ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಹಸು ಸಾವು; ಚಿರತೆ ದಾಳಿ ಶಂಕೆ

ಕಾಡಂಚಿನ ಲಾಡ್ಲಾಪುರ ಸಮೀಪದ ರಾಮನಾಯಕ ತಾಂಡಾದ ಜಮೀನಿನಲ್ಲಿ ನಡೆದ ಘಟನೆ
Last Updated 11 ಜನವರಿ 2022, 7:13 IST
ಅಕ್ಷರ ಗಾತ್ರ

ಲಾಡ್ಲಾಪುರ (ವಾಡಿ): ಲಾಡ್ಲಾಪುರ ಸಮೀಪದರಾಮನಾಯಕ ತಾಂಡಾದ ಜಮೀನಿನಲ್ಲಿ ಸೋಮವಾರ ನಸುಕಿನಲ್ಲಿ ಹಸುವೊಂದು ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದೆ. ಚಿರತೆ ದಾಳಿಯಿಂದಲೇ ಈ ಹಸು ಮೃತಪಟ್ಟಿದೆ ಎಂದು ತಾಂಡಾದ ಜನ ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ರಾತ್ರಿಯವರೆಗೂ ಸ್ಪಷ್ಟಪಡಿಸಲಿಲ್ಲ.

ಕರದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಮನಾಯಕ ತಾಂಡಾವು ಕಾಡಂಚಿಗೆ ಹೊಂದಿಕೊಂಡಿದೆ. ಈ ತಾಂಡಾದ ನಿವಾಸಿ ರಮೇಶ ಜಾಧವ ಅವರಿಗೆ ಸೇರಿದ ಹಸು ದಾಳಿಯಿಂದ ಮೃತಪಟ್ಟಿದೆ. ಗುಡ್ಡಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಮಂಗಳವಾರ ಸಂಜೆ ಎರಡು ಹಸು ಹಾಗೂ ನಾಲ್ಕು ಎತ್ತುಗಳನ್ನು ಕಟ್ಟಿಹಾಕಿದ್ದ ರಮೇಶ ಅವರು, ಸೋಮವಾರ ಬೆಳಿಗ್ಗೆ ಹೋಗಿ ನೋಡಿದಾಗ ಘಟನೆ ಗೊತ್ತಾಗಿದೆ. ಉಳಿದ ಒಂದು ಹಸು, ನಾಲ್ಕೂ ಎತ್ತುಗಳು ಸುರಕ್ಷಿತವಾಗಿವೆ.

ಮೃತ ಹಸುವಿನ ಕುತ್ತಿಗೆಯ ಬಳಿ ಬಲವಾದ ಉಗುರುಗಳಿಂದ ಪರಚಿದ ಗಾಯಗಳಾಗಿವೆ. ಹಿಂಭಾಗವನ್ನು ಪೂರ್ಣವಾಗಿ ಕಚ್ಚಿ ತೆಗೆದಿದ್ದು, ತೀವ್ರ ರಕ್ತಸ್ರಾವವಾಗಿದೆ. ಮಾಂಸ ಖಂಡ ಕಿತ್ತು ಬಂದಿದೆ. ಹಸುವಿನ ಪರಿಸ್ಥಿತಿ ನೋಡಿದ ಗ್ರಾಮಸ್ಥರು ಇದು ಚಿರತೆಯದ್ದೇ ದಾಳಿ ಎಂದು ಬಲವಾಗಿ ನಂಬಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದಚಿತ್ತಾಪುರ ವಲಯ ಅರಣ್ಯ ಅಧಿಕಾರಿ ವಿಜಯ ಬಡಿಗೇರ, ‘ಮೇಲ್ನೋಟಕ್ಕೆ ಚಿರತೆ ದಾಳಿ ಎಂದು ಗೊತ್ತಾದರೂ ಸ್ಪಷ್ಟವಾದ ಗುರುತು ಸಿಕ್ಕಿಲ್ಲ. ಸ್ಥಳದಲ್ಲಿ ಚಿರತೆ ಹೆಜ್ಜೆ ಗುರುತುಗಳೂ ಇಲ್ಲ. ಕಾಡಂಚಿನಲ್ಲಿ ತೋಳಗಳ ಸಂಖ್ಯೆಯೂ ಹೆಚ್ಚಾಗಿದ್ದು, ಅವುಗಳ ದಾಳಿಯಿಂದಲೂ ಹಸು ಸತ್ತಿರಬಹುದು. ಮರಣೋತ್ತರ ವರದಿ ಬಂದ ಬಳಿಕ ನಿಖರ ಕಾರಣ ಗೊತ್ತಾಗಲಿದೆ. ಆದರೂ ಎಚ್ಚರಿಕೆಯಿಂದ ಇರುವಂತೆ ಗ್ರಾಮಸ್ಥರಿಗೆ ತಿಳಿಸಿದ್ದೇವೆ’ ಎಂದರು.

ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ: ಸೋಮವಾರ ಮಧ್ಯಾಹ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಾಲವಾರ ವಲಯ ಅರಣ್ಯ ಸಿಬ್ಬಂದಿ ಹಸುವಿನ ಕಳೆಬರ ಪರಿಶೀಲಿಸಿದರು. ‘ಹಸುವಿನ ಕುತ್ತಿಗೆಯ ಮೇಲೆ ಆದ ಉಗುರಿನ ಗಾಯ ಹಾಗೂ ಅದರ ಮಾಂಸ ಕಿತ್ತುತಿಂದಿರುವ ರೀತಿ ನೋಡಿದರೆ ಚಿರತೆ ದಾಳಿ ನಡೆಸಿದೆ ಎಂದು ಅಂದಾಜಿಸಬಹುದು. ಆದರೆ, ಈ ಕಾಡಿನಲ್ಲಿ ಹಲವು ರೀತಿಯ ವನ್ಯಮೃಗಗಳಿವೆ. ಹಾಗಾಗಿ, ಹಸುವಿನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ನಿಖರ ಮಾಹಿತಿ ಗೊತ್ತಾಗಲಿದೆ’ ಎಂದರು.

ರೈತರಲ್ಲಿ ಆತಂಕ; ರಾಶಿಗೆ ಹಿನ್ನಡೆ
ವಾಡಿಯೂ ಸೇರಿದಂತೆ ಚಿತ್ತಾಪುರ ತಾಲ್ಲೂಕಿನಾದ್ಯಂದ ಹೊಲಗಳಲ್ಲಿ ಈಗ ತೊಗರಿ ಹಾಗೂ ಶೇಂಗಾ ರಾಶಿ ಭರದಿಂದ ನಡೆದಿದೆ. ಹಲವು ರೈತರು ರಾಶಿ ಪ್ರಕ್ರಿಯೆ ಮುಗಿಸಲು ಜಮೀನಿನಲ್ಲಿ ಬೀಡು ಬಿಟ್ಟಿದ್ದಾರೆ. ಈಗ ಚಿರತೆ ದಾಳಿಯ ಸುದ್ದಿ ಕೇಳಿ ರೈತರು ಭಯಗೊಂಡಿದ್ದಾರೆ.

ಜಮೀನಿಗೆ ತೆರಳಲು ಹೀಂದೇಟು ಹಾಕುತ್ತಿದ್ದಾರೆ. ಹಲವರು ಜಮೀನಿನಲ್ಲಿರುವ ತಮ್ಮ ಜಾನುವಾರುಗಳನ್ನು ಸೋಮವಾರವೇ ಮನೆಗೆ ತಂದು ಕಟ್ಟಿದರು. ರಾಶಿ ಕಾರ್ಯದಲ್ಲಿ ತೊಡಗಿದ ರೈತರು ಬೆಂಕಿ ಹಾಕಿಕೊಂಡು, ಭಯದಲ್ಲೇ ಕಾಲ ಕಳೆಯುವಂತಾಗಿದೆ.

ಹಲವೆಡೆ ಡಂಗೂರು: ಚಿರತೆ ದಾಳಿ ನಡೆದಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತು. ಹಸುವಿನ ಕಳೆಬರದ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಇದರಿಂದಾಗಿ ಕಾಡಂಚಿನಲ್ಲಿರುವ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಗ್ರಾಮ ಹಾಗೂ ತಾಂಡಾಗಳಲ್ಲಿ ಸೋಮವಾರ ರಾತ್ರಿ ಡಂಗೂರ ಸಾರಿ ಎಚ್ಚರಿಕೆ ನೀಡಿದವು.

‘ಕಾಡಂಚಿನಲ್ಲಿ ಚಿರತೆ ಸುತ್ತಾಡಿದ ಶಂಕೆ ವ್ಯಕ್ತವಾಗಿದ್ದು, ಆಯಾ ಗ್ರಾಮಗಳು ಹಾಗೂ ತಾಂಡಾಗಳ ನಿವಾಸಿಗಳು ಎಚ್ಚರಿಕೆ ವಹಿಸಬೇಕು. ಸಂಜೆಗೆ ಕಾಡಿನ ಹತ್ತಿರ ಹೋಗಬಾರದು. ಜಾನುವಾರುಗಳನ್ನು ಮೇಯಿಸಲು ಕಾಡಿನಲ್ಲಿ ಬಿಡಬಾರದು ಎಂದು ಡಂಗೂರ ಸಾರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT