ಬುಧವಾರ, ಅಕ್ಟೋಬರ್ 20, 2021
24 °C
ಕೆಕೆಆರ್‌ಡಿಬಿ ಪೂರ್ಣ ಪ್ರಮಾಣದ ಕಾರ್ಯದರ್ಶಿಯಾಗಿ ವೆಂಕಟೇಶಕುಮಾರ್ ಅಧಿಕಾರ ಸ್ವೀಕಾರ

‘ಅನುದಾನ ಆಯಾ ವರ್ಷ ಖರ್ಚು ಮಾಡಲು ಯೋಜನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ವಾರ್ಷಿಕವಾಗಿ ಬರುತ್ತಿರುವ ಅನುದಾನವನ್ನು ಆಯಾ ವರ್ಷವೇ ಖರ್ಚು ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಿದ್ದೇನೆ. ಮಂಡಳಿಯ ಎಂಜಿನಿಯರಿಂಗ್ ವಿಭಾಗಕ್ಕೆ ಪೂರ್ಣ ಪ್ರಮಾಣದ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಮಂಡಳಿಯ ನೂತನ ಕಾರ್ಯದರ್ಶಿ ಆರ್‌. ವೆಂಕಟೇಶಕುಮಾರ್ ತಿಳಿಸಿದರು.

ಪೂರ್ಣ ಪ್ರಮಾಣದ ಕಾರ್ಯದರ್ಶಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ಹೀಗಾಗಿ, ಈ ಭಾಗದ ಸಮಸ್ಯೆಗಳ ಬಗ್ಗೆ ಮಾಹಿತಿ ಇದೆ. ಅಪೌಷ್ಟಿಕತೆ, ತಾಯಿ ಹಾಗೂ ಶಿಶು ಮರಣ, ಶೈಕ್ಷಣಿಕವಾಗಿ ಹಿಂದುಳಿದಿರುವುದು ಇವು ನಮ್ಮ ಮುಂದಿರುವ ಸವಾಲುಗಳು. ಇವುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಿದ್ದೇನೆ. ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದೇನೆ’ ಎಂದರು.

ಎಂಜಿನಿಯರ್‌ಗಳ ಭರ್ತಿ: ಕೆಕೆಆರ್‌ಡಿಬಿ ಎಂಜಿನಿಯರಿಂಗ್ ವಿಭಾಗದಲ್ಲಿ 46 ಮಂಜೂರಾದ ಹುದ್ದೆಗಳಿವೆ. ಅವುಗಳ ಪೈಕಿ ಎರಡು ಕಾರ್ಯನಿರ್ವಾಹಕ ಎಂಜಿನಿಯರ್‌,  ಒಂದು ಸೂಪರಿಂಟೆಂಡಿಂಗ್ ಹುದ್ದೆ ಖಾಲಿ ಇವೆ. 38 ಹುದ್ದೆಗಳಿಗೆ ನಿಯೋಜನೆ ಆಧಾರದ ಮೇಲೆ ಎಂಜಿನಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಅಷ್ಟೂ ಹುದ್ದೆಗಳನ್ನು ಭರ್ತಿ ಮಾಡಿಕೊಂಡರೆ ಮಂಡಳಿಯು ಪೂರ್ಣ ಪ್ರಮಾಣದಲ್ಲಿ ಹಾಗೂ ಸಮರ್ಥವಾಗಿ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ. ಹೀಗಾಗಿ ಶೀಘ್ರವೇ ಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಕುರಿತು ಪ್ರಸ್ತಾವ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿ ಮಾಡಿ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡುವಂತೆ ಕೋರುತ್ತೇನೆ’ ಎಂದು ಹೇಳಿದರು.

ಬೃಹತ್ ಯೋಜನೆಗಳಿಗೆ ನೆರವು: ‘ಕೆಕೆಆರ್‌ಡಿಬಿಯು ಜನೋಪಯೋಗಿಯಾದ ಬೃಹತ್ ಪ್ರಮಾಣದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ. ರಾಯಚೂರು ವಿಮಾನ ನಿಲ್ದಾಣಕ್ಕೆ ಮಂಡಳಿಯಿಂದಲೇ ₹ 40 ಕೋಟಿ ನೀಡುವಂತೆ ನಾನು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಮನವಿ ಮಾಡಿದ್ದೆ. ಅದಕ್ಕೆ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿ ಹಣ ಬಿಡುಗಡೆ ಮಾಡಿತ್ತು. ಅದರ ಜೊತೆಗೆ ₹ 10 ಕೋಟಿಯನ್ನು ಜಿಲ್ಲಾ ಖನಿಜ ನಿಧಿಯಿಂದ ಬಳಸಿಕೊಂಡು ಒಟ್ಟು ₹ 50 ಕೋಟಿ ಹಣ ಹೊಂದಿಸಿದ್ದರಿಂದ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ನೀಡಿತು. ಇಂತಹ ಪ್ರಮುಖ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಮಂಡಳಿ ಕೈಗೆತ್ತಿಕೊಳ್ಳಲಿದೆ’ ಎಂದರು.

‘ಸುಬೋಧ್ ಯಾದವ್ ಅವರು ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಕಲಬುರಗಿ ತಾಲ್ಲೂಕಿನ ಬೋಸಗಾ ಕೆರೆ ಹಾಗೂ ನಗರದಲ್ಲಿರುವ ಸುಮಾರು 72 ಕಲ್ಯಾಣಿಗಳನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಿದ್ದರು. ಆ ಸಂದರ್ಭದಲ್ಲಿ ನಾನು ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದೆ. ಅಗತ್ಯ ಮಾಹಿತಿಗಳನ್ನು ಅವರು ಕೇಳಿ ಪಡೆದಿದ್ದರು. ಆ ಯೋಜನೆಯನ್ನು ಮತ್ತೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ವೆಂಕಟೇಶಕುಮಾರ್ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು