ಟಿಸಬೇಕು ಎಂದು ಹೇಳಿದ್ದರು. ಕಲಬುರಗಿ ತಾಲ್ಲೂಕಿನ ಪಾಳಾ ಬಳಿಯಿರುವ ಶಾಲೆಯೊಂದರಲ್ಲಿ ಹಣ ಇಟ್ಟು ಹೋಗಿ ಎಂದಿದ್ದರು. ಅಷ್ಟರೊಳಗಾಗಿ ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಸುದ್ದಿ ತಿಳಿದ ಅಪಹರಣಕಾರರು, ಬಾಲಕನನ್ನು ಬಿಟ್ಟು ಪರಾರಿಯಾಗಿದ್ದರು.

ಬಾಲಕ ಇರುವುದನ್ನು ನೋಡಿದ ರೈತ ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನನ್ನು ನೋಡಿ ಶಿಕ್ಷಕ ಗುರುನಾಥ ಅವರಿಗೆ ಕರೆ ಮಾಡಿ, ತಮ್ಮ ಮಗ ಇರುವ ಬಗ್ಗೆ ಹೇಳಿದ್ದರು. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು, ಬಾಲಕನನ್ನು ರಕ್ಷಿಸಿ, ಹೆತ್ತವರಿಗೆ ನೀಡಿದ್ದಾರೆ.

ಕಾರ್ಯಾಚರಣೆ ಹೇಗೆ?
ಬಾಲಕನನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರೂ ಪೊಲೀಸರು ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ಅವರ ಮೊಬೈಲ್‌ ಲೊಕೇಶನ್‌ಗಳನ್ನು ಹಿಂಬಾಲಿಸುತ್ತಿದ್ದು, ಅಂತಿಮವಾಗಿ ಕಲಬುರಗಿ ಹೊರವಲಯದಲ್ಲಿ ಓಡಾಡುತ್ತಿದ್ದ ಇಬ್ಬರನ್ನೂ ಬಂಧಿಸಿದೆವು ಎಂದು ವಿಶ್ವವಿದ್ಯಾಲಯ ಠಾಣೆ ಪಿಐ ಅರುಣ ಮುರಗುಂಡಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT