ಸೇಡಂ:ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ಅನೇಕ ದಿನಗಳಿಂದ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಿಬ್ಬಂದಿ ಬುಧವಾರ ಕಲಬುರಗಿಯ ರಾಜ್ಯ ಮಹಿಳಾ ನಿಲಯಕ್ಕೆ ಸೇರಿಸಿದ್ದಾರೆ.
ಒಂದು ವಾರದಿಂದ ಹಿಂದೆ ಮಳಖೇಡದ ನಮೋ ಬುದ್ಧ ಸೇವಾ ಕೇಂದ್ರದ ಅಧ್ಯಕ್ಷ ರಾಜು ಕಟ್ಟಿ ಎಂಬುವವರು ‘ಮಾನಸಿಕ ಅಸ್ವಸ್ಥವಿರುವ ಯುವತಿ ಮಳಖೇಡದಲ್ಲಿ ಅಲೆದಾಡುತ್ತಿದ್ದಾಳೆ. ಯುವತಿಯ ನೆರವಿಗೆ ಧಾವಿಸಬೇಕು‘ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಜೊತೆಗೆ ಯುವತಿಯ ನೆರವಿಗೆ ಬರುವಂತೆ ಸಿಡಿಪಿಒ ಅವರಲ್ಲಿ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಸಿಡಿಪಿಒ ರವಿರಾಜ ಮುಡಬೂಳ, ಇಲಾಖೆಯ ಮೇಲ್ವಿಚಾರಕಿ ಭಾಗ್ಯಶ್ರೀ ಮತ್ತು ಸಾಂತ್ವನ ಕೇಂದ್ರದ ಆರತಿ ಕುಲಕರ್ಣಿ ಅವರನ್ನು ಸ್ಥಳಕ್ಕೆ ಕಳಿಸಿದ್ದಾರೆ.
‘ರಾಜು ಕಟ್ಟಿ ಅವರು ಮಾನಸಿಕ ಅಸ್ವಸ್ಥೆಯ ಬಗ್ಗೆ ಮಾಹಿತಿ ನೀಡಿದ್ದರು. ನಮ್ಮ ಸಿಬ್ಬಂದಿ ಕಳುಹಿಸಿ ಯುವತಿಯನ್ನು ವಿಚಾರಿಸಿದಾಗ ಅವಳು ಹೆಸರು, ಊರು, ಭಾಷೆಯ ಯಾವುದರ ಬಗ್ಗೆಯೂ ಮಾತನಾಡಿರಲಿಲ್ಲ. ಯುವತಿಯದ್ದು ಆಂಧ್ರ ಅಥವಾ ತೆಲಂಗಾಣ ಇರುವ ಸಾಧ್ಯತೆ ಇದೆ. ಅವರನ್ನು ಕಲಬುರಗಿಯ ರಾಜ್ಯ ಮಹಿಳಾ ನಿಲಯಕ್ಕೆ ಸೇರಿಸಿದ್ದಾರೆ. ಅಲ್ಲಿ ಯುವತಿಗೆ ಚಿಕಿತ್ಸೆ, ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯದ ವ್ಯವಸ್ಥೆ ಇರುತ್ತದೆ’ ಎಂದು ಸಿಡಿಪಿಒ ರವಿರಾಜ ಮುಡಬೂಳ ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಈ ಹಿಂದೆ ನಮೋ ಬುದ್ಧ ಸೇವಾ ಕೇಂದ್ರ ಅಧ್ಯಕ್ಷ ರಾಜು ಕಟ್ಟಿ ಅವರು ನಾಲ್ಕೈದು ಜನ ಅನಾಥ ಮಕ್ಕಳು ಮತ್ತು ಮಾನಸಿಕ ಅಸ್ವಸ್ಥರಿಗೆ ನೆರವಾಗಿದ್ದರು. ಅವರಲ್ಲಿ ಇಬ್ಬರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಅವರ ಕಾರ್ಯಕ್ಕೆ ಮತ್ತು ಸ್ಪಂದಿಸಿದ ಸಿಡಿಪಿಒ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಾನಸಿಕ ಅಸ್ವಸ್ಥ ಯುವತಿಯನ್ನು ನಮ್ಮ ಇಲಾಖೆಯ ಸಿಬ್ಬಂದಿ ಕಲಬುರಗಿಯ ಮಹಿಳಾ ನಿಯಲಕ್ಕೆ ಸೇರಿಸಿದ್ದಾರೆ.-ರವಿರಾಜ ಮುಡಬೂಳ ಸಿಡಿಪಿಓ ಸೇಡಂ
ನನ್ನ ಮನವಿಗೆ ಸ್ಪಂದಿಸಿ ಸಿಡಿಪಿಒ ಅವರು ಮಾನಸಿಕ ಅಸ್ವಸ್ಥ ಯುವತಿಯನ್ನು ಮಹಿಳಾ ನಿಲಯಕ್ಕೆ ಸೇರಿಸಿರುವುದು ಸಂತಸ ಸಂಗತಿ.-ರಾಜು ಕಟ್ಟಿ ಅಧ್ಯಕ್ಷರು ನಮೋ ಬುದ್ಧ ಸೇವಾ ಕೇಂದ್ರ ಮಳಖೇಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.