ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ: ಅಮರನಾಥ ಪಾಟೀಲ

ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ
ಮನೋಜಕುಮಾರ್ ಗುದ್ದಿ
Published 31 ಮೇ 2024, 5:39 IST
Last Updated 31 ಮೇ 2024, 5:39 IST
ಅಕ್ಷರ ಗಾತ್ರ

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ 371 (ಜೆ) ಕಲಂ ಜಾರಿಗೆ ಬಂದು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಸಾಕಷ್ಟು ಅನುದಾನ ದೊರೆಯುತ್ತಿದ್ದರೂ ಈ ಭಾಗದಲ್ಲಿ ನಿರೀಕ್ಷಿಸಿದಷ್ಟು ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಉದ್ಯೋಗ ಸೃಷ್ಟಿಗೆ ಪ್ರಯತ್ನ ಮಾಡುವುದರ ಜೊತೆಗೆ ಖಾಲಿ ಹುದ್ದೆಗಳ ನೇಮಕಾತಿಗಾಗಿ ಪರಿಷತ್‌ನಲ್ಲಿ ಧ್ವನಿ ಎತ್ತುತ್ತೇನೆ...

ಪ್ರಚಾರ ಸಭೆಗಳಲ್ಲಿ ಸತತವಾಗಿ ಮಾತನಾಡಿದ ಪರಿಣಾಮ ಗಂಟಲು ಕಟ್ಟಿಕೊಂಡಿದ್ದರಿಂದ ಸಣ್ಣಧ್ವನಿಯಲ್ಲೇ ‘‍ಪ್ರಜಾವಾಣಿ’ಯೊಂದಿಗೆ ಮಾತಿಗಿಳಿಸಿದ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರು ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರ, 2012ರಿಂದ 2018ರ ಅವಧಿಯಲ್ಲಿ ಪರಿಷತ್ ಸದಸ್ಯರಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸಗಳು, ಚುನಾವಣೆಯಲ್ಲಿ ಜಯಗಳಿಸಿದರೆ ಮಾಡಬೇಕಾದ ಕೆಲಸಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು.

ಸಂದರ್ಶನದ ಆಯ್ದ ಭಾಗ ಈ ಕೆಳಗಿನಂತಿದೆ:
ಪ್ರ

ನೀವು ಈ ಬಾರಿ ಟಿಕೆಟ್ ನಿರೀಕ್ಷೆ ಮಾಡಿದ್ದಿರಾ?

ಒಂದು ಬಾರಿ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ್ದರೂ 2018ರಲ್ಲಿ ಪಕ್ಷ ನನಗೆ ಟಿಕೆಟ್ ನೀಡುವ ಬದಲು ಬೇರೆಯವರನ್ನು ಕಣಕ್ಕಿಳಿಸಿತು. ಪಕ್ಷದ ಈ ನಿರ್ಧಾರವನ್ನು ಗೌರವಿಸಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ಹೋದೆ. ಆಗ ಸ್ಪರ್ಧಿಸಿದ್ದ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದೆವು. ದುರದೃಷ್ಟವಶಾತ್ ಆ ಚುನಾವಣೆಯಲ್ಲಿ ಸೋಲಾಯಿತು. ಎಂ.ಆರ್. ತಂಗಾ, ಮನೋಹರ ಮಸ್ಕಿ ಹಾಗೂ ನಾನು ಸತತ ಮೂರು ದಶಕಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದೆವು. ಈ ಬಾರಿ ಮತ್ತೆ ನನಗೆ ಟಿಕೆಟ್ ಸಿಕ್ಕಿದೆ. ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡಲು ನಾನು ಸಿದ್ಧನಿದ್ದೆ. ಪಕ್ಷದ ವರಿಷ್ಠರು ಈ ಬಾರಿ ನನಗೆ ಟಿಕೆಟ್ ನೀಡಿದ್ದಾರೆ.

ಪ್ರ

ಕ್ಷೇತ್ರದಲ್ಲಿ ಪ್ರಚಾರ ಹೇಗೆ ನಡೆದಿದೆ?

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಬಸವರಾಜ ಬೊಮ್ಮಾಯಿ, ಸುರೇಶಕುಮಾರ್, ಎನ್. ರವಿಕುಮಾರ್, ಶಶೀಲ್ ನಮೋಶಿ, ಮಾಜಿ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಹಲವು ಮುಖಂಡರು ಈಗಾಗಲೇ ಕ್ಷೇತ್ರದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರಚಾರ ನಡೆಸಿದ್ದಾರೆ. ಪಕ್ಷದ ಕಾರ್ಯಕರ್ತರು ಅಹರ್ನಿಶಿ ದುಡಿಯುತ್ತಿದ್ದಾರೆ. ನನ್ನ ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಪದವೀಧರರ ಮುಂದೆ ಮನವರಿಕೆ ಮಾಡಿಕೊಡುತ್ತಿದ್ದೇನೆ.

ಪ್ರ

ಯಾವ ವಿಚಾರಗಳನ್ನು ಮತದಾರರ ಮುಂದಿಡುತ್ತಿದ್ದೀರಿ?

ವಿಧಾನಪರಿಷತ್ ಸದಸ್ಯನಾಗಿದ್ದ ಅವಧಿಯಲ್ಲಿ ಪದವೀಧರರ ಸಮಸ್ಯೆಗಳಿಗಾಗಿ ಸದನದಲ್ಲಿ ಧ್ವನಿ ಎತ್ತಿದ್ದನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತಿದ್ದೇನೆ. 371 (ಜೆ) ಕಲಂ ಅನುಷ್ಠಾನದಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಕುರಿತು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವುದು, ಈ ಭಾಗದ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು, ನೀರಾವರಿ ಸೌಲಭ್ಯ, ಬಾಕಿ ಇರುವ ಯೋಜನೆಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಿ ಪೂರ್ಣಗೊಳಿಸುವುದು, 371 (ಜೆ) ಅಡಿ ಮೀಸಲಾತಿ, ಬಡ್ತಿ ಸೌಲಭ್ಯಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ನಡೆಸಿದ್ದರ ಬಗ್ಗೆ ತಿಳಿಸುತ್ತಿದ್ದೇನೆ. ಅಲ್ಲದೇ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಹಿಂದಿನ ಎಚ್‌ಕೆಆರ್‌ಡಿಬಿ)ಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸುತ್ತಿದ್ದೇನೆ. 

ಪ್ರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ನಿಮ್ಮ ಪಕ್ಷದ ಶಾಸಕರ ಸಂಖ್ಯೆಯೂ ಕಡಿಮೆ ಇದೆ. ಇದು ನಿಮ್ಮ ಗೆಲುವಿಗೆ ತೊಡಕಾಗಬಹುದೇ?

ಯಾವ ತೊಡಕೂ ಆಗುವುದಿಲ್ಲ. ವಿಧಾನಸಭೆ ಚುನಾವಣೆಯೇ ಬೇರೆ, ಪರಿಷತ್ ಚುನಾವಣೆಯೇ ಬೇರೆ. ಅಲ್ಲದೇ, ಈಶಾನ್ಯ ಪದವೀಧರ ಕ್ಷೇತ್ರವು ಮೊದಲಿನಿಂದಲೂ ಬಿಜೆಪಿ ಭದ್ರಕೋಟೆಯಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಹಲವು ಕೆಲಸಗಳು, ಕೆಕೆಆರ್‌ಡಿಬಿಗೆ ಅನುದಾನ ಹೆಚ್ಚಳ, ಶಾಲಾ, ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ನೀಡಿದ ಹೇರಳ ಅನುದಾನ, ಶಿಕ್ಷಕರ ಹುದ್ದೆ ನೇಮಕದಂತಹ ಕೆಲಸಗಳನ್ನು ಪದವೀಧರ ಮತದಾರರು ಮರೆತಿಲ್ಲ. ಹೀಗಾಗಿ, ಮತದಾರರು ಈ ಬಾರಿಗೆ ನನ್ನನ್ನು ಬೆಂಬಲಿಸಲಿದ್ದಾರೆ.

ಪ್ರ

ಪಕ್ಷದಲ್ಲಿನ ಭಿನ್ನಮತ ನಿಮ್ಮ ಗೆಲುವಿನ ಓಟಕ್ಕೆ ಲಗಾಮು ಹಾಕುವುದೇ?

ಚುನಾವಣೆಗೆ ಟಿಕೆಟ್ ಘೋಷಣೆಯಾಗುವುದಕ್ಕೂ ಮುನ್ನ ಪಕ್ಷದಲ್ಲಿ ಹಲವರು ಆಕಾಂಕ್ಷಿಗಳಿದ್ದರು ಎಂಬುದು ನಿಜ. ಆದರೆ, ಅವರೆಲ್ಲರೂ ಮುನಿಸು ಮರೆತಿದ್ದಾರೆ. ವರಿಷ್ಠರು ಈ ಸೀಟನ್ನು ಉಳಿಸಿಕೊಳ್ಳುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಇಂದು ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷವು ಒಗ್ಗಟ್ಟಾಗಿ ಈ ಚುನಾವಣೆ ಎದುರಿಸುತ್ತಿದೆ.

ಪ್ರ

ಪರಿಷತ್ ಸದಸ್ಯರಾಗಿ ಆಯ್ಕೆಯಾದರೆ ನಿಮ್ಮ ಆದ್ಯತೆಗಳೇನು?

ರಾಜ್ಯದ ರಾಷ್ಟ್ರದ ಇತರೆ ಪ್ರದೇಶಗಳಿಗೆ ಸರಿಸಮನಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುವೆ. ಮೂಲಸೌಕರ್ಯ ನಿರುದ್ಯೋಗ ಶಿಕ್ಷಣ ಆರೋಗ್ಯ ಕೃಷಿ ಹಾಗೂ ನೀರಾವರಿಯಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವೆ. ಕೆಕೆಆರ್‌ಡಿಬಿಗೆ ಹೆಚ್ಚಿನ ಅನುದಾನ ಕಾಲಮಿತಿಯೊಳಗೆ ಬರುವಂತೆ ಹಾಗೂ ಮಂಡಳಿಗೆ ತನ್ನದೇ ಆದ ಅನುಷ್ಠಾನ ಸಿಬ್ಬಂದಿ ಹಾಗೂ ಕಚೇರಿಗಳನ್ನು ಏಳು ಜಿಲ್ಲೆಗಳಲ್ಲೂ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT