ಮಂಗಳವಾರ, ನವೆಂಬರ್ 19, 2019
28 °C
ಬಡಿಗೇರ ಮನೆಯಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ

ಜೇವರ್ಗಿ ಮಹಾಲಕ್ಷ್ಮಿ ದೇವಿ ಜಾತ್ರೆ ಆರಂಭ: ಬಡಿಗೇರರ ಮನೆಗೆ ಭಕ್ತರ ದಂಡು

Published:
Updated:
Prajavani

ಜೇವರ್ಗಿ (ಕಲಬುರ್ಗಿ ಜಿಲ್ಲೆ): ಪಟ್ಟಣದ ಆರಾಧ್ಯ ದೇವತೆ ಮಹಾಲಕ್ಷ್ಮಿ (ಕಲ್ಕತ್ತದೇವಿ) ಜಾತ್ರಾ ಮಹೋತ್ಸವ ನಿಮಿತ್ತ ಬಡಿಗೇರ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಉತ್ಸವ ಮೂರ್ತಿಯನ್ನು ಮಂಗಳವಾರ ರಾತ್ರಿ 10.30ಕ್ಕೆ ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಯಿತು.

ಬುಧವಾರ ಬೆಳಗಿನ ಜಾವ 5 ಗಂಟೆಯಿಂದ ಆರಂಭವಾದ ದೇವಿಯ ದರ್ಶನಕ್ಕೆ ಭಕ್ತರು ದಂಡೇ ಹರಿದು ಬರುತ್ತಿರುವುದು ಕಂಡು ಬಂದಿತು. ಮಹಿಳೆಯರು ದೇವಿಗೆ ಗೋಧಿ, ಅಕ್ಕಿ, ಹಣ್ಣು, ಉತ್ತುತ್ತಿ, ಬಾಳೆಹಣ್ಣು, ಬೆಳ್ಳಿಯ ಕಣ್ಣು ಬಟ್ಟು ಉಡಿ ತುಂಬುವ ಮೂಲಕ ಹರಕೆ ತೀರಿಸಿದರು. ಪುರುಷರು, ಮಹಿಳೆಯರು ಪ್ರತ್ಯೇಕ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದುಕೊಂಡರು.

ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬಡಿಗೇರ ಮನೆ ಹತ್ತಿರ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.

ಅ.17 ರಂದು ಚಿಕ್ಕ ಜೇವರ್ಗಿಯಿಂದ ಮಂಟಪ ಬರುವುದು. ಅಂದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4ರವರೆಗೆ ಬಡಿಗೇರ ಮನೆಯಿಂದ ನಡುಗಟ್ಟೆಗೆ ಶ್ರೀದೇವಿಯ ಆಗಮನವಾಗುತ್ತದೆ. ಅ.18ರಂದು ಗ್ರಾಮದ ಜನರಿಂದ ಶ್ರೀದೇವಿಗೆ ನೈವೇದ್ಯ ಮತ್ತು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಅ.19ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಭಕ್ತರ ಜಯಘೋಷಗಳೊಂದಿಗೆ ದೇವಿಯ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ಮತ್ತು ಶನಿವಾರ ಮಹಾಲಕ್ಷ್ಮಿ (ಕಲ್ಕತ್ತ ದೇವಿ) ಜಾತ್ರಾ ಕಮಿಟಿ ಹಾಗೂ ಸದ್ಭಕ್ತ ಮಂಡಳಿ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಪ್ರತಿಕ್ರಿಯಿಸಿ (+)