ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಹಾಳು ಮಾಡುತ್ತಿರುವ ವಿಜಯೇಂದ್ರ, ಸಿ.ಟಿ.ರವಿ: ಮಾಲೀಕಯ್ಯ ವಾಗ್ದಾಳಿ

Published 16 ಏಪ್ರಿಲ್ 2024, 9:37 IST
Last Updated 16 ಏಪ್ರಿಲ್ 2024, 9:37 IST
ಅಕ್ಷರ ಗಾತ್ರ

ಕಲಬುರಗಿ: ವಿಜಯೇಂದ್ರ, ಸಿ.ಟಿ.ರವಿಯಂತಹ ನಾಯಕರು ‌ರಾಜ್ಯದಲ್ಲಿ ಪಕ್ಷವನ್ನು ಒಡೆಯುತ್ತಿದ್ದಾರೆ. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಭಾರಿ ಪ್ರಮಾಣದ ಆಸ್ತಿ ‌ಮಾಡಿಕೊಂಡಿದ್ದಾರೆ ಎಂದು ಪಕ್ಷದ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸ್ವಪಕ್ಷೀಯರ ವಿರುದ್ಧವೇ ಹರಿಹಾಯ್ದರು.

ತಮ್ಮ ಮಾತು ಕೇಳದೇ ತಮ್ಮ ಸಹೋದರ ನಿತಿನ್ ಗುತ್ತೇದಾರ ಅವರನ್ನು ಬಿಜೆಪಿಗೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, 'ನಿತಿನ್ ಗುತ್ತೇದಾರ ಅವರು ಅಫಜಲಪುರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ನನ್ನ ವಿರುದ್ಧ ಸ್ಪರ್ಧಿಸಿದಾಗ ಆರು ವರ್ಷ ಅಮಾನತು ಮಾಡಲಾಗಿತ್ತು. ವಿಜಯೇಂದ್ರ ಅವರು ಅಮಾನತು ನಿರ್ಧಾರ ಯಾವಾಗ ವಾಪಸ್ ಪಡೆದರು? ಅಮಾನತು ವಾಪಸ್ ಪಡೆಯುವ ‌ಮುನ್ನ ಪಕ್ಷದ ಮುಖಂಡರನ್ನು ಕರೆದು ಮಾತನಾಡಬೇಕು ಎಂಬುದು ಇವರಿಗೆ ಗೊತ್ತಿಲ್ಲವೇ' ಎಂದು ವಿಜಯೇಂದ್ರ ವಿರುದ್ಧ ಹರಿಹಾಯ್ದರು.

'ನಿತಿನ್ ನನ್ನು ಪಕ್ಷಕ್ಕೆ ‌ಸೇರಿಸಿಕೊಳ್ಳಲು ವಿಜಯೇಂದ್ರ, ಸಿ.ಟಿ. ರವಿ, ಪಿ.ರಾಜೀವ್ ಎಷ್ಟು ಹಣ ಪಡೆದಿದ್ದಾರೆ' ಎಂದೂ ಪ್ರಶ್ನಿಸಿದರು.

ನನ್ನ ಮನೆ ಒಡೆದ ಬಿಜೆಪಿ:

ಒಂದು ಕಡೆ ಅಫಜಲಪುರದಲ್ಲಿ ನನಗೆ ಟಿಕೆಟ್ ನೀಡಿ ಮತ್ತೊಂದು ಕಡೆ ನಿತಿನ್ ನನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವಂತೆ ಪುಸಲಾಯಿಸಿದ್ದು ಬಿಜೆಪಿಯವರು. ಹೀಗಾಗಿ ನನ್ನ ಮನೆಯನ್ನು ಒಡೆದ ಅಪಕೀರ್ತಿ ಅವರಿಗೇ ಸಲ್ಲುತ್ತದೆ. ನಾನು ಶಾಸಕನಾದರೆ ಸರ್ಕಾರದಲ್ಲಿ ಮಂತ್ರಿಯಾಗಬಹುದು ಎಂಬ ಆತಂಕದಿಂದ ನನ್ನ ತಮ್ಮನನ್ನು ಮುಂದಿಟ್ಟುಕೊಂಡು ನನ್ನನ್ನು ಸೋಲಿಸಿದರು' ಎಂದು ಮಾಲೀಕಯ್ಯ ಹರಿಹಾಯ್ದರು.

'ಅರುಣ್ ಸಿಂಗ್ ಅವರು ಪಕ್ಷದ ಉಸ್ತುವಾರಿಯಾಗಿದ್ದಾಗ ಎಲ್ಲರೂ ಹೆದರುತ್ತಿದ್ದರು. ಆದರೆ, ಈಗಿನ ಪಕ್ಷದ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರನ್ನು ವಿಜಯೇಂದ್ರ ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ' ಎಂದು ಟೀಕಿಸಿದರು.

ಪಕ್ಷಕ್ಕೆ ದುಡಿದ ಕೆ.ಎಸ್‌. ಈಶ್ವರಪ್ಪ, ಕರಡಿ ಸಂಗಣ್ಣ, ಪ್ರತಾಪ ಸಿಂಹ ಅವರಿಗೆ ಉದ್ದೇಶಪೂರ್ವಕವಾಗಿ ಯಡಿಯೂರಪ್ಪ, ವಿಜಯೇಂದ್ರ ಅವರು ಟಿಕೆಟ್ ‌ನಿರಾಕರಿಸಿದರು. ಆ ಮೂಲಕ ಪಕ್ಷವನ್ನು ರಾಜ್ಯದಲ್ಲಿ ಸರ್ವನಾಶ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿಪರೀತ ಭ್ರಷ್ಟಾಚಾರ ಇತ್ತು. ಈ ಬಗ್ಗೆ ಅರುಣ್ ಸಿಂಗ್ ಅವರ ಗಮನಕ್ಕೆ ತಂದಿದ್ದೆ ಎಂದ ಮಾಲೀಕಯ್ಯ, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿ ಯೋಜನೆಗಳಿಂದಲ್ಲ. ಬದಲಾಗಿ ಬಿಜೆಪಿ ಭ್ರಷ್ಟಾಚಾರದಿಂದ' ಎಂದು ಗಂಭೀರ ಆರೋಪ ಮಾಡಿದರು.

19ರಂದು ಅಂತಿಮ ನಿರ್ಧಾರ: ಬಿಜೆಪಿ ಬಿಡಬೇಕೋ ಬೇಡವೋ ಎಂಬ ಬಗ್ಗೆ ಇದೇ 19ರಂದು ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಬಿಜೆಪಿ ಬಿಡುವಂತೆ ಇಂದಿನ ಸಭೆಯಲ್ಲಿ ‌ಕಾರ್ಯಕರ್ತರು ತಿಳಿಸಿದ್ದಾರೆ. ಕಾಂಗ್ರೆಸ್ ಸೇರುವಂತೆಯೂ ಹಲವರು ಸಲಹೆ ನೀಡಿದ್ದಾರೆ. ಬಹುತೇಕ ಕಾರ್ಯಕರ್ತರು ನಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಇದೇ 19ರಂದು ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಾಲೀಕಯ್ಯ ಸಹೋದರ ಅರವಿಂದ ಗುತ್ತೇದಾರ, ಮಗ ರಿತೇಶ್ ಗುತ್ತೇದಾರ, ಮುಖಂಡರಾದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಶಿವಕಾಂತ ಮಹಾಜನ್, ಕಲ್ಯಾಣಪ್ಪ ಪಾಟೀಲ ಮಳಖೇಡ, ಚಿತ್ರಶೇಖರ ಪಾಟೀಲ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT