ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ14ರಿಂದ ಬೆಂಗಳೂರಿಗೆ ಪಾದಯಾತ್ರೆ

ದೀಕ್ಷ ಪಂಚಮಸಾಲಿ 2ಎ ಸೇರ್ಪಡೆಗೆ ಆಗ್ರಹ: ಜಯಮೃತ್ಯುಂಜಯ ಸ್ವಾಮೀಜಿ
Last Updated 29 ಡಿಸೆಂಬರ್ 2020, 15:56 IST
ಅಕ್ಷರ ಗಾತ್ರ

ಕಲಬುರ್ಗಿ: ದೀಕ್ಷ –ಪಂಚಮಸಾಲಿ ಸಮಾಜದವರಿಗೆ 2ಎ ಮೀಸಲಾತಿ ಕಲ್ಪಿಸಬೇಕು ಮತ್ತು ಲಿಂಗಾಯತ ಧರ್ಮದ ಎಲ್ಲ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಜ.14ರಿಂದ ಕೂಡಲ ಸಂಗಮದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಆರಂಭಿಸಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೆಂಗಳೂರು ಚಲೊ ಹೋರಾಟದ ಪ್ರಥಮ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಬೆಳಗಾವಿಯ ಸುವರ್ಣ ಸೌಧ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದಾಗ ಮುಖ್ಯಮಂತ್ರಿ ಹಾಗೂ ಸಚಿವರು ನೀಡಿದ ಭರವಸೆ ಪರಿಗಣಿಸಿ ಹಿಂದಕ್ಕೆ ಪಡೆಯಲಾಗಿತ್ತು. ಆದರೆ, ಸರ್ಕಾರ ಬೇಡಿಕೆ ಈಡೇರಿಸಿಲ್ಲದ ಕಾರಣ ಹೋರಾಟಕ್ಕೆ ಅಣಿಯಾಗಲು ನಿರ್ಧರಿದ್ದೇವೆ. ಈ ಹೋರಾಟ ಇಡೀ ಲಿಂಗಾಯತ ಸಮುದಾಯದಲ್ಲಿಯೇ ಬಹುಸಂಖ್ಯಾತ ದೀಕ್ಷ–ಪಂಚಮಸಾಲಿಯವರಾಗಿರವುದರಿಂದ ಎಲ್ಲ ಒಳಪಂಡಗಡದವರನ್ನು ಜತೆಗೂಡಿಸಿಕೊಂಡು ಮುಂದುವರೆಯುತ್ತಿದ್ದೇವೆ’ ಎಂದು ಹೇಳಿದರು.

‘ಸಂಕ್ರಾತಿಯ ದಿನ ಉತ್ತರಾಯಣ ಕಾಲ ಸೂರ್ಯನ ಪಥ ಬದಲಿಸುವ ದಿನವಾಗಿದ್ದರಿಂದ ಅಂದೇ ಪಾದಯಾತ್ರೆಯನ್ನು ಆರಂಭಿಸುತ್ತಿದ್ದು, ಒಂದು ತಿಂಗಳ ಕಾಲ ಪಾದಯಾತ್ರೆ ನಡೆಯಲಿದೆ. ಕೂಡಲ ಸಂಗಮದಿಂದ ಶುರುವಾಗಿ ಕೊಪ್ಪಳ ಮಾರ್ಗವಾಗಿ ಮಧ್ಯಕರ್ನಾಟಕದಲ್ಲಿ ಹಾದು ಬೆಂಗಳೂರು ತಲುಪಲಿದೆ. ಪಾದಯಾತ್ರೆ ಆರಂಭದ ದಿನ 2 ಲಕ್ಷ ಜನರನ್ನು ಸೇರಿಸುವ ಉದ್ದೇಶವಿದೆ. ಕೊನೆಯ ದಿನ ಬೆಂಗಳೂರಿನಲ್ಲಿ 10 ಲಕ್ಷ ಲಿಂಗಾಯತರನ್ನು ಸೇರಿಸಿಕೊಂಡು ವಿಧಾನ ಸೌಧ ಚಲೊ ನಡೆಸಲು ನಿರ್ಧರಿಸಲಾಗಿದೆ’ ಸ್ವಾಮೀಜಿ ವಿವರಿಸಿದರು.

ಲಿಂಗಾಯತ ಸಮುದಾಯದ 104 ಉಪ ಪಂಡಗಗಳಲ್ಲಿ ಕೇವಲ 18 ಉಪಜಾತಿಗಳು ಕೇಂದ್ರ ಸರ್ಕಾರದ ಒಬಿಸಿಗೆ ಸೇರಿವೆ. ಉಳಿದಂತೆ ಆದಿ, ದೀಕ್ಷ–ಪಂಚಮಸಾಲಿ, ನೊಣಬ, ಬಣಜಿಗ, ಕುಂಬಾರರು, ನೇಕಾರರು ಸೇರಿದಂತೆ 86 ಉಪ ಪಂಗಡಗಳನ್ನು ಒಬಿಸಿ ಮೀಸಲು ಪಟ್ಟಿಗೆ ಸೇರಿಸುವ ಮೂಲಕ ಲಿಂಗಾಯತರಿಗೆ ಕೇಂದ್ರ ಸರ್ಕಾರದಲ್ಲಿ ಉದ್ಯೋಗ, ಶಿಕ್ಷಣ ಮೀಸಲಾತಿ ಸಿಗುವಂತೆ ಮಾಡಬೇಕು. ರಾಜ್ಯದಲ್ಲಿ ದೀಕ್ಷ–ಪಂಚಮಸಾಲಿಯವರಿಗೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕಲ್ಯಾಣಪ್ಪ ಪಾಟೀಲ ಮಳಖೇಡ, ಗಣೇಶ ಅಣಕಲ್, ಡಾ.ಎಸ್.ಎಸ್. ಪಾಟೀಲ, ಅಮೃತ ಪಾಟೀಲ, ನಾನಾಗೌಡ ಪಾಟೀಲ, ವಿಜಯಕುಮಾರ ದುದ್ದಗಿ ಮಳ್ಳಿ, ಮಲ್ಲಣ್ಣಗೌಡ ಪಾಟೀಲ ಕುಳಗೇರಾ, ಈರಣ್ಣ ಗುಳೇದ, ಸುರೇಶ ಪಾಟೀಲ ಜೋಗೂರ, ಮಚ್ಚೇಂದ್ರನಾಥ ಮೂಲಗೆ ಇದ್ದರು.

ಸಚಿವ ಪಾಟೀಲ ನಿಯೋಗದೊಂದಿಗೆ ಚರ್ಚೆಗೆ ಸಿದ್ಧ

‘ಪಾದಯಾತ್ರೆಯನ್ನು ಆರಂಭಿಸಬೇಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆ ಮಾಡಿ ಮನವಿ ಮಾಡಿದ್ದಾರೆ. ಅಲ್ಲದೆ ಸಚಿವ ಸಿ.ಸಿ.ಪಾಟೀಲ ನೇತೃತ್ವದಲ್ಲಿ ನಿಯೋಗವೊಂದನ್ನು ಪೀಠಕ್ಕೆ ಕಳುಹಿಸುತ್ತೇವೆ. 2ಎ ಮೀಸಲಾತಿ ಕಲ್ಪಿಸುವುದು ಹಾಗೂ ಲಿಂಗಾಯತರನ್ನು ಒಬಿಸಿಗೆ ಸೇರಿಸುವ ಬಗ್ಗೆ ಶಿಫಾರಸು ಮಾಡಲು ಚರ್ಚಿಸುತ್ತಾರೆ ಎಂದು ಹೇಳಿದ್ದು, ನಿಯೋಗ ಬಂದರೆ ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸುತ್ತೇವೆ’ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಿಯೋಗ ಬರುವ ದಿನಾಂಕವನ್ನು ತಿಳಿಸಿದರೆ ಸಮಾಜದ ಮುಖಂಡರಾದ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ, ಎಂ.ಸಿ.ಮನಗೂಳಿ, ಎಂ.ವೈ. ಪಾಟೀಲ, ಬಿ.ಜಿ. ಪಾಟೀಲ, ಮಾಜಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಿ.ಆರ್.ಪಾಟೀಲ, ಮುಖಂಡ ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಶರಣಕುಮಾರ ಮೋದಿ ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT