ಶುಕ್ರವಾರ, ಅಕ್ಟೋಬರ್ 7, 2022
24 °C

ವಾರ್ಡ್‌ ಸಮಿತಿ ರಚನೆಗೆ ಪ್ರಚಾರದ ಅಭಾವ: ಅರ್ಜಿ ವಿರಳ

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್‌ ಸಮಿತಿಗಳ ರಚನೆ ಪ್ರಕ್ರಿಯೆಗೆ ಪದೇ ಪದೇ ಹಿನ್ನಡೆಯಾಗುತ್ತಿದೆ. ವಾರ್ಡ್ ಸಮಿತಿಗಳ ಬಗ್ಗೆ ಒಂದೆಡೆ ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿದ್ದರೆ, ಪಾಲಿಕೆಯಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಕಾರ್ಯ ಆಗುತ್ತಿಲ್ಲ. ಹೀಗಾಗಿ ಸಮಿತಿ ರಚನೆಗಾಗಿ ಸಾರ್ವಜನಿಕರಿಂದ ಅರ್ಜಿಗಳೂ ಬರುತ್ತಿಲ್ಲ.

ನಗರದ ಸಮಗ್ರ ಅಭಿವೃದ್ಧಿಯಲ್ಲಿ ನಿವಾಸಿಗಳ ಪಾಲ್ಗೊಳ್ಳುವಿಕೆ ಉತ್ತೇಜಿಸುವ ಉದ್ದೇಶದಿಂದ ಪ್ರತಿ ವಾರ್ಡ್‌ನಲ್ಲಿ ಸಮಿತಿ ರಚಿಸಲು ಮಹಾನಗರ ಪಾಲಿಕೆ ಉದ್ದೇಶಿಸಿದೆ. ಜನರಿಂದ ನೇರವಾಗಿ ಸಲಹೆ, ಸೂಚನೆ ಮತ್ತು ಮಾರ್ಗದರ್ಶನವನ್ನು ಪಾಲಿಕೆ ಪಡೆಯುತ್ತದೆ.

‘ವಾರ್ಡ್‌ ಸಮಿತಿ ರಚನೆಯ ಅರ್ಜಿ ಸಲ್ಲಿಕೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದಕ್ಕೆ ಸರಿಯಾದ ಪರಿಹಾರ ಕಂಡುಕೊಂಡು, ಸಾರ್ವಜನಿಕರ ಮತ್ತು ಸರ್ಕಾರೇತರ ಸಂಘ–ಸಂಸ್ಥೆಗಳ ಸಹಭಾಗಿತ್ವ ಪಡೆಯುವಲ್ಲಿ ಪಾಲಿಕೆಯ ಅಧಿಕಾರಿಗಳು ಸಹ ಮುಂದಾಗುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸಿ, ಪೂರ್ವಸಿದ್ಧತೆ ಮಾಡಿಕೊಂಡು ಅರ್ಜಿ ಆಹ್ವಾನಿಸಬೇಕಿತ್ತು’ ಎನ್ನುತ್ತಾರೆ ತಜ್ಞರು.

‘15 ವಾರ್ಡ್‌ಗಳಿಂದ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬಂದಿವೆ. ಕೆಲ ವಾರ್ಡ್‌ಗಳಿಂದ 4, 5, 6, 8 ಅರ್ಜಿಗಳು ಬಂದಿವೆ. ಈವರೆಗೆ ಪಾಲಿಕೆ 400 ಅರ್ಜಿಗಳು ಸ್ವೀಕರಿಸಿದ್ದು, ಕಡಿಮೆ ಅರ್ಜಿ ಬಂದ ವಾರ್ಡ್‌ಗಳಲ್ಲಿ ವ್ಯಾಪಕ ಪ್ರಚಾರ ಮಾಡುತ್ತೇವೆ. ಜುಲೈ 28ರಂದು ಸಾರ್ವಜನಿಕರ ಜತೆ ಸಂವಾದ ನಡೆಸಲಾಗುವುದು’ ಎಂದು ಪಾಲಿಕೆಯ ಉಪ ಆಯುಕ್ತ(ಕಂದಾಯ) ಸಂತೋಷ ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆಯ ಕಸ ಸಂಗ್ರಹ ವಾಹನ, ಆಟೊಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಸಾಮಾಜಿಕ ಜಾಲತಾಣ ಸಹ ಬಳಸಿಕೊಳ್ಳುತ್ತಿದ್ದೇವೆ. ಅರ್ಜಿ ಸಲ್ಲಿಕೆ ಸರಳೀಕರಣಗೊಂಡಿದ್ದು, ಸಾರ್ವಜನಿಕರು ನೇರವಾಗಿ ಪಾಲಿಕೆ ಅಥವಾ ವಲಯ ಕಚೇರಿಗಳಿಗೆ ಅರ್ಜಿ ಕೊಡಬಹುದು. ಮೀಸಲಾತಿಯಡಿ ಅರ್ಜಿ ಸಲ್ಲಿಸುವವರು ಮಾತ್ರ ಸಂಬಂಧಿತ ಅಗತ್ಯ ದಾಖಲೆ ಕೊಡಬೇಕು. ಆದರೆ, ಜನರು ಆಸಕ್ತಿ ತೋರಿಸುತ್ತಿಲ್ಲ. ಕೆಲವರಿಗೆ ಆಸಕ್ತಿಯಿದ್ದರೂ ಅರ್ಜಿ ಸಲ್ಲಿಸಲು ಹಿಂಜರಿಯುತ್ತಿದ್ದಾರೆ’ ಎಂದರು.

‘ಪಾಲಿಕೆ ವ್ಯಾಪ್ತಿಯ 55 ವಾರ್ಡ್‌ಗಳಿಗೆ ಸಮಿತಿಗಳನ್ನು ರಚಿಸಬಹುದು. ಅರ್ಜಿ ಸಲ್ಲಿಕೆ ಅವಧಿಯನ್ನು ಪದೇ ಪದೇ ವಿಸ್ತರಿಸಿದರೂ ನಿಗದಿತ ಪ್ರಮಾಣದಲ್ಲಿ ಅರ್ಜಿಗಳು ಬರುತ್ತಿಲ್ಲ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಏಪ್ರಿಲ್‌ 4 ಕೊನೆ ದಿನವಾಗಿತ್ತು. ಆಗ ಬೆರಳೆಣಿಕೆಯಷ್ಟು ಅರ್ಜಿಗಳ ಬಂದವು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮೇ 10ಕ್ಕೆ ವಿಸ್ತರಿಸಲಾಯಿತು. ಆಗಲೂ ಅಗತ್ಯವಾದಷ್ಟು ಅರ್ಜಿಗಳು ಬರಲಿಲ್ಲ. ಮತ್ತೆ ಜುಲೈ 29ರವರೆಗೆ ದಿನಾಂಕ ಮುಂದೂಡಲಾಗಿದೆ’ ಎಂದು ಪಾಲಿಕೆಯ ಅಧಿಕಾರಿ ಹೇಳಿದರು.

ಸಮಿತಿ ರಚನೆ ಹೇಗೆ?

ಪ್ರತಿ ಸಮಿತಿಯಲ್ಲಿ ಆಯಾ ವಾರ್ಡ್‌ನ ಕಾರ್ಪೊರೇಟರ್ (ಪಾಲಿಕೆ ಸದಸ್ಯ) ಸೇರಿ 11 ಜನ ಸದಸ್ಯರು ಇರುತ್ತಾರೆ. ಅದರಲ್ಲಿ ಇಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಮೂವರು ಮಹಿಳೆಯರು, ಇಬ್ಬರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಮೂವರು ವಿವಿಧ ಕ್ಷೇತ್ರಗಳ ತಜ್ಞರು ಇರಬೇಕು. ಆಯಾ ವಾರ್ಡ್‌ನ ಪಾಲಿಕೆ ಸದಸ್ಯರು ವಾರ್ಡ್‌ ಸಮಿತಿಯ ಅಧ್ಯಕ್ಷ, ಪಾಲಿಕೆಯ ಒಬ್ಬ ಸಿಬ್ಬಂದಿ ಅದರ ಕಾರ್ಯದರ್ಶಿ ಆಗಿರುತ್ತಾರೆ. ಈ ಸಮಿತಿಗಳ ಅವಧಿ ಐದು ವರ್ಷ ಇರುತ್ತದೆ.

*ವಾರ್ಡ್‌ ಸಮಿತಿ ರಚನೆಗೆ ಹೈಕೋರ್ಟ್‌ ಆದೇಶಿಸಿದ್ದು, ನಿರೀಕ್ಷಿತ ಮಟ್ಟದಲ್ಲಿ ಅರ್ಜಿ ಬಂದ ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ಉದ್ದೇಶವಿದೆ
-ಸಂತೋಷ ಪಾಟೀಲ, ಪಾಲಿಕೆಯ ಉಪ ಆಯುಕ್ತ(ಕಂದಾಯ)

*ಪಾಲಿಕೆಯ ಅಧಿಕಾರಿಗಳು ಸಂಘ–ಸಂಸ್ಥೆಗಳ ಜತೆಗೂಡಿ ಕಡಿಮೆ ಅರ್ಜಿ ಬಂದ ವಾರ್ಡ್‌ಗಳಲ್ಲಿ ವಾರ್ಡ್‌ ಸಮಿತಿಯ ಮಹತ್ವವನ್ನು ಭಿತ್ತಿ ಪತ್ರ, ವೇದಿಕೆ ಕಾರ್ಯಕ್ರಮದ ಮೂಲಕ ತಿಳಿಸುವ ಕೆಲಸ ಮಾಡಬೇಕು ಶ್ರಾವಣಯೋಗಿ ಹಿರೇಮಠ, -ಸಂಯೋಜಕ, ಜನಾಗ್ರಹ ಸಂಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು