ಕಾಳಗಿ: ‘2025ರ ಜನವರಿ 29ರಿಂದ ಫೆಬ್ರವರಿ 6ರವರೆಗೆ 240 ಎಕರೆ ಪ್ರದೇಶದಲ್ಲಿ ಜರುಗಲಿರುವ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸ್ವರ್ಣ ಮಹೋತ್ಸವ ಹಾಗೂ 7ನೇ ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ 30ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ’ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಪೀಠಾಧಿಪತಿ ಪೂಜ್ಯ ಸದಾಶಿವ ಸ್ವಾಮೀಜಿ ಹೇಳಿದರು.
ಈ ಬೃಹತ್ ಕಾರ್ಯಕ್ರಮದ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ಕಲ್ಯಾಣ ಕರ್ನಾಟಕ ವಿಕಾಸ ಪಥ ಯಾತ್ರೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರ’ ಎಂಬ ಪರಿಕಲ್ಪನೆ ಅಡಿಯಲ್ಲಿ 1974ರಲ್ಲಿ 4ಮಕ್ಕಳೊಂದಿಗೆ ಪ್ರಾರಂಭವಾದ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಮಕ್ಕಳು, ಶಿಕ್ಷಕರಿಗೆ ಆಶ್ರಯ ತಾಣವಾಗಿದೆ.
ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಆದಿಯಾಗಿ ದೇಶದ ನಾನಾ ವಿದ್ವಾಂಸರು, ಮಠಾಧೀಶರು, ವಿಜ್ಞಾನಿಗಳು, ಅಗ್ರಗಣ್ಯ ಸಾಧಕರ ಭೇಟಿ, ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಸಾಧಾರಣ ಕೆಲಸಗಳನ್ನು ಮಾಡಿ ಜನಮನ್ನಣೆಗೆ ಪಾತ್ರವಾಗಿದೆ. 50 ವರ್ಷಗಳಲ್ಲಿ ಹಮ್ಮಿಕೊಂಡ ಕೃಷಿ, ಶಿಕ್ಷಣ, ಮಹಿಳೆ, ಯುವ, ಉದ್ಯೋಗ, ಕ್ರೀಡೆ ಹೀಗೆ ವಿಭಿನ್ನ ಕ್ಷೇತ್ರಗಳ ಕಾರ್ಯಚಟುವಟಿಕೆಗಳು ಸಾವಿರಾರು ಜನರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟು ಈ ಭಾಗದ ಹಿಂದುಳಿದ ಕಳಂಕದ ಹಣೆಪಟ್ಟಿಯನ್ನು ದೂರಮಾಡಿದೆ’ ಎಂದರು.
ಈ ಎಲ್ಲದರ ಪರಿಣಾಮದ ಫಲದ ಸವಿಯನ್ನು ನಾಡಿನ ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ 2025ರಲ್ಲಿ ಬೃಹತ್ ಸಮಾರಂಭ ಆಯೋಜಿಸಲಾಗಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಗಣ್ಯಾತಿಗಣ್ಯರು ಪಾಲ್ಗೊಂಡು ಮಾರ್ಗದರ್ಶನ ಮಾಡಲಿದ್ದು ಸರ್ವರೂ ಸಮಭಾವದಿಂದ ಆಗಮಿಸಬೇಕು’ ಎಂದು ಕರೆ ನೀಡಿದರು.
ಯಾತ್ರೆಯು ಅದ್ಧೂರಿ ಮೆರವಣಿಗೆಯೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ತಲುಪಿತು. ಮಂಗಲಗಿ ಮಠದ ಡಾ.ಶಾಂತಸೋಮನಾಥ ಶಿವಾಚಾರ್ಯರು, ಸುಗೂರಿನ ಡಾ.ಚನ್ನರುದ್ರಮುನಿ ಶಿವಾಚಾರ್ಯರು, ರಟಕಲ್ ರೇವಣಸಿದ್ಧ ಶಿವಾಚಾರ್ಯರು, ಕೋಡ್ಲಿಯ ಬಸವಲಿಂಗ ಶಿವಾಚಾರ್ಯರು ವೇದಿಕೆಯಲ್ಲಿದ್ದರು.
ಮುಖಂಡ ವಿಶ್ವನಾಥ ವನಮಾಲಿ, ಶಿವಶರಣಪ್ಪ ಗುತ್ತೇದಾರ, ಸಂತೋಷ ಪತಂಗೆ, ಜಗದೀಶ ಪಾಟೀಲ, ಶಿವರಾಜ ಪಾಟೀಲ, ಅಣ್ಣಾರಾವ ಪೆದ್ದಿ, ಸತ್ಯನಾರಾಯಣ ವನಮಾಲಿ, ವೀರಣ್ಣ ಗಂಗಾಣಿ, ಪರಮೇಶ್ವರ ಮಡಿವಾಳ, ಮಲ್ಲಪ್ಪ ಚಿಂತಕೋಟಿ, ನೀಲಕಂಠ ಮಡಿವಾಳ, ಪ್ರಭು ರಟಕಲ್, ಗುಂಡಪ್ಪ ಮಾಳಗಿ, ಹನುಮಂತಪ್ಪ ಕಾಂತಿ, ಶಾಮರಾವ ಕಡಬೂರ, ಬಾಬು ಹೀರಾಪುರ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು. ಶಿವಲೀಲಾ ಅಷ್ಟಗಿ ಪ್ರಾರ್ಥಿಸಿ, ಶಿವಕುಮಾರ ಶಾಸ್ತ್ರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.