ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜನರ ಸಂಘ ಹೆಜ್ಜೇನು ಸವಿದಂತೆ: ಹಾರಕೂಡ ಸ್ವಾಮೀಜಿ

ಹಾರಕೂಡದ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅಭಿಮತ
Last Updated 16 ಡಿಸೆಂಬರ್ 2019, 10:49 IST
ಅಕ್ಷರ ಗಾತ್ರ

ಕಲಬುರ್ಗಿ:ಸಜ್ಜನರೊಂದಿಗೆ ಸ್ನೇಹ ಬೆಳೆಸುವುದು, ಮಹಾಪುರುಷರ ಆದರ್ಶ ಬೆಳೆಸಿಕೊಳ್ಳುವುದು ಹೆಜ್ಜೇನು ಸವಿದಂತೆ ಎಂದುಹಾರಕೂಡದ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕೆ.ಪಿ.ಟಿ.ಸಿ.ಎಲ್.ಭವನದಲ್ಲಿನಡೆದ ಕರ್ನಾಟಕ ಅರಣ್ಯ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ 23ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ, ಸಂತರ ನುಡಿಗಳನ್ನು ಕೇಳಿ ಬದುಕಿನಲ್ಲಿ ಸನ್ಮಾರ್ಗದಲ್ಲಿ ನಡೆಯಬೇಕು.ಸುಖಾಸುಮ್ಮನೆಸಮಯ ವ್ಯರ್ಥ ಮಾಡದೇ, ಕೆಟ್ಟವರ ಜತೆ ಸೇರದೇ ಒಳ್ಳೆಯದನ್ನ ಓದಿ, ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಜನ್ಮದಿನ ಆಚರಣೆ ವೇಳೆ ಭಾರೀ ಸಂಭ್ರಮ ಮಾಡುವುದಕ್ಕಿಂತ ಗಿಡ ನೆಡಬೇಕು. ಪ್ರತಿಯೊಬ್ಬರೂ ಹುಟ್ಟುಹಬ್ಬದಂದು ಗಿಡನೆಟ್ಟರೆ ಕರ್ನಾಟಕ ಹಚ್ಚ ಹಸಿರಾಗಿ ಕಂಗೊಳಿಸಲಿದೆ ಎಂದು ಹೇಳಿದರು.

ಮಾನವ ಜನ್ಮ ತಾತ್ಕಾಲಿಕ. ಯಾವಾಗ ಬೇಕಾದರೂ ಉಸಿರು ನಿಲ್ಲಬಹುದು. ಉಸಿರು ನಿಂತರೂ ಹೆಸರು ಉಳಿಯುವಂತಹ ಕೆಲಸ ಮಾಡಿ. ಆಗ ನಿಮ್ಮ ಜನ್ಮ ಪಾವನ ಆಗುತ್ತೆ ಎಂದು ಅಭಿಪ್ರಾಯಪಟ್ಟರು.

ಸದಾ ಕಾಲ ವೈಯಕ್ತಿಕ ಜೀವನದ ಬಗ್ಗೆ ಯೋಚಿಸದೇ, ಸಮಾಜದ ಒಳಿತಿಗಾಗಿ ಏನು ಮಾಡಬಹುದು ಎಂಬುದನ್ನೂ ಅರಿತು ಒಳ್ಳೆ ಕೆಲಸಕ್ಕೆ ಮುಂದಾಗಬೇಕು ಎಂದು ಹೇಳಿದರು.

ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಮಾತನಾಡಿ,ಕರ್ನಾಟಕ ಅರಣ್ಯ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಜನಪರ ಕೆಲಸ ಮಾಡುತ್ತಿದೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಈ ಸಮಾಜಮುಖಿ ಕೆಲಸಗಳು ನಿರಂತರವಾಗಿ ಸಾಗಲಿ ಎಂದು ಹೇಳಿದರು.

ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿರಕ್ತ ಮಠ ನಿಂಬಾಳದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತ್ರಾಯ ಮಲಾಜಿ, ಶಾಸಕ ಎಂ.ವೈ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಸಂಘದ ಅಧ್ಯಕ್ಷ ಅಶೋಕ ಬ.ಬಸರಕೋಡ್, ಕಾರ್ಯದರ್ಶಿ ಟಿ.ಜೆ.ರವಿಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT