ಗುರುವಾರ , ಫೆಬ್ರವರಿ 25, 2021
19 °C
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ರೈತರ ಒಡನಾಡಿಗಳು, ಸಹಾಯಕ್ಕೆ ಮನವಿ

ಕುಲಬುರ್ಗಿ: ಕಂಬಾರರ ಕುಲುಮೆಗೆ ತಣ್ಣೀರು!

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೃಷಿ ಚಟುವಟಿಕೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಕಂಬಾರರು ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಪರಿಕರಗಳನ್ನು ಸಜ್ಜುಗೊಳಿಸಲು ರೈತರು ಬಾರದೆ ಇರುವುದರಿಂದ ಇವರಿಗೆ ವ್ಯಾಪಾರ ಇಲ್ಲದಂತಾಗಿದೆ.

ರೈತರು ಕೃಷಿಗೆ ಬೇಕಾದ ಪರಿಕರಗಳನ್ನು ಕಲಬುರ್ಗಿಗೆ ಬಂದು ಸಿದ್ಧಪಡಿಸಿಕೊಂಡು ಹೋಗುತ್ತಿದ್ದರು. ಲಾಕ್‌ಡೌನ್ ಸಡಿಲಿಕೆಯಾದರೂ ಸಾರಿಗೆ ವ್ಯವಸ್ಥೆಗೆ ನಿರ್ಬಂಧ ಹಾಕಿದ್ದರಿಂದ ಅವರು ಗ್ರಾಮಗಳಲ್ಲೇ ಉಳಿಯುವಂತಾಗಿದೆ. ಇದರಿಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡು ನಗರದ ಹಲವೆಡೆ ಕುಲುಮೆಗಳು ಉರಿಯುವುದನ್ನು ನಿಲ್ಲಿಸಿವೆ. 

ಪ್ರತಿವರ್ಷ ಬೇಸಿಗೆ ಬಂತೆಂದರೆ ಕಂಬಾರರಿಗೆ ಬಿಡುವಿಲ್ಲದ ಕೆಲಸವಿರುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿ ರೈತರ ಒಡನಾಡಿಗಳ ‘ಕುಲುಮೆ’ಗೆ ತಣ್ಣೀರೆರಚಿದೆ.

ನಗರದ ಬಂಬೂ ಬಜಾರ್ ಹತ್ತಿರ 30ಕ್ಕೂ ಹೆಚ್ಚು ಜನರು ಕುಲುಮೆ ನಂಬಿಕೊಂಡು ಬದುಕು ನಡೆಸುತ್ತಿದ್ದಾರೆ. ಚೂರಿ, ಕೂಡುಗೋಲು, ಕೊಡಲಿ, ಗುದ್ದಲಿ, ಪಿಕಾಸಿ, ನೆಗಿಲು ಚಿಪ್ಪುಗಳು, ಚಕ್ರದ ಪಟ್ಟಿ ಹೀಗೆ ಕೃಷಿಗೆ ಸಂಬಂಧಿಸಿದ ಪರಿಕರಣಗಳನ್ನು ಇಲ್ಲಿ ದುರಸ್ತಿ ಮಾಡಲಾಗುತ್ತದೆ. ಆದರೆ ಕಳೆದ ಒಂದೂವರೆ ತಿಂಗಳಿಂದ ಯಾವುದೇ ವ್ಯಾಪಾರ ನಡೆಯುತ್ತಿಲ್ಲ. ಇದರಿಂದ ಇಲ್ಲಿನ ಕಾರ್ಮಿಕರು ಅತಂತ್ರರಾಗಿದ್ದಾರೆ.

‘ನಮಗೆ ಈ ಕೆಲಸ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ನಮ್ಮ ಜೀವನ ನಿಂತಿರುವುದೇ ಕೃಷಿಕರಿಂದ. ಲಾಕ್‌ಡೌನ್‌ನಿಂದ ಕೃಷಿಕರಿಗೂ ತೊಂದರೆಯಾಗಿದ್ದು, ನಮ್ಮ ವ್ಯಾಪಾರ ಸಂಪೂರ್ಣವಾಗಿ ನಿಂತಿದೆ. ಪ್ರತಿದಿನ ಅಂಗಡಿ ತೆರೆದು ಕಾದು ಕುಳಿತರೂ ಸಂಪಾದನೆಯಿಲ್ಲದೆ ಮನೆಗೆ ಹೋಗುವಂತಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಕಾರ್ಮಿಕರು.

‘ರೈತರ ಬೆನ್ನೆಲುಬು ಆದ ಕಂಬಾರರ ಬದುಕಿಗೆ ಆಸರೆಯಾಗಿ ಸರ್ಕಾರ ಯಾವುದೇ ಯೋಜನೆ ತಂದಿಲ್ಲ. ಲಾಕ್‌ಡೌನ್‌ನಿಂದ ನಮ್ಮ ಕೆಲಸವೇ ನಿಂತು ಹೋಗಿದೆ. ಸರ್ಕಾರ ಕುಲುಮೆ ಕಾರ್ಮಿಕರಿಗೆ ಸಹಾಯಹಸ್ತ ಚಾಚಬೇಕು’ ಎಂದು ಅವರು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು