ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮಂತೆಯೇ ನಾನೂ ಕಷ್ಟದಲ್ಲೇ ಬೆಳೆದೆ...

ಜನರಿಗೆ ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರರು ಬರೆದಿದ್ದ ಬಹಿರಂಗ ಪತ್ರ
Last Updated 25 ನವೆಂಬರ್ 2019, 2:59 IST
ಅಕ್ಷರ ಗಾತ್ರ

ಆತ್ಮೀಯರೇ,

ನೀವೆಲ್ಲ ಹೇಗಿದ್ದೀರಿ? ನಿಮ್ಮೊಂದಿಗೆ ಪತ್ರ ಮುಖೇನ ಸಂವಾದ ನಡೆಸಿ, ವರ್ಷಗಳೇ ಗತಿಸಿವೆ. ಮೊಬೈಲ್ ಫೋನ್‌ ಬಳಕೆ ಹೆಚ್ಚಾದ ಕಾರಣ ಪತ್ರ ಬರೆಯುವುದೇ ಕಡಿಮೆಯಾಗಿದೆ. ಆದರೂ ನಿಮ್ಮೆಲ್ಲರ ನೆನಪು ಆಗಾಗ್ಗೆ ಕಾಡುವ ಕಾರಣ ಪತ್ರ ಬರೆಯದೇ ಸುಮ್ಮನಿರಲು ಆಗಲಿಲ್ಲ.

ನಿಮ್ಮಂತೆಯೇ ಕಷ್ಟಪಟ್ಟು ಬೆಳೆದ ನಾನು ಶಂಕರವಾಡಿ, ಬಂಕೂರು, ಶಹಾಬಾದ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಾಲ್ಯ ಕಳೆದೆ. 1940-50ರ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸೌಕರ್ಯಗಳೂ ಇರಲಿಲ್ಲ. ಶಹಾಬಾದ್‌ನ ಸಿಮೆಂಟ್ ಫ್ಯಾಕ್ಟರಿಯೊಂದೇ ಗ್ರಾಮಸ್ಥರಿಗೆ ಜೀವಾಳವಾಗಿತ್ತು. ಶಾಲೆ ಕಲಿಯಲಿ–ಬಿಡಲಿ, ಸಿಮೆಂಟ್ ಫ್ಯಾಕ್ಟರಿಯಲ್ಲಿ ನೌಕರಿ ಖಾತ್ರಿ ಎಂಬುದು ಮಾತ್ರ ಗೊತ್ತಿತ್ತು.

ಮನೆಯಲ್ಲಿ ಬಡತನವಿತ್ತು. ಸರ್ಕಾರಿ ಶಾಲೆಯಲ್ಲಿ ಕಲಿತ ನಾನು ದೊಡ್ಡ ಕನಸು ಹೊಂದಿದ್ದೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿ, ಅದೇ ಪ್ರದೇಶದಲ್ಲಿ ಇಡೀ ಬದುಕು ಕಳೆಯುವ ಇಚ್ಛೆ ಇರಲಿಲ್ಲ. 1965ರಲ್ಲಿ ಎಸ್‌ಬಿಆರ್‌ ಕಾಲೇಜಿನಲ್ಲಿ ಬಿ.ಎ. ಪದವಿ ಪೂರ್ಣಗೊಳಿಸಿದ ನಾನು ಕೆಲ ವರ್ಷ ಉದ್ಯೋಗಕ್ಕಾಗಿ ಅಲೆದಾಡಿದೆ. ಆಗ ಸಾಹಿತಿ ಬಿ.ಎ.ಸನದಿ, ತವಾಗ ಭೀಮಸೇನರಾವ್ ಅವರ ಮಾರ್ಗದರ್ಶನ ಸಿಕ್ಕಿತು. ಉತ್ತಮ ಭವಿಷ್ಯ ರೂಪಿಸಿಕೊಳ್ಳವ ಬಗ್ಗೆ ಸ್ಪಷ್ಟ ಚಿತ್ರಣ ಸಿಗತೊಡಗಿತು. ನಂತರ ರಾಯಚೂರಿನ ಕಾಲೇಜಿನಲ್ಲಿ ಉಪನ್ಯಾಸಕನ ನೌಕರಿ ಸಿಕ್ಕಿ, ಅಲ್ಲಿ 18 ವರ್ಷ ಕಾರ್ಯ ನಿರ್ವಹಿಸಿದೆ.

ಆದರೆ, ಅದು ಸುಲಭದ ಹಾದಿಯಾಗಿರಲಿಲ್ಲ. ಸಾಹಿತ್ಯ ಕುರಿತು ಗೆಳೆಯರೊಡನೆ ಚರ್ಚಿಸುತ್ತಿದ್ದೆ. ಕಥೆ, ಕವನ, ಲೇಖನ ಬರೆಯುತ್ತಿದ್ದೆ. ಆದರೆ ಅದನ್ನು ಓದಿ ಹಿರಿಯರು, ‘ಇನ್ನೊಬ್ಬರ ಕವನ ನೋಡಿಕೊಂಡು ಅಲ್ಲ, ಸ್ವಂತ ಆಲೋಚನಾ ಶಕ್ತಿಯಿಂದ ಬರೆಯಬೇಕು’ ಎನ್ನುತ್ತಿದ್ದರು. ಮುಲಾಜಿಲ್ಲದೆ ಕವನ ಬರೆದ ಕಾಗದ ಹರಿಯುತ್ತಿದ್ದರು. ಆದರೆ ನಾನು ನೊಂದುಕೊಳ್ಳದೇ ಮತ್ತೆ ಹೊಸತೊಂದು ಬರೆಯಲು ಮುಂದಾಗುತ್ತಿದ್ದೆ. ಕಲಿಯುವುದು ಇನ್ನೂ ತುಂಬಾ ಇದೆ ಎಂಬ ಆಶಾಭಾವ ಕಳೆದುಕೊಳ್ಳಲಿಲ್ಲ. ಹಗಲು–ರಾತ್ರಿಯೆನ್ನದೆ ಚಿಂತಿಸಿದೆ. ಬರೆದು ಬರೆದು ತಿದ್ದಿದೆ. ಹೊಸ ಪ್ರಯತ್ನಗಳನ್ನು ಮಾಡಿದೆ.

ಮನಸ್ಸಿಗೆ ಎಷ್ಟೇ ಬೇಸರವಾದರೂ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವುದು ಯಾವತ್ತೂ ಬಿಡಲಿಲ್ಲ. ಇಂಗ್ಲಿಷ್ ಸ್ಪಷ್ಟವಾಗಿ ಬಾರದಿದ್ದರೂ ಇಂಗ್ಲಿಷ್ ಕೃತಿಗಳನ್ನು ಕಷ್ಟಪಟ್ಟು ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅವು ನನಗೆ ಹೊಸ ವಿಚಾರ, ಆಲೋಚನೆಗಳಿಗೆ ಎಡೆ ಮಾಡಿಕೊಟ್ಟವು. ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಕಾರ್ಲ್‌ಮಾರ್ಕ್ಸ್ ಬರಹಗಳು ದಟ್ಟ ಪ್ರಭಾವ ಬೀರಿದವು. ರೈಲು, ಬಸ್‌ನಲ್ಲಿ ಪ್ರಯಾಣಿಸುವಾಗ ಅಥವಾ ಅವಕಾಶ ಸಿಕ್ಕಾಗಲೆಲ್ಲ, ಓದುವುದನ್ನು ರೂಢಿಸಿಕೊಂಡ ಕಾರಣ ಭಾಷೆ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು.

ಇಂಥದ್ದೇ ಸಿದ್ಧಾಂತ, ಆಯಾ ಧರ್ಮದ, ವಿಚಾರಗಳ ಬಗ್ಗೆ ಮಾತ್ರ ತಿಳಿದುಕೊಳ್ಳಬೇಕೆಂದು ನಾನು ಎಂದಿಗೂ ಸಂಕುಚಿತ ಆಗಲಿಲ್ಲ. ಜ್ಞಾನ ವೃದ್ಧಿಸುವ ಪ್ರತಿಯೊಂದು ವಿಷಯ ಅರಿಯಲು ಪ್ರಯತ್ನಿಸಿದೆ. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮುಂತಾದ ಮಹನೀಯರ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡಿದೆ. ಎಲ್ಲಾ ಧರ್ಮಗಳು ಸಾರಿದ ಸಂದೇಶಗಳನ್ನು ಅರಿತುಕೊಂಡೆ. ಬದುಕಿನ ಸವಾಲುಗಳನ್ನು ತಾಳ್ಮೆ, ಶಾಂತಚಿತ್ತದಿಂದ ಹೇಗೆ ಎದುರಿಸಬೇಕು ಎಂಬುದನ್ನು ಪುಸ್ತಕಗಳಿಂದಲೇ ಕಲಿತೆ.

ಒಟ್ಟಾರೆ ಜೀವನದಲ್ಲಿ ನಾನು ಮೂರು ಸಂಗತಿಗಳನ್ನು ಎಂದಿಗೂ ಮರೆಯಲಿಲ್ಲ. ಶಿಕ್ಷಣ, ಕ್ರಾಂತಿ ಮತ್ತು ಅವಕಾಶ. ವ್ಯಕ್ತಿತ್ವ ವಿಕಸನಕ್ಕೆ ಇವು ಪ್ರಮುಖ ಪಾತ್ರ ವಹಿಸತ್ತವೆ. ಶಿಕ್ಷಣ ಬದುಕಿಗೆ ಚೌಕಟ್ಟು ಹಾಕಿಕೊಟ್ಟರೆ, ಕ್ರಾಂತಿಕಾರಿ ವಿಚಾರಗಳು ಬಂಡಾಯದ ಮನೋಭಾವ ಬೆಳೆಸುತ್ತವೆ. ಅವಕಾಶ ಬಂದಾಗ, ಅದನ್ನು ಯಾವತ್ತೂ ಕಳೆದುಕೊಳ್ಳಬಾರದು.

ಭಾವನಾ ಜೀವಿಯಾಗಿ ರೂಪುಗೊಳ್ಳುವುದರ ಜೊತೆಜೊತೆಗೆ ವಾಸ್ತವ ಜಗತ್ತಿನ ಬಗ್ಗೆಯೂ ಜ್ಞಾನ ಇರಬೇಕು. ಬದುಕಿಗೆ ಬೇಕಾದ ಅವಶ್ಯಕತೆ ಪೂರೈಸಿಕೊಳ್ಳುವತ್ತ, ಆರ್ಥಿಕ ಸ್ವಾವಲಂಬಿಯಾಗುವತ್ತ ಮತ್ತು ನಿಶ್ಚಿತ ಗುರಿ ತಲುಪುವತ್ತ ಸದಾ ಏಕಾಗ್ರತೆ ಹೊಂದಿರಬೇಕು. ಇದೆಲ್ಲವನ್ನೂ ಪಾಲಿಸಿದಾಗ ಮಾತ್ರ, ಜೀವನದಲ್ಲಿ ಹಂತಹಂತವಾಗಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.

ಅಂದ ಹಾಗೆ, ಪತ್ರ ದೀರ್ಘವಾಯಿತು. ಮನಸ್ಸಿನಲ್ಲಿ ಇದ್ದುದ್ದೆಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಅದಕ್ಕೆ ಇಷ್ಟೆಲ್ಲ ಬರೆದೆ. ನಾನಿನ್ನು ಹೋಗಿ ಬರುವೆ...

ನಿರೂಪಣೆ: ರಾಹುಲ ಬೆಳಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT