ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ | ವಿದ್ಯಾರ್ಥಿನಿಲಯದಲ್ಲಿ ಮೂಲ ಸೌಕರ್ಯ ಕೊರತೆ: ಪ್ರತಿಭಟನೆ

Published 23 ಫೆಬ್ರುವರಿ 2024, 15:32 IST
Last Updated 23 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಕಮಲಾಪುರ: ಪಟ್ಟಣದ ಕಲಮೂಡ ರಸ್ತೆಯಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಮೌಲಸೌಕರ್ಯಗಳು ಮರೀಚಿಕೆಯಾಗಿವೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಮಸ್ಯೆಗಳಿದ್ದರೂ ಪರಿಹಾರಕ್ಕೆ ಮುಂದಾಗದೇ ನಿಷ್ಕಾಳಜಿ ತೋರುತ್ತಿರುವ ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಸತಿ ನಿಲಯಕ್ಕೆ ಶುಕ್ರವಾರ ಬೀಗ ಜಡಿದ ವಿದ್ಯಾರ್ಥಿಗಳು ಪ್ರತಿಭಟಿಸಿಸಿದರು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಆಹಾರದ ದವಸ ಧಾನ್ಯಗಳಲ್ಲಿ ಹುಳುಹುಪ್ಪಡಿ, ಸ್ನಾನಕ್ಕೆ ನೀರಿಲ್ಲ. ಸ್ನಾನಗೃಹ, ಶೌಚಾಲಯವಿದ್ದರೂ ಉಪಯೋಗಿಸಲು ಅವಕಾಶವಿಲ್ಲ. ಗೃಂಥಾಲಯವಿದ್ದರೂ ಪುಸ್ತಕಗಳಿಲ್ಲ’ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.

ಈ ವಸತಿ ನಿಲಯದ ಕಟ್ಟಡ ಸುಸಜ್ಜಿತವಾಗಿದ್ದು, 10 ವಾಸದ ಕೋಣೆ, ಅಡುಗೆ ಕೋಣೆ, ಆಹಾರ ಕೋಣೆ, ನಿಲಯ ಮೇಲ್ವಿಚಾರಕರ ಕಚೇರಿ ಕೋಣೆ, 8 ಶೌಚಾಲಯ, 8 ಸ್ನಾನಗೃಹಗಳನ್ನು ಹೊಂದಿದೆ. ಸುಮಾರು 100 ವಿದ್ಯಾರ್ಥಿಗಳು ಈ ವಿದ್ಯಾರ್ಥಿನಿಲಯದಲ್ಲಿದ್ದಾರೆ.

‘ನೀರಿನ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ 4 ಸ್ನಾನಗೃಹಗಳಿಗೆ ಹಾಗೂ, ಎಲ್ಲ ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ. ಬಹಿರ್ದೆಸೆಗೆ ಚೊಂಬು ಹಿಡಿದೇ ಬಯಲಿಗೆ ತೆರಳಬೇಕು. ರಾತ್ರಿ ಹೊತ್ತು ಶೌಚಕ್ಕೆ ತೆರಳಲಾಗದೇ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದೇವೆ. ನೀರಿಲ್ಲದ ಕಾರಣ ವಾರಗಟ್ಟಲೆ ಸ್ನಾನ ಮಾಡುವಂತಿಲ್ಲ. ಬೆವರು ವಾಸನೆಯಿಂದಾಗಿ ದೇಹ ದುರ್ಗಂಧ ಬೀರುತ್ತಿದೆ. ಕಾಲೇಜಿಗೆ ತೆರಳಿ ತರಗತಿಯಲ್ಲಿ ಕೂರಲು ಮುಜುಗರವಾಗುತ್ತಿದೆ. ಈ ಕುರಿತು ಅನೇಕ ಬಾರಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕರಿಗೆ ಮನವಿ ಸಲ್ಲಿಸಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

‘ಕಳಪೆ ಗುಣಮಟ್ಟದ ಜೋಳ, ಅಕ್ಕಿಯಿಂದ ಆಹಾರ ತಯಾರಿಸುತ್ತಿದ್ದಾರೆ. 100 ವಿದ್ಯಾರ್ಥಿಗಳಿಗೆ ಕೇವಲ 3 ಬಕೆಟ್‌, 3 ಚೊಂಬು ಒದಗಿಸಿದ್ದಾರೆ. ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲ. ತಿಂಗಳಿಗೆ ಒಂದೇ ಮ್ಯಾಗಜೀನ್‌ ಒದಗಿಸುತ್ತಾರೆ. ಕೇವಲ ಒಂದು ದಿನಪತ್ರಿಕೆ ಹಾಕಿಸಿಕೊಳ್ಳುತ್ತಾರೆ. ಕೂರಲು ಆಸನಗಳಿಲ್ಲ’ ಎಂದು ವಿದ್ಯಾರ್ಥಿ ಶಿವಶಂಕರ ತಿಳಿಸಿದರು.

ಮೇಲ್ವಿಚಾರಕರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು
ಶಿವಶಂಕರ ವಿದ್ಯಾರ್ಥಿ
ನೀರಿನ ಸಮಸ್ಯೆ ಬಗೆಹರಿಸಲು ಟ್ಯಾಂಕರ್‌ ವ್ಯವಸ್ಥೆ ಮಾಡಲಾಗುವುದು. ಮುಂದೆ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುತ್ತೇನೆ
ದೀಪಕಸಿಂಗ ವಿದ್ಯಾರ್ಥಿ ನಿಲಯ ಮೇಲ್ವಿಚಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT