ಕಲಬುರಗಿ: ಕೆಲವೇ ದಿನಗಳಲ್ಲಿ ಮೇಯರ್–ಉಪಮೇಯರ್ ಆಯ್ಕೆಯ ಬಳಿಕ ಸ್ವತಂತ್ರ ಆಡಳಿತ ವ್ಯವಸ್ಥೆ ಹೊಂದಲಿರುವ ಕಲಬುರಗಿ ಮಹಾನಗರ ಪಾಲಿಕೆಗೆ ಕಾಲ ಕಾಲಕ್ಕೆ ಬರಬೇಕಿದ್ದ ಆಸ್ತಿ ತೆರಿಗೆ ಹಾಗೂ ಸೇವಾ ತೆರಿಗೆ ಪಾವತಿ ಆಗುತ್ತಿಲ್ಲ. ಇದರಿಂದ ಸಿಬ್ಬಂದಿ ವೇತನಕ್ಕೆ ಪರದಾಡಬೇಕಾದ ಪರಿಸ್ಥಿತಿ ಪಾಲಿಕೆಗೆ ಬಂದಿದೆ.
ಅದರಲ್ಲೂ ಪ್ರಮುಖ ಸರ್ಕಾರಿ ಸಂಸ್ಥೆಗಳೇ ವರ್ಷಗಳಿಂದ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡು, ಒತ್ತಾಯಪೂರ್ವಕವಾಗಿ ವಸೂಲಿ ಮಾಡಲೂ ಆಗದೇ, ಇತ್ತ ನಿರ್ವಹಣಾ ವೆಚ್ಚವನ್ನು ನಿಭಾಯಿಸಲೂ ಆಗದೇ ಪಾಲಿಕೆ ಏದುಸಿರು ಬಿಡುವಂತಾಗಿದೆ.
‘ಒಂದು ಅಂದಾಜಿನ ಪ್ರಕಾರ, ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ವೇತನ, ಪೌರಕಾರ್ಮಿಕರ ವೇತನ, ವಿದ್ಯುತ್ ದೀಪಗಳ ನಿರ್ವಹಣೆ, ಪಾಲಿಕೆಯ ವಾಹನಗಳಿಗೆ ಇಂಧನ, ದುರಸ್ತಿ ಸೇರಿ ವಿವಿಧ ಖರ್ಚುಗಳಿಗಾಗಿ ತಿಂಗಳಿಗೆ ₹ 4.5 ಕೋಟಿ ಖರ್ಚಾಗುತ್ತಿದೆ. ಸರ್ಕಾರದಿಂದ ಪಾಲಿಕೆಗೆ ವಾರ್ಷಿಕ ನೆರವು ಬರುತ್ತಿಲ್ಲ’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘15ನೇ ಹಣಕಾಸು ಯೋಜನೆಯಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಆದರೆ, ಕೊರೊನಾ ಬಳಿಕ ಸರ್ಕಾರಕ್ಕೆ ಬರಬೇಕಿದ್ದ ತೆರಿಗೆ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಅನುದಾನವೂ ಸರಿಯಾಗಿ ಬರುತ್ತಿಲ್ಲ. ವಾರ್ಡ್‌ವೊಂದರಲ್ಲಿ ₹ 10 ಲಕ್ಷ ವೆಚ್ಚದಷ್ಟು ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲೂ ಹಣ ಇಲ್ಲ’ ಎಂದು ಅವರು ತಿಳಿಸಿದರು.
ಇಂಥದರಲ್ಲಿ ಪ್ರಮುಖ ಸರ್ಕಾರಿ ಸಂಸ್ಥೆಗಳೇ ಪಾಲಿಕೆಗೆ ಪಾವತಿಸಬೇಕಿದ್ದ ಸೇವಾ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ. ವಾಸ್ತವವಾಗಿ ಪಾಲಿಕೆಯು ನಾಗರಿಕರ ಆಸ್ತಿಗಳಿಂದ ಪಡೆದಷ್ಟು ಹಣವನ್ನೂ ಸರ್ಕಾರಿ ಸಂಸ್ಥೆಗಳಿಂದ ಪಡೆಯುವುದಿಲ್ಲ. ವಾರ್ಷಿಕ ಆಸ್ತಿ ತೆರಿಗೆಯ ಶೇ 25ರಷ್ಟು ತೆರಿಗೆಯನ್ನು ಆಸ್ತಿ ತೆರಿಗೆಯನ್ನಾಗಿ ಪಡೆಯುತ್ತದೆ. ಆದರೂ, ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಆಯಾ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಮೊಹ್ಮದ್ ಶಕೀಲ್.
ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿ ರಸ್ತೆ, ಸೇತುವೆ ಹಾಗೂ ಕಟ್ಟಡ ಕಾಮಗಾರಿಗಳನ್ನು ನಿರ್ವಹಿಸುವ ಲೋಕೋಪಯೋಗಿ ಇಲಾಖೆಯು ₹ 5 ಕೋಟಿ ಸೇವಾ ತೆರಿಗೆ ಉಳಿಸಿಕೊಂಡಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇಲಾಖೆಯು ₹ 80 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿತ್ತು. ಭಾರಿ ದೊಡ್ಡ ಮೊತ್ತದ ಬಜೆಟ್ ಇರುವ ಇಲಾಖೆಗೆ ಸೇವಾ ತೆರಿಗೆ ಉಳಿಸಿಕೊಳ್ಳುವ ಅಗತ್ಯವಿದೆಯೇ ಎಂಬ ಸಂಶಯ ಉಂಟಾಗುತ್ತದೆ.
ತಿಂಗಳಿಗೆ ಸಾವಿರಾರು ಕೋಟಿ ವರಮಾನವನ್ನು ಸರಕು ಸಾಗಣೆ ಹಾಗೂ ಪ್ರಯಾಣಿಕ ರೈಲುಗಳಿಂದ ಸಂಗ್ರಹಿಸುವ ರೈಲ್ವೆ ಸಹ ₹ 2 ಕೋಟಿ ಬಾಕಿ ಉಳಿಸಿಕೊಂಡಿದೆ.
₹ 70 ಕೋಟಿ ಪೈಕಿ ₹ 28 ಕೋಟಿ ಸಂಗ್ರಹ
ಹಳೆಯ ಬಾಕಿ ಎಲ್ಲ ಸೇರಿ ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಹಾಗೂ ಸೇವಾ ತೆರಿಗೆ ರೂಪದಲ್ಲಿ ₹ 70.24 ಕೋಟಿ ಪಾವತಿಯಾಗಬೇಕಿದೆ. ಆದರೆ, ಜನವರಿ 31ರ ಅಂತ್ಯಕ್ಕೆ ಕೇವಲ ₹ 27.90 ಕೋಟಿ ಮಾತ್ರ ಸಂಗ್ರಹವಾಗಿದೆ. ಒಟ್ಟಾರೆ ಶೇ 39.73ರಷ್ಟು ಮಾತ್ರ ಸಂಗ್ರಹವಾಗಿದೆ.
ಶೇ 100ರಷ್ಟು ಸಾಧನೆ ಯಾವಾಗಲೂ ಆಗಿಲ್ಲ. ಆಸ್ತಿ ತೆರಿಗೆ ಕಟ್ಟುವ ಮೂಲಕ ನಗರದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು ಎಂಬ ಚಿಂತನೆ ಬಹುತೇಕ ಆಸ್ತಿ ಮಾಲೀಕರಲ್ಲಿ ಇಲ್ಲವಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ತೆರಿಗೆ ಪಾವತಿ ಮಾಡದ ಆಸ್ತಿಗಳ ಮಾಲೀಕರಿಗೆ ಮೂರು ನೋಟಿಸ್ ನೀಡುತ್ತೇವೆ. ಆಗಲೂ ಪಾವತಿ ಮಾಡದಿದ್ದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುತ್ತೇವೆ. ನಿತ್ಯ ಬಿಲ್ ಕಲೆಕ್ಟರ್‌ಗಳ ಸಭೆ ನಡೆಸಿ ಗುರಿ ನಿಗದಿಪಡಸುತ್ತೇವೆ.
ಮೊಹ್ಮದ್ ಶಕೀಲ್, ಉಪ ಆಯುಕ್ತ
ಮಹಾನಗರ ಪಾಲಿಕೆ ಕಂದಾಯ ವಿಭಾಗ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.