ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ ಅನಾಹುತ ತಡೆಗೆ ಸಮನ್ವಯದಿಂದ ಶ್ರಮಿಸಿ: ಪ್ರಿಯಾಂಕ್ ಖರ್ಗೆ ಸೂಚನೆ

ಮುಂಗಾರು ಮಳೆ ಅವಧಿಯ ಪೂರ್ವಸಿದ್ಧತೆಯ ಪ್ರಗತಿ ಪರಿಶೀಲನಾ ಸಭೆ
Published 22 ಜೂನ್ 2024, 16:16 IST
Last Updated 22 ಜೂನ್ 2024, 16:16 IST
ಅಕ್ಷರ ಗಾತ್ರ

ಕಲಬುರಗಿ: ‘‍ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯಿಂದ ಎದುರಾಗಬಹುದಾದ ಸಂಭವನೀಯ ಸವಾಲುಗಳ ತಡೆಗೆ ಪರಿಹಾರ ರೂಪಿಸಿ, ಅನಾಹುತಗಳು ಆಗದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳೊಂದಿಗೆ ಸನ್ನದ್ಧರಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಹಾಗೂ ಪ್ರಸಕ್ತ ಸಾಲಿನ ಮುಂಗಾರು ಮಳೆ ಅವಧಿಯ ಪೂರ್ವಸಿದ್ಧತೆ ಮತ್ತು ಮುಂಜಾಗ್ರತೆ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ವರ್ಷ ತೀವ್ರ ಬರಗಾಲ ಇತ್ತು. ಈ ವರ್ಷ ಅದಕ್ಕೆ ತದ್ವಿರುದ್ಧವಾಗಿ ವ್ಯಾಪಕ ಮಳೆಯಾಗಿ ಅತಿವೃಷ್ಟಿಯಾಗುವ ಸಂಭವವಿದೆ. ಕಂದಾಯ, ಕೃಷಿ, ಅರಣ್ಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಜೆಸ್ಕಾಂ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು. ಒಂದು ವೇಳೆ ಮಳೆ ಹಾನಿಯ ಅನಾಹುತ ತಡೆಯುವಲ್ಲಿ ವಿಫಲವಾದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಜನರು ಸಹ ಕಲಬುರಗಿ ಕನೆಕ್ಟ್ ಮೂಲಕ ನೇರವಾಗಿ ನನಗೆ ದೂರು ಕೊಡುತ್ತಿದ್ದಾರೆ’ ಎಂದು ಎಚ್ಚರಿಸಿದರು.

‘ತೋಟಗಾರಿಕೆ ಬೆಳೆಗಳ ಪ್ರಮಾಣ ಇನ್ನಷ್ಟು ವಿಸ್ತರಣೆಯಾಗಬೇಕು. ಕೆಂಬಾಳೆ, ಕಲ್ಲಂಗಡಿ ಹಣ್ಣುಗಳನ್ನು ಸೂಪರ್ ಫುಡ್ ಬ್ರ್ಯಾಂಡ್‌ನಡಿ ಮಾರಾಟ ಮಾಡಬೇಕು. ರೈತರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಮೇವು ದಾಸ್ತಾನು, ಜಾನುವಾರುಗಳಿಗೆ ಲಸಿಕಾಕರಣ ಮಾಡಬೇಕು. ಗ್ರಾಮ ಪಂಚಾಯಿತಿಗಳ ಬಹುತೇಕರಿಗೆ ಕ್ಷೇತ್ರ ಪರೀಕ್ಷಾ ಕಿಟ್ (ಎಫ್‌ಟಿಕೆ) ಬಳಕೆ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ತರಬೇತಿ ಕೊಟ್ಟು, ಕಲುಷಿತ ನೀರಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು. ಮಳೆಗಾಲದಲ್ಲಿ ಕುಡಿಯುವ ನೀರಿನ ಮೂಲಗಳು ಕಲುಷಿತವಾಗದಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಶೇ 20ರಷ್ಟು ಹೆಚ್ಚಾಗಿದ್ದು, ರಾಜ್ಯದಲ್ಲೇ ಕಲಬುರಗಿ 4ನೇ ಸ್ಥಾನದಲ್ಲಿದೆ. ಡೆಂಗ್ಯೂ ಪ್ರಕರಣ ಏರಿಕೆಯಾಗುತ್ತಿದ್ದರೂ ಆರೋಗ್ಯ ಇಲಾಖೆ ಕೈಕಟ್ಟಿ ಕುಳಿತ್ತಿದೆಯಾ? ಪ್ರತಿ ಮಳೆಗಾಲದಲ್ಲಿ ಉದ್ಭವಿಸುವ ಡೆಂಗ್ಯೂ ವೈರಾಣು ನಿಯಂತ್ರಿಸುವಂತೆ ನಿಮ್ಮನ್ನು ಕರೆದು ತಿಳಿಹೇಳಬೇಕಾ’ ಎಂದು ಕೇಳಿ ಡಿಎಚ್‌ಒ ಅನುಪಸ್ಥಿತಿಯಲ್ಲಿ ಬಂದಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ‘ಕುಡಿಯುವ ನೀರು ಆಗಾಗ ತಪಾಸಣೆ‌ ಮಾಡಿ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಪ್ರೊಬೇಷನರ್ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಲಬುರಗಿಯಲ್ಲಿ ಶನಿವಾರ ನಡೆದ ಮುಂಗಾರು ಮಳೆ ಅವಧಿಯ ಪೂರ್ಣ ಸಿದ್ಧತೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಶನಿವಾರ ನಡೆದ ಮುಂಗಾರು ಮಳೆ ಅವಧಿಯ ಪೂರ್ಣ ಸಿದ್ಧತೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿದರು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ

‘ಕಳಪೆ ಬಿತ್ತನೆ ಬೀಜ ಮಾರಿದರೆ ಕ್ರಿಮಿನಲ್‌ ಕೇಸ್ ಹಾಕಿ’

‘ಕಳಪೆ ಬಿತ್ತನೆ ಬೀಜ ಜಿಲ್ಲೆಯಲ್ಲಿ ಪರವಾನಗಿ ಇಲ್ಲದ ಬೀಜಗಳು ಮಾರುವ ವರ್ತಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಬೇಕು. ಬಿತ್ತನೆ ಬೀಜಗಳಿಂದ ಸಂಭವಿಸಿದ ಹಾನಿಯನ್ನು ಮಾರಾಟಗಾರರಿಂದಲೇ ವಸೂಲಿ ಮಾಡಿಸಿ ರೈತರಿಗೆ ಕೊಡಿಸಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರಿಗೆ ಸೂಚಿಸಿದರು. ‘ಜಿಲ್ಲೆಯಲ್ಲಿ ಗೊಬ್ಬರ ಕೊರತೆ ಎದ್ದು ಕಾಣುತ್ತಿದೆ. ಇದು ಹೀಗೆಯೇ ಮುಂದುವರಿದರೆ ರೈತರು ನೆರೆಯ ರಾಜ್ಯ ಅಥವಾ ಕಾಳಸಂತೆಯಲ್ಲಿ ಹೆಚ್ಚಿನ ಹಣ ಕೊಟ್ಟ ಖರೀದಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು’ ಎಂದರು.

‘ಗೋರಿಗಳಂತಹ ಜೆಜೆಎಂ ನಲ್ಲಿಗಳಲ್ಲಿ ಹನಿ ನೀರು ಬರುತ್ತಿಲ್ಲ’

‘ಗೋರಿಗಳಂತೆ ಕಾಣಿಸುವ ಜೆಜೆಎಂನ ನಲ್ಲಿಗಳಲ್ಲಿ ತೊಟ್ಟು ನೀರು ಬರುತ್ತಿಲ್ಲ’ ಎಂದು ಶಾಸಕ ಎಂ.ವೈ. ಪಾಟೀಲ ಅಸಮಾಧಾನ ಹೊರಹಾಕಿ ‘ಜೆಜೆಎಂನ ಎಷ್ಟು ನಲ್ಲಿಗಳಲ್ಲಿ ನೀರು ಬರುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು (ಆರ್‌ಡಬ್ಲುಎಸ್) ವಿಭಾಗದ ಎಂಜಿನಿಯರ್‌ಗೆ ಪ್ರಶ್ನಿಸಿದರು. ನೀರು ಬರುತ್ತಿರುವ ನಲ್ಲಿಗಳ ಬಗ್ಗೆ ಸಮರ್ಪಕವಾಗಿ ಉತ್ತರಿಸಲು ಆಗದೆ ‘ಅಫಜಲಪುರ ತಾಲ್ಲೂಕಿನಲ್ಲಿ ಮೊದಲ ಹಂತದ 33 ಕಾಮಗಾರಿಗಳ ಪೈಕಿ 28 ಮುಗಿದಿದೆ. 2ನೇ ಹಂತದಲ್ಲಿನ 31 ಕಾಮಗಾರಿಗಳಲ್ಲಿ 6 ಪೂರ್ಣಗೊಂಡಿವೆ’ ಎಂದರು. ಮಧ್ಯ ಪ್ರವೇಶಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ‘ಭೌತಿಕ ಕಾಮಗಾರಿಗಳು ಅಲ್ಲ. ಎಷ್ಟು ನಲ್ಲಿಗಳಲ್ಲಿ ನೀರು ಬರುತ್ತಿದೆ ಅದನ್ನು ಹೇಳಿ ಸಾಕು’ ಎಂದರು. ಉತ್ತರಿಸಲು ಆಗದೆ ತಬ್ಬಿಬ್ಬು ಆದರು.

ರಿಂಗ್‌ರೋಡ್‌ ಒಳಗಿನ ಭೂಮಿ ಪರಿವರ್ತನೆಗೆ ತಾಕೀತು

‘ರಿಂಗ್‌ರೋಡ್ ವ್ಯಾಪ್ತಿಯೊಳಗೆ ಸುಮಾರು 3000 ಎಕರೆ ಜಾಗದಲ್ಲಿ ಯಾವುದೇ ಬಡಾವಣೆ ಕಟ್ಟಡಗಳು ಇಲ್ಲದೆ ಖಾಲಿಯಾಗಿದೆ. ಸರ್ವೆ ನಂಬರ್ ಸಹಿತ ಸಮೀಕ್ಷೆ ಮಾಡಿ ಕೃಷಿಯೇತರ (ಎನ್‌ಎ) ಭೂಮಿಯನ್ನಾಗಿ ಪರಿವರ್ತಿಸಿ ನಿವೇಶನಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು’ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಪಾಲಿಕೆಗೆ ತಾಕೀತು ಮಾಡಿದರು. ‘ರಿಂಗ್‌ರೋಡ್‌ ಹೊರಗಿನ ದೂರದಲ್ಲಿ ಕನಿಷ್ಠ ₹10 ಲಕ್ಷಕ್ಕೆ ಒಂದರಂತೆ ನಿವೇಶನಗಳು ಮಾರಾಟ ಆಗುತ್ತಿವೆ. ಜನರಿಗೆ ಕಡಿಮೆ ಬೆಲೆಯಲ್ಲಿ ನಿವೇಶ ಸಿಗುವಂತಾಗಲು ರಿಂಗ್‌ರೋಡ್‌ ಒಳಗಿನ ಭೂಮಿಯನ್ನು ಪರಿವರ್ತಿಸಬೇಕು. ಪಾಲಿಕೆ ಅಧಿಕಾರಿಗಳು ಭೂ ಮಾಲೀಕರ ಮೇಲೆ ಒತ್ತಡ ತರಬೇಕು. ಪಾಲಿಕೆಯ ಸಹಭಾಗಿತ್ವ ಇಲ್ಲವೆ ಸ್ವಂತ ದುಡ್ಡಲ್ಲಿ ನಿವೇಶನಗಳಾಗಿ ಪರಿವರ್ತಿಸುವಂತೆ ಸೂಚಿಸಬೇಕು’ ಎಂದರು.

ಸಭೆಯಲ್ಲಿ ನಡೆದ ಸ್ವಾರಸ್ಯಕರ ಪ್ರಸಂಗಗಳು

ಭುವನೇಶ ಪಾಟೀಲ ಯಾರು? ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿ ನೀರು ಶುದ್ಧೀಕರಣ ಮತ್ತು ಒಳಚರಂಡಿ ವ್ಯವಸ್ಥೆಯ ನೀಲನಕ್ಷೆ ಇದೆಯಾ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಪಾಲಿಕೆಯ ಎಂಜಿನಿಯರ್‌ಗೆ ಕೇಳಿದರು. ‘ಇದಕ್ಕೆ ಇಲ್ಲ’ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ‘ಆಯುಕ್ತ ಭುವನೇಶ ಪಾಟೀಲ ಅವರಿಗೆ ಗೊತ್ತದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ‘ಭುವನೇಶ ಪಾಟೀಲ ಯಾರು?’ ಎಂದು ಡಾ.ಶರಣಪ್ರಕಾಶ ಪಾಟೀಲ ಕೇಳಿದರು. ಪಾಲಿಕೆಗೆ ನಾನೇ ಸಹಾಯವಾಣಿ: ‘ಗಾಳಿ ಮಳೆಯಿಂದ ಗಿಡ ಮರಗಳು ಬಿದ್ದು ಕರೆಂಟ್ ಹೋದರೆ ಜನರು ಪಾಲಿಕೆಗೆ ಕರೆ ಮಾಡುವ ಬದಲು ನನಗೆ ಕರೆ ಮಾಡುತ್ತಿದ್ದಾರೆ. ಪಾಲಿಕೆಗೆ ನಾನೇ ಸಹಾಯವಾಣಿಯಾಗಿದ್ದೇನೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಕನೆಕ್ಟ್‌ ಆಗದ ಮೊಬೈಲ್‌ ನಂಬರ್: ಪಾಲಿಕೆ ರಚಿಸಿದ ತುರ್ತು ಸ್ಪಂದನಾ ತಂಡದ ಅಧಿಕಾರಿಗಳ ಮೊಬೈಲ್‌ ನಂಬರ್‌ಗೆ ಸಭೆಯಲ್ಲೇ ಉಪ ಆಯುಕ್ತ ಮಾಧವ ಗಿತ್ತೆ ಅವರು ಕರೆ ಮಾಡಿದರೂ ಕನೆಕ್ಟ್‌ ಆಗಲಿಲ್ಲ. ‘ಸೇಮ್ ಟು ಸೇಮ್’: ಗ್ರಾಮೀಣ ನೈರ್ಮಲ್ಯ ಇಲಾಖೆಯ ಚಿಂಚೋಳಿಯ ಅಧಿಕಾರಿ ಸ್ವಚ್ಛತೆಗೆ ಸಂಬಂಧಿಸಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ತಾವು ಕೈಗೊಂಡಿದ್ದ ಅಭಿಯಾನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಅದೇ ರೀತಿಯಾಗಿ ಜೇವರ್ಗಿ ಅಧಿಕಾರಿಗೂ ನೈರ್ಮಲ್ಯದ ಬಗ್ಗೆ ಕೇಳಿದಾಗ ‘ಸೇಮ್ ಟು ಸೇಮ್’ ಎಂದು ಹೇಳಿ ನಗೆಪಾಟಲಿಗೆ ಈಡಾದರು. ಒಂದೂವರೆ ತಾಸು ಕಾದು ಸುಸ್ತಾದರು: ಪ್ರಗತಿ ಪರಿಶೀಲನಾ ಸಭೆ ಮಧ್ಯಾಹ್ನ 12ಕ್ಕೆ ನಿಗದಿಯಾಗಿದ್ದು ಸಭೆ ಆರಂಭವಾಗಿದ್ದು 1.30ಕ್ಕೆ. ಒಂದೂವರೆ ತಾಸು ಕಾದು ಕುಳಿತ ಅಧಿಕಾರಿಗಳು ಸುಸ್ತಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT