ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಬಂದ್: ರೈಲು ತಡೆಗೆ ಯತ್ನ; ಮುಖಂಡರ ಬಂಧನ

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಎರಡು ಗಂಟೆ ಧರಣಿ
Last Updated 9 ಜನವರಿ 2019, 12:53 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಅಂಗವಾಗಿ ಬುಧವಾರ ರೈಲು ತಡೆಗೆ ಯತ್ನಿಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ತೀವ್ರ ವಾಗ್ವಾದ, ತಳ್ಳಾಟ, ನೂಕಾಟ ನಡೆಯಿತು. ರೊಚ್ಚಿಗೆದ್ದ ಪ್ರತಿಭಟನಾಕಾರರು ಪೊಲೀಸರನ್ನು ನೂಕಿ ರೈಲು ನಿಲ್ದಾಣಕ್ಕೆ ಒಳನುಗ್ಗಲು ಮುಂದಾದರು. ಆಗ ಸ್ಥಳದಲ್ಲಿದ್ದ ಪೊಲೀಸರು ಎಲ್ಲರನ್ನೂ ಜೋರಾಗಿ ತಳ್ಳಿದರು. ರೈಲ್ವೆ ಪೊಲೀಸರು ಕೂಡ ನಿಲ್ದಾಣ ಪ್ರವೇಶಕ್ಕೆ ತಡೆಯೊಡ್ಡಿದರು. ಇದರಿಂದಾಗಿ ಕೆಲವರು ಕೆಳಕ್ಕೆ ಬಿದ್ದರು.

ಈ ವೇಳೆ ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಹಿರಿಯ ಅಧಿಕಾರಿಗಳ ಸಲಹೆಯಂತೆ ಮಾರುತಿ ಮಾನ್ಪಡೆ, ಮೌಲಾ ಮುಲ್ಲಾ ಸೇರಿದಂತೆ ನಾಲ್ಕೈದು ಮುಖಂಡರನ್ನು ಪೊಲೀಸರು ಬಂಧಿಸಿದರು. ಇದಕ್ಕೆ ತೀವ್ರ ಪ್ರತಿರೋಧವೊಡ್ಡಿದ ಪ್ರತಿಭಟನಾನಿರತ ಮಹಿಳೆಯರು ಕೆಎಸ್‌ಆರ್‌ಪಿ ವಾಹನವನ್ನು ಅಡ್ಡಗಟ್ಟಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಆದರೆ ಇದಾವುದಕ್ಕೂ ಜಗ್ಗದ ಪೊಲೀಸರು ಮುಖಂಡರನ್ನು ಕರೆದೊಯ್ದರು.

ಪಟೇಲ್ ವೃತ್ತದಲ್ಲಿ ಧರಣಿ: ‘ಪ್ರತಿಭಟನಾನಿರತನ್ನು ಒತ್ತಾಯಪೂರ್ವಕವಾಗಿ ಬಂಧಿಸುವ ಮೂಲಕ ಪೊಲೀಸರು ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ’ ಎಂದು ಆರೋಪಿಸಿ ಅಂಗನವಾಡಿ, ಅಕ್ಷರ ದಾಸೋಹ, ಕೃಷಿ ಮತ್ತು ಕಟ್ಟಡ ಕಾರ್ಮಿಕರು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಎರಡು ಗಂಟೆ ಧರಣಿ ನಡೆಸಿದರು.

‘ಸಮಾನ ಕೆಲಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕರಿಗೆ ಕನಿಷ್ಠ ₹18 ಸಾವಿರ ವೇತನ ನೀಡಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು’ ಎಂದು ಒತ್ತಾಯಿಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.

ಎಐಟಿಯುಸಿ, ಐಎನ್‌ಟಿಯುಸಿ, ಸಿಪಿಐ, ಸಿಐಟಿಯು, ಟಿಯುಸಿಸಿ, ಎಐಸಿಸಿಟಿಯು, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು), ಕೆಪಿಆರ್‌ಎಸ್‌ ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರ ಸಂಘಟನೆಗಳ ಮುಖಂಡರಾದ ಮಾರುತಿ ಮಾನ್ಪಡೆ, ಗೌರಮ್ಮ ಪಾಟೀಲ, ಗಂಗಮ್ಮ ಬಿರಾದಾರ, ಭೀಮಶೆಟ್ಟಿ ಯಂಪಳ್ಳಿ, ಶರಣಬಸಪ್ಪ ಮಮಶೆಟ್ಟಿ, ಭೀಮಾಶಂಕರ ಮಾಡಿಯಾಳ, ಮೌಲಾಮುಲ್ಲಾ, ಜಗದೇವಿ ಹೆಗಡೆ, ವಿಠ್ಠಲ ಪೂಜಾರಿ, ಸುಧಾಮ ಧನ್ನಿ, ಶಾಂತಪ್ಪ ಪಾಟೀಲ, ಎಸ್.ಎಂ.ಶರ್ಮಾ ನೇತೃತ್ವ ವಹಿಸಿದ್ದರು.

**

ಅಜ್ಜಿ ಕೈಗೆ ಗಾಯ

ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದ ಅಕ್ಷರ ದಾಸೋಹ ಕಾರ್ಯಕರ್ತೆ, ತಾಲ್ಲೂಕಿನ ಕಲ್ಮೂಡ ಗ್ರಾಮದ ಕಮಲಾಬಾಯಿ ಅವರ ಕೈಗೆ ಬಳೆ ಚೂರು ತಾಗಿದ್ದರಿಂದ ರಕ್ತ ಸುರಿಯಿತು.

‘ಮಂಗಳವಾರದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಜಿಲ್ಲಾಧಿಕಾರಿ ಕಚೇರಿ ಎದುರು ರಾತ್ರಿಯಿಡೀ ಧರಣಿ ನಡೆಸಿದ್ದೇವೆ. ಅಲ್ಲಿಗೆ ಯಾವ ಪೊಲೀಸರೂ ಬಂದು ಕೇಳಲಿಲ್ಲ. ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಳ್ಳಾಟ, ನೂಕಾಟ ಮಾಡಿದರು. ಇದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಂಬಾಣಿ ನೃತ್ಯ, ಮೋದಿಗೆ ಧಿಕ್ಕಾರ

ರಾತ್ರಿಯಿಡೀ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ವಾಸ್ತವ್ಯ ಮಾಡಿದ ಅಂಗನವಾಡಿ ಮತ್ತು ಅಕ್ಷರ ದಾಸೋಹ ಕಾರ್ಯಕರ್ತೆಯರು ಬೆಳಿಗ್ಗೆ ರಸ್ತೆ ಮೇಲೆಯೇ ಉಪ್ಪಿಟ್ಟು ತಯಾರಿಸಿ ಸೇವಿಸಿದರು.ಲಂಬಾಣಿ ಮಹಿಳೆಯರು ಲಂಬಾಣಿ ನೃತ್ಯ ಪ್ರದರ್ಶಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸದೇ ಮೋಸ ಮಾಡಿದ್ದಾರೆ. ಬಡವರು, ರೈತರು, ಕೃಷಿ ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯಿಸಿದ್ದಾರೆ’ ಎಂದು ಲಂಬಾಣಿ ಭಾಷೆಯ ಹಾಡಿನ ಮೂಲಕ ಮೋದಿಯನ್ನು ತೀವ್ರವಾಗಿ ಜರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT