ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘ ಲಾಕ್‌ಡೌನ್‌ ಬಳಿಕ ಸರ್ಕಾರಿ ಬಸ್‌ ಸಂಚಾರ ಆರಂಭ: ನಿಟ್ಟುಸಿರು ಬಿಟ್ಟ ಜನ

ಕೇಂದ್ರ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಕಲರವ
Last Updated 21 ಜೂನ್ 2021, 5:07 IST
ಅಕ್ಷರ ಗಾತ್ರ

ಕಲಬುರ್ಗಿ: ದೀರ್ಘ ಲಾಕ್‌ಡೌನ್‌ ನಂತರ ಇಲ್ಲಿನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಜನಸಂದಣಿ ಕಂಡುಬಂತು. ನೆರೆ ಜಿಲ್ಲೆ ಹಾಗೂ ವಿವಿಧ ತಾಲ್ಲೂಕು ಕೇಂದ್ರಗಳಿಗೆ ಬಸ್‌ ಸಂಚಾರ ಆರಂಭವಾಗಿದ್ದರಿಂದ ಜನ ನಿಟ್ಟುಸಿರು ಬಿಟ್ಟರು.

ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹಲವು ಬಸ್‌ಗಳು ನಿಲ್ದಾಣದ ಆವರಣದಲ್ಲಿ ಸಿದ್ಧಗೊಂಡು ನಿಂತಿದ್ದವು. ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಅಫಜಲಪುರ, ದೇವಲ ಗಾಣಗಾಪುರ, ಸೇಡಂ ಹಾಗೂ ನೆರೆ ಜಿಲ್ಲೆಗಳಾದ ವಿಜಯಪುರ, ಬೀದರ್‌, ದೂರದ ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು, ಮಹಾರಾಷ್ಟ್ರದ ಸೊಲ್ಲಾಪುರ ಮುಂತಾದ ಊರುಗಳಿಗೆ ತೆರಳುವ ಬಸ್‌ಗಳೇ ಆರಂಭದ ಸರದಿಯಲ್ಲಿ ನಿಂತಿದ್ದು ಕಂಡುಬಂತು.

ಲಾಕ್‌ಡೌನ್‌ ತೆರವಾದ ಬಳಿಕ ಮೊದಲ ದಿನವೇ ಜಿಲ್ಲೆಯಿಂದ ಹೊರಗಿನ ಊರುಗಳಿಗೆ ಓಡಾಡುವ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡುಬರಲಿಲ್ಲ. ಆದರೆ, ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರ ಹಾಗೂ ಹಳ್ಳಿಗಳಿಗೆ ಹೋಗುವ ಬಸ್‌ಗಳಲ್ಲಿ ಜನ ತುಂಬಿಹೋದರು. ಸಾರಿಗೆ ಅಧಿಕಾರಿಗಳು ನೀಡಿದ ನಿರ್ದೇಶನದಂತೆ ಯಾವುದೇ ಕೋವಿಡ್‌ ನಿಯಮವನ್ನೂ ಪಾಲಿಸಲು ಸಾಧ್ಯವಾಗಲಿಲ್ಲ.

ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಒಂದು ಬಸ್ಸಿನಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸೀಟುಗಳ ಮಧ್ಯೆ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳುವಂತೆ ಮಾರ್ಕಿಂಗ್‌ ಮಾಡಲಾಗಿದೆ. ಆದರೆ, ಜನ ಇದಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಗುಂಪಾಗಿಕುಳಿತರು. ಕರ್ತವ್ಯದಲ್ಲಿದ್ದ ಬಹುಪಾಲು ಚಾಲಕ, ನಿರ್ವಾಹಕರೂ ಇದನ್ನು ಗಮನಿಸದೇ ಬಸ್‌ ಓಡಿಸಿದ್ದು ಕಂಡುಬಂತು.

ಕೆಲವು ಹಳ್ಳಿಗಳಿಗೆ ಹೋಗಬೇಕಾದ ಜನರಿಗೆ ಬಸ್‌ ಇರಲಿಲ್ಲ. ಇದರಿಂದ ತಾಸುಗಟ್ಟಲೇ ಅವರು ಬಸ್‌ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳಬೇಕಾಯಿತು. ಬಸ್‌ ಸೀಟು ಸಾಮರ್ಥ್ಯ ಶೇ 20ರಷ್ಟು ಪ್ರಯಾಣಿಕರು ಇದ್ದ ರೂಟ್‌ಗಳಲ್ಲಿ ಮಾತ್ರ ಬಸ್‌ಗಳನ್ನು ಓಡಿಸಲಾಯಿತು.

‘ಮೊದಲ ದಿನ ಶೇ 30ರಷ್ಟು ಅಂದರೆ; 300 ಬಸ್‌ಗಳನ್ನು ಮಾತ್ರ ಓಡಿಸಲಾಗುವುದು. ಜನರ ಬೇಡಿಕೆ ನೋಡಿಕೊಂಡು ಮಂಗಳವಾರದಿಂದ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಗೆ ಬರುವ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳೂ ಸೇರಿ ಒಟ್ಟು 1800 ಬಸ್‌ಗಳನ್ನು ಓಡಿಸಲಾಗುತ್ತಿದೆ’ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ಕೊಟ್ರಪ್ಪ ಮಾಹಿತಿ ನೀಡಿದರು.

‘ಸೋಮವಾರವೇ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬಸ್‌ ಓಡಿಸಲಾಗಿದೆ. ಇತರ ನಗರಗಳಿಗೆ ಇನ್ನೂ ಬಸ್‌ ಬಿಟ್ಟಿಲ್ಲ. ಜತೆಗೆ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಪ್ರಯಾಣಿಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿನ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಬಸ್‌ ಓಡಿಸಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT