ಭಾನುವಾರ, ನವೆಂಬರ್ 27, 2022
26 °C
ಜೈ ಭವಾನಿ ಕಲ್ಯಾಣ ಮಂಟಪಕ್ಕೆ ಜಾಗ ಲೀಸ್‌ಗೆ ನೀಡಿದ್ದ ಕನ್ಸೂಮರ್ ಫೆಡರೇಶನ್

ನಿಯಮ ಉಲ್ಲಂಘನೆ: 4 ಎಕರೆ ಭೂಮಿ ವಾಪಸ್‌ಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕರ್ನಾಟಕ ಭೂ ಮಂಜೂರಾತಿ ಗುತ್ತಿಗೆ ನಿಯಮಾವಳಿ ಉಲ್ಲಂಘಿಸಿ ಜಮೀನನ್ನು ಇನ್ನೊಬ್ಬರಿಗೆ ಅನಧಿಕೃತವಾಗಿ ಪರಭಾರೆ ಮಾಡಿದ ಕರ್ನಾಟಕ ಕೋ–ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆ ಇವರಿಂದ 4 ಎಕರೆ ಸರ್ಕಾರಿ ಗೈರಾಣು ಜಮೀನು ಮರಳಿ ಸರ್ಕಾರಕ್ಕೆ ವಾಪಸ್ ಪಡೆಯುವಂತೆ ಕಲಬುರಗಿ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೋಮವಾರ ಆದೇಶಿಸಿದ್ದಾರೆ.

ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಮಾರ್ಕೆಟಿಂಗ್ ಫೆಡರೇಷನ್ ಸಂಸ್ಥೆಗೆ ಪ್ರಾದೇಶಿಕ ವಿತರಣಾ ಕೇಂದ್ರ ಸ್ಥಾಪನೆ, ದಾಲ್ ಮಿಲ್ ಹಾಗೂ ಇತರೆ ಗೋಡೌನ್ ನಿರ್ಮಾಣಕ್ಕೆ ತಾಲ್ಲೂಕಿನ ಬಡೇಪೂರ ಗ್ರಾಮದ ಸರ್ಕಾರಿ ಗೈರಾಣು ಜಮೀನು ಸರ್ವೇ 84/2 ಮತ್ತು 84/4 ರಲ್ಲಿನ ತಲಾ 2 ಎಕರೆ ಸೇರಿ ಒಟ್ಟು 4 ಎಕರೆ ಗುತ್ತಿಗೆ ನೀಡಿ 1984ರ ಜುಲೈ 11ರಂದು ಅಂದಿನ ಜಿಲ್ಲಾಧಿಕಾರಿಗಳು ಮಂಜೂರಾತಿ ನೀಡಿದರು.

ಗುತ್ತಿಗೆ ಮಂಜೂರಾತಿ ಆದೇಶದಲ್ಲಿ ಭೂಮಿ ಪಡೆದ ನಂತರ 5 ವರ್ಷಗಳ ಅವಧಿಗೆ ಯಾರಿಗೂ ಭೂಮಿ ಪರಭಾರೆ ಮಾಡಬಾರದು ಮತ್ತು 5 ವರ್ಷದ ನಂತರ 15 ವರ್ಷದೊಳಗೆ ಭೂಮಿ ಪರಭಾರೆ ಮಾಡಬೇಕಾದರೆ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ. ಯಾವ ಉದ್ದೇಶಕ್ಕೆ ಜಮೀನು ಮಂಜೂರು ಮಾಡಿದಿಯೋ ಅದೇ ಉದ್ದೇಶಕ್ಕೆ ಬಳಸಬೇಕು ಸೇರಿದಂತೆ ಇನ್ನಿತರ 5 ಅಂಶಗಳ ಷರತ್ತು ವಿಧಿಸಲಾಗಿತ್ತು.

ಈ ಷರತ್ತುಗಳನ್ನು ಉಲ್ಲಂಘಿಸಿದ ಕರ್ನಾಟಕ ಕೋ-ಆಪರೇಟಿವ್ ಕನ್ಸೂಮರ್ ಫೆಡರೇಷನ್ ಲಿಮಿಟೆಡ್ ಇವರು, ಸರ್ವೆ ನಂ. 84/4ರಲ್ಲಿನ 2 ಎಕರೆ ಜಮೀನನ್ನು ಜೈ ಭವಾನಿ ಕಲ್ಯಾಣ ಮಂಟಪಕ್ಕೆ ಪರಭಾರೆ ಮಾಡಿ 20 ವರ್ಷದ ಅವಧಿಗೆ ಗುತ್ತಿಗೆ ಕರಾರು ಮಾಡಿಕೊಂಡು ಕಲಬುರಗಿ ಉಪ ನೊಂದಣಾಧಿಕಾರಿಗಳ ಕಚೇರಿ ನೋಂದಣಿ ಮಾಡಿದ್ದಾರೆ. ಜೊತೆಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಲ್ಯಾಣ ಮಂಟಪ ಎಂದು ಸಹ ನೋಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಸಹಾಯಕ ಆಯುಕ್ತರು ವರದಿ ನೀಡಿದ್ದರು.

ಈ ವರದಿಯನ್ವಯ ಬಡೇಪೂರ ಗ್ರಾಮದ 4 ಎಕರೆ ಜಮೀನಿನ ಗುತ್ತಿಗೆ (ಲೀಸ್) ರದ್ದುಗೊಳಿಸಿ, ಯಾವುದೇ ನೋಟಿಸು ಅಥವಾ ಪರಿಹಾರ ನೀಡದೆ ಮರಳಿ ಕಂದಾಯ ಇಲಾಖೆಯ ವಶಕ್ಕೆ ಜಮೀನು ಪಡೆಯುವಂತೆ ಆದೇಶಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು