ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುವಿವಿ ಮೂಲಸೌಕರ್ಯಕ್ಕೆ ₹30 ಕೋಟಿ: ಕುಲಪತಿ ಪ್ರೊ. ದಯಾನಂದ

ಗ್ರಂಥಪಾಲಕರ ದಿನಾಚರಣೆಯಲ್ಲಿ ಕುಲಪತಿ ಪ್ರೊ. ದಯಾನಂದ ಅಗಸರ
Published 30 ಆಗಸ್ಟ್ 2024, 4:55 IST
Last Updated 30 ಆಗಸ್ಟ್ 2024, 4:55 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ರಸ್ತೆ, ಕಟ್ಟಡಗಳ ನವೀಕರಣ, ಪೀಠೋಪಕರಣ, ವಿದ್ಯಾರ್ಥಿ ವಸತಿನಿಲಯಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ₹ 30 ಕೋಟಿ ವೆಚ್ಚದ ಯೋಜನೆಗಳನ್ನು ರೂಪಿಸಲಾಗಿದ್ದು, ಶೀಘ್ರವೇ ಕೆಲಸ ಆರಂಭವಾಗಲಿದೆ ಎಂದು ಕುಲಪತಿ ಪ್ರೊ. ದಯಾನಂದ ಅಗಸರ ತಿಳಿಸಿದರು.

ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಗ್ರಂಥಾಲಯ ಪಿತಾಮಹ ಎಸ್‌.ಆರ್. ರಂಗನಾಥನ್ ಅವರ 132ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಜ್ಯಪಾಲರ ಸೂಚನೆ ಮೇರೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಆರ್ಥಿಕ ನೆರವು ನೀಡುತ್ತಿದ್ದು, ವಿಶ್ವವಿದ್ಯಾಲಯದ ಪ್ರಮುಖ ರಸ್ತೆಗಳ ದುರಸ್ತಿ ಆಗಲಿದೆ. ಗ್ರಂಥಾಲಯ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಸಭಾಂಗಣಗಳು, ಎಸಿ ವ್ಯವಸ್ಥೆ, ಪೀಠೋಪಕರಣಗಳು, ಕಟ್ಟಡಗಳ ನವೀಕರಣ, ಸ್ಮಾರ್ಟ್ ಕ್ಲಾಸ್ ಗಳ ನಿರ್ಮಾಣಕ್ಕೆ ಈ ನಿಧಿಯನ್ನು ಬಳಸಿಕೊಳ್ಳಲಾಗುವುದು. ರಸ್ತೆಗಳ ಅಭಿವೃದ್ಧಿಗೆ ₹ 10 ಕೋಟಿ ಖರ್ಚು ಮಾಡಲಾಗುತ್ತಿದೆ’ ಎಂದು ಕುಲಪತಿ ಹೇಳಿದರು.

‘ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಪುಸ್ತಕಗಳು ಸಹಕಾರಿಯಾಗಿದ್ದು, ಗುಲಬರ್ಗಾ ವಿ.ವಿ. ಗ್ರಂಥಾಲಯದಲ್ಲಿ ವಿವಿಧ ವಿಷಯಗಳ ಪುಸ್ತಕಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಗತ್ಯವಾದ ನಿಯತಕಾಲಿಕೆಗಳನ್ನು ಇರಿಸಲಾಗಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಪ್ರೊ. ದಯಾನಂದ ಅಗಸರ ಸಲಹೆ ನೀಡಿದರು.

ಗುವಿವಿ ಮುಖ್ಯ ಗ್ರಂಥಪಾಲಕ ಪ್ರೊ. ಸುರೇಶ ಜಂಗೆ ಮಾತನಾಡಿ, ‘ವಿದ್ಯಾರ್ಥಿಗಳು ಸುಲಭವಾಗಿ ಪುಸ್ತಕಗಳು ದೊರೆಯುವಂತೆ ಮಾಡಲು ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ. ವಿ.ವಿ. ವಿದ್ಯಾರ್ಥಿಗಳು ಬೇರೆ ಊರಿನಲ್ಲಿದ್ದರೂ ತಮಗೆ ನೀಡಲಾದ ಐಡಿ, ಪಾಸ್‌ವರ್ಡ್ ಬಳಸುವ ಮೂಲಕ ಪುಸ್ತಕಗಳನ್ನು ಆನ್‌ಲೈನ್‌ ಮೂಲಕವೇ ಪಡೆದುಕೊಳ್ಳಬಹುದು’ ಎಂದರು.

ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ. ಭೈರಪ್ಪ, ಪತ್ರಕರ್ತ ಮನೋಜಕುಮಾರ್ ಗುದ್ದಿ ಮಾತನಾಡಿದರು.

ಗ್ರಂಥಾಲಯದ ಸಂಯೋಜಕಿ ಮಮತಾ ಮೇಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ‍ಪತ್ರವನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT