ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕ ಅದಾಲತ್: 3,118 ಪ್ರಕರಣಗಳ ಇತ್ಯರ್ಥ

ಅದಾಲತ್‌ ಪ್ರಯೋಜನ ಪಡೆಯಲು ನ್ಯಾಯಾಧೀಶೆ ಜ್ಯೋತಿ ಎಸ್. ಕಾಳೆ ಸಲಹೆ
Published 10 ಡಿಸೆಂಬರ್ 2023, 4:57 IST
Last Updated 10 ಡಿಸೆಂಬರ್ 2023, 4:57 IST
ಅಕ್ಷರ ಗಾತ್ರ

ಚಿಂಚೋಳಿ: ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳ ಕಕ್ಷಿದಾರರು ರಾಜಿ ಸಂಧಾನಕ್ಕೆ ಒಪ್ಪಿದರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಾಧ್ಯವಾಗುತ್ತದೆ. ಇದರಿಂದ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಶಾಂತಪ್ಪ ಕಾಳೆ ತಿಳಿಸಿದರು.

ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿದರು.

ಪ್ರಕರಣಗಳ ರಾಜೀ ಸಂಧಾನದಿಂದ ಸಮಯ ಹಾಗೂ ಖರ್ಚು ಉಳಿಯುತ್ತದೆ. ಒಡೆದ ಮನಸ್ಸುಗಳು ಒಂದುಗೂಡುತ್ತವೆ. ಹೀಗಾಗಿ ಕಕ್ಷಿದಾರರಿಗೆ ಲೋಕ ಅದಾಲತ ವರದಾನವಾಗಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ ವಿ., ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರ ದತ್ತಕುಮಾರ ಜವಳಕರ ಇದ್ದರು.

ಲೋಕ ಅದಾಲತ್‌ನಲ್ಲಿ ಮೂರು ನ್ಯಾಯಾಲಯಗಳ 3,118 ಪ್ರಕರಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು ₹2,11,64,811 ಪರಿಹಾರ ಒದಗಿಸಲಾಯಿತು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದಲ್ಲಿ ಒಟ್ಟು 924 ಪ್ರಕರಣಗಳು ಬಾಕಿಯಿದ್ದು, ಇಂದಿನ ಲೋಕ ಅದಾಲತ್‌ನಲ್ಲಿ 120 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 23 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದರಿಂದ ₹ 1,66,06,811 ಪರಿಹಾರ ಒದಗಿಸಿದರು.

ಹೆಚ್ಚುವರಿ ನ್ಯಾಯಾಲಯದಲ್ಲಿ 952 ಪ್ರಕರಣಗಳು ಬಾಕಿಯಿದ್ದು, ಅದಾಲತ್‌ನಲ್ಲಿ 218 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 137 ಪ್ರಕರಣ ಇತ್ಯರ್ಥವಾದವು. ಪರಿಹಾರ ಮೊತ್ತ ₹ 3,71,700 ಆಗಿದೆ.

ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 1297 ಪ್ರಕರಣಗಳು ಬಾಕಿಯಿದ್ದು, ಅದಾಲತ್‌ನಲ್ಲಿ 421 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 390 ಪ್ರಕರಣಗಳು ಇತ್ಯರ್ಥವಾಗಿದ್ದು, ₹ 22,12,500 ಪರಿಹಾರ ಒದಗಿಸಿದರು.

ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ವ್ಯಾಜ್ಯಪೂರ್ವ 3,133 ಪ್ರಕರಣಗಳ ಪೈಕಿ 2,569 ಪ್ರಕರಣ ಇತ್ಯರ್ಥ ಪಡಿಸಲಾಯಿತು. ಇದರಿಂದ 19,75,000 ಪರಿಹಾರ ಒದಗಿಸಿದರು.

ಚಿಂಚೋಳಿ ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ವಕೀಲ ಸುದರ್ಶನ ಬಿರಾದಾರ, ವಿಶ್ವನಾಥ ಬೆನಕಿನ, ಶರಣರೆಡ್ಡಿ ಪೊಂಗಾ, ಜಗನ್ನಾಥ ಗಂಜಗಿರಿ, ರಾಜೇಂದ್ರ ವರ್ಮಾ, ಶಶಿಕಾಂತ ಆಡಕಿ, ರವಿಕುಮಾರ ಹೂವಿನಭಾವಿ, ಸೂರ್ಯಕಾಂತ ಕರಣಿಕರ, ಚಂದ್ರಶೇಖರ ಮಲ್ಸಾ, ಶ್ರೀನಿವಾಸ ಬಂಡಿ, ಚಂದ್ರಶೆಟ್ಟಿ ಜಾಧವ, ಶಾಮರಾವ ಹೊಸಮನಿ, ಭೀಮಾಶಂಕರ ಕಳಸ್ಕರ, ಸಿದ್ದಪ್ಪ ಸಾತಪನೋರ, ರಾಜು ಹುಡಗಿ ಇದ್ದರು.

ಒಂದಾಗಿದ್ದ ಜೋಡಿಯ ಮಗುವನ್ನು ಎತ್ತಿಕೊಂಡ ನ್ಯಾಯಾಧೀಶ..

ರೇಣುಕಾ ಹಾಗೂ ರಮೇಶ ದಂಪತಿಯ ನಡುವೆ ವಿರಸವುಂಟಾಗಿ ವಿಚ್ಛೇಧನಕ್ಕೆ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದರು. ಪತ್ನಿ ರೇಣುಕಾ ಅವರು, ಪತಿ ರಮೇಶ ವಿರುದ್ಧ ಜೀವನಾಂಶ ನೀಡವುದು ಹಾಗೂ ಬೇರೆ ಮದುವೆಯಾಗಬಾರದು ಎಂಬ ಎರಡು ದೂರುಗಳನ್ನು ದಾಖಲಿಸಿದ್ದರು. ಕಳೆದ ವರ್ಷ ಈ ಅರ್ಜಿಯ ವಿಚಾರಣೆ ನಡೆದು, ನ್ಯಾಯಾಧೀಶರಾದ ರವಿಕುಮಾರ್‌ ವಿ. ಅವರು, ಇಬ್ಬರು ಒಂದಾಗಿ ಜೀವನ ನಡೆಸಿ ಎಂದು  ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಬಳಿಕ ದಂಪತಿಯು ಒಂದಾಗಿ ಬಾಳಿದ್ದು, ಒಂದು ಮಗುವಿಗೆ ಜನ್ಮ ನೀಡಿದ್ದಾರೆ. ಅದೇ ಪ್ರಕರಣ ವಿಚಾರಣೆ ಶನಿವಾರ ನಡೆಯಿತು. ಕಂದಮ್ಮನೊಂದಿಗೆ ಬಂದಿದ್ದ ದಂಪತಿಯನ್ನು ಕಂಡು ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿ, ಕಂದಮ್ಮನನ್ನು ಎತ್ತಿಕೊಂಡು ಸಂತಸ ವ್ಯಕ್ತಪಡಿಸಿದರು.

ಶ್ರೀಮಂತ ಕಟ್ಟಿಮನಿ ಅಧ್ಯಕ್ಷ ವಕೀಲರ ಸಂಘ ಚಿಂಚೋಳಿ
ಶ್ರೀಮಂತ ಕಟ್ಟಿಮನಿ ಅಧ್ಯಕ್ಷ ವಕೀಲರ ಸಂಘ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT