ಭಾನುವಾರ, ಜನವರಿ 24, 2021
27 °C
ನಿರೀಕ್ಷೆಯಲ್ಲಿದ್ದಾರೆ ರಾಜಕುಮಾರ ಪಾಟೀಲ ತೆಲ್ಕೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ

ಸಚಿವ ಸ್ಥಾನದ ಆಕಾಂಕ್ಷಿಗಳು ಬೆಂಗಳೂರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಾರಣ ಜಿಲ್ಲೆಯ ಕೆಲ ಶಾಸಕರು ಬೆಂಗಳೂರಿಗೆ ದೌಡಾಯಿಸಿದ್ದಾರೆ. ರಾಜಕುಮಾರ ಪಾಟೀಲ ತೆಲ್ಕೂರ, ಸುಭಾಷ ಗುತ್ತೇದಾರ ಅವರು ತಮಗೆ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಎರಡು ದಿನಗಳ ಹಿಂದೆಯೇ ಬೆಂಗಳೂರಿಗೆ ತೆರಳಿರುವ ಆಳಂದ ಶಾಸಕ ಸುಭಾಷ ಗುತ್ತೇದಾರ ಅವರು ತಮ್ಮ ‘ಹಿರಿತನ’ದ ಅನುಭವ ಒರೆಗೆ ಹಚ್ಚಲು ಮುಂದಾಗಿದ್ದಾರೆ. ‘ನಾಲ್ಕು ಬಾರಿ ಶಾಸಕನಾಗಿದ್ದೇನೆ. ಹಿರಿತನದ ಆಧಾರದ ಮೇಲೆ ನನಗೂ ಒಂದು ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ. ಯಾವ ಸ್ಥಾನ ಕೊಟ್ಟರೂ ನಿಭಾಯಿಸುವ ಸಾಮರ್ಥ್ಯವಿದೆ‘ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

‘ನಾನೇನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಈ ಬಗ್ಗೆ ಯಾರನ್ನೂ ಸಂಪರ್ಕಿಸಿಲ್ಲ, ಏನನ್ನೂ ಕೇಳಿಲ್ಲ. ಮಂಗಳವಾರ ಕೂಡ ಕಲಬುರ್ಗಿಯಲ್ಲೇ ಇದ್ದು ನನ್ನ ಕ್ಷೇತ್ರದ ಕೆಲಸಗಳನ್ನು ಮಾಡುತ್ತಿದ್ದೇನೆ’ ಎಂಬುದು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರ ಪ್ರತಿಕ್ರಿಯೆ.

ಭರವಸೆ ಇದೆ: ಸೇಡಂ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ಶಾಸಕ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಅವರಂತೂ ‘ನಾನೂ ಪ್ರಬಲ ಆಕಾಂಕ್ಷಿ’ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ.

‘ಮುಖ್ಯಮಂತ್ರಿಗಳು ಕರೆ ಮಾಡಿ ಆಹ್ವಾನ ನೀಡುವ ವಿಶ್ವಾಸವಿದೆ. ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕಿದೆ. ನೀಡದಿದ್ದರೆ ಎಲ್ಲ ಶಾಸಕರ ನಿಯೋಗ ತೆರಳಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದೂ ಅವರು ಹೇಳಿಕೆ ನೀಡಿದ್ದಾರೆ.

ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಹಾಗಾಗಿ, ಸಚಿವ ಸ್ಥಾನದ ಆಕಾಂಕ್ಷಿ ಎಂದು ಎಲ್ಲೂ ಹೇಳಿಕೊಂಡಿಲ್ಲವಾದರೂ ಬೆಂಗಳೂರಿಗೆ ತೆರಳಿದ್ದು, ಚರ್ಚೆಗೆ ಗ್ರಾಸವಾಗಿದೆ ಎಂಬುದು ಅವರ ಆಪ್ತವಲಯದ ಹೇಳಿಕೆ.

ಉಳಿದಂತೆ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಮೊದಲ ಬಾರಿಗೆ ಶಾಸಕರಾಗಿದ್ದು ಯಾವುದೇ ನಿರೀಕ್ಷೆ ವ್ಯಕ್ತಪಡಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು