ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸಂಘಟಿತರಾದಾಗ ಬಲಿಷ್ಠ ಸಮಾಜ ಸಾಧ್ಯ’

Published : 1 ಸೆಪ್ಟೆಂಬರ್ 2024, 3:18 IST
Last Updated : 1 ಸೆಪ್ಟೆಂಬರ್ 2024, 3:18 IST
ಫಾಲೋ ಮಾಡಿ
Comments

ಅಫಜಲಪುರ: ‘ಸಮಾಜದಲ್ಲಿನ ದುರ್ಬಲರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದಾಗ ಮಾತ್ರ ಸಂಘಟನೆಗೆ ಬೆಲೆ ಬರುತ್ತದೆ. ಬಸವ ತತ್ವ ಪಾಲನೆ ನಮ್ಮೆಲ್ಲರ ಧ್ಯೇಯವಾಗಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲ್‌ನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಬಣಜಿಗ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಲಿಂಗಾಯತ ಉಪ ಪಂಗಡಗಳು ಸಂಘಟಿತರಾಗಿ ಬೆಳೆದಾಗ ಬಲಿಷ್ಠ ವೀರಶೈವ ಲಿಂಗಾಯತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಸಮಾಜ ಸಂಘಟನೆಗೆ ಭೇದ ಭಾವವನ್ನು ಮರೆತು ಒಂದಾಗುವುದರ ಜೊತೆಗೆ, ಇತರ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಬಣಜಿಗರು ವ್ಯಾಪಾರಕ್ಕೆ ಸೀಮಿತವಾಗದೆ, ವಿವಿಧ ವೃತ್ತಿಗಳಲ್ಲಿ ಸಾಧನೆಗೈದು ಆದರ್ಶಪ್ರಾಯರಾಗಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ನಮ್ಮ ಸಮಾಜದವರಿದ್ದಾರೆ. ನಮ್ಮ ಸಮಾಜದವರು ಸ್ವಾಭಿಮಾನಿಗಳು ಪೆಟ್ಟು ಬಿದ್ದರೆ ಸಹಿಸುವುದಿಲ್ಲ’ ಎಂದು ಅವರು ಹೇಳಿದರು.

ಮಾಜಿ ಶಾಸಕ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಮಾತನಾಡಿ, ‘ರಾಜ್ಯದಲ್ಲಿ ನಮ್ಮ ಸಮಾಜದಿಂದ 7 ಜನ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಅದಕ್ಕೆಲ್ಲಾ ಸರ್ವಜನರ ಆಶೀರ್ವಾದವಿದೆ. ನಮ್ಮ ಸಮಾಜದ ಜನಸಂಖ್ಯೆ ಕಡಿಮೆ ಇದ್ದರೂ ನಾವು ವಿಶ್ವಾಸ, ನಂಬಿಕೆ ಉಳ್ಳವರಾಗಿದ್ದೇವೆ ಅದಕ್ಕಾಗಿ ನಮಗೆ ಅಧಿಕಾರ ಸಿಕ್ಕಿದೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಜಿ.ಪಂ. ಮಾಜಿ ಸದಸ್ಯ ಅರುಣಕುಮಾರ.ಎಂ.ವೈ.ಪಾಟೀಲ್ ಮಾತನಾಡಿದರು. ಶಾಸಕ ಶಶೀಲ್ ನಮೋಶಿ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್, ಅಮರನಾಥ ಪಾಟೀಲ್, ಅಪ್ಪಾಸಾಹೇಬ ಪಾಟೀಲ್, ಅಂದಪ್ಪ ಜವಳಿ, ಬಣಜಿಗ ಸಮಾಜದ ತಾಲ್ಲೂಕಾಧ್ಯಕ್ಷ ಬಸಣ್ಣ ಗುಣಾರಿ, ಪ್ರಮುಖರಾದ ಡಾ.ಶರಣಬಸಪ್ಪ ದಾಮಾ, ಮಲ್ಲಪ್ಪ ಗುಣಾರಿ, ಶರಣು ನೂಲಾ, ಮಹಾಂತೇಶ ನೂಲಾ, ಸಂತೋಷ ದಾಮಾ, ಮುರುಘೇಂದ್ರ ಮಸಳಿ, ಧಾನು ನೂಲಾ, ಶರಣು ಶೆಟ್ಟಿ, ರಮೇಶ ಶೆಟ್ಟಿ, ಧಾನು ಫತಾಟೆ, ಸುನೀಲ ಶೆಟ್ಟಿ, ಶೈಲೇಶ ಗುಣಾರಿ, ಸಿದ್ದು ಹಳಗೋದಿ, ಮಲ್ಲಿಕಾರ್ಜುನ ಇಂಗಳೇಶ್ವರ, ಜಿ.ಎಸ್.ಬಾಳಿಕಾಯಿ, ಗಂಗಾಧರ ಶ್ರೀಗಿರಿ, ನಾನಾಸಾಹೇಬ ಪಾಟೀಲ್, ಚನ್ನುಗೌಡ ಪಾಟೀಲ್, ಸೋಮು ಶ್ರೀಗಿರಿ, ಶಂಕರ ಸೋಬಾನಿ, ಜಯಶ್ರೀ ಉಪ್ಪಿನ್ ಸೇರಿದಂತೆ ಇತರರು ಹಾಜರಿದ್ದರು.

ಬಣಜಿಗ ಕಾಯಕ ರತ್ನ ಪ್ರಶಸ್ತಿ: ಡಾ.ಶರಣಬಸಪ್ಪ ದಾಮಾ, ಡಾ.ಶಿವಕುಮಾರ ಗುಣಾರಿ ಐಪಿಎಸ್, ಚಂದ್ರಶೇಖರ ಕರಜಗಿ, ಗುರುಪಾದಪ್ಪ ಫತಾಟೆ ಅವರಿಗೆ ರಾಜ್ಯ ಮಟ್ಟದ ಬಣಜಿಗ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಶೀಘ್ರದಲ್ಲೇ ಸರ್ಕಾರ ಉರುಳಲಿದೆ’

ಮುಖ್ಯಮಂತ್ರಿಗಳು ತಪ್ಪು ಮಾಡಿಲ್ಲ ಎಂದರೆ ಹೆದರುವ ಅವಶ್ಯಕತೆಯಿರಲಿಲ್ಲ. ಆದರೆ ಶಾಸಕರು ಸಚಿವರು ಬೀದಿಗಳಿದು ಹೋರಾಟ ಮಾಡುತ್ತಿರುವುದು ನೋಡಿದರೆ ಸಿಎಂ ಎದೆ ಬಡಿತ ಶುರುವಾಗಿದೆ. ಮುಖ್ಯಮಂತ್ರಿಗಳು ತಪ್ಪಿತಸ್ಥರಾಗಿದ್ದು ನೈತಿಕತೆಯಿಂದ ರಾಜೀನಾಮೆ ನೀಡಬೇಕು. ತಮ್ಮ ತಪ್ಪು ಜನರಿಂದ ಮರೆಮಾಚಲು ಪ್ರೆಸ್‌ಮೀಟ್‌ ಮಾಡಿ ಸುದ್ದಿ ಬರುತ್ತೊ ಇಲ್ವೋ ಅಂತ ನಂತರ ಅದನ್ನೇ ಪತ್ರಿಕೆಗಳಿಗೆ ಜಾಹಿರಾತು ನೀಡುತ್ತಾರೆ. ಯಾವುದೇ ಆಪರೇಷನ್ ಕಮಲ ಇಲ್ಲ. ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲೇ ತಿಕ್ಕಾಟ ಶುರುವಾಗಿದ್ದು ಶೀಘ್ರದಲ್ಲೇ ಸರ್ಕಾರ ಉರುಳಲಿದೆ. ಜಗದೀಶ ಶೆಟ್ಟರ್ ಮಾಜಿ ಸಿಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT