ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಎಚ್‌ಐವಿ ಸೋಂಕಿತರಲ್ಲಿ ಪುರುಷರೇ ಹೆಚ್ಚು

ಪ್ರಸಕ್ತ ಸಾಲಿನಲ್ಲಿ 32 ಗರ್ಭಿಣಿಯರಿಗೆ ಸೋಂಕು: 5,789 ರೋಗಿಗಳಿಗೆ ಪ್ರತಿ ತಿಂಗಳು ಮಾತ್ರೆ ವಿತರಣೆ
ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published 1 ಡಿಸೆಂಬರ್ 2023, 4:34 IST
Last Updated 1 ಡಿಸೆಂಬರ್ 2023, 4:34 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 306 ಜನ ಎಚ್‌ಐವಿ ಸೋಂಕಿಗೆ ಒಳಗಾಗಿದ್ದು, ಇವರಲ್ಲಿ 163 ಪುರುಷರಿದ್ದಾರೆ.

ಜಿಲ್ಲೆಯ 24 ಐಸಿಟಿಸಿ (ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಅಂಡ್‌ ಟೆಸ್ಟಿಂಗ್‌ ಸೆಂಟರ್‌) ಕೇಂದ್ರಗಳಲ್ಲಿ 47,880 ಮಹಿಳೆಯರು ಎಚ್‌ಐವಿ ರಕ್ತ ಪರೀಕ್ಷೆಗೆ ಒಳಗಾಗಿದ್ದು, 140 ಸೋಂಕಿತರು ಪತ್ತೆಯಾಗಿದ್ದಾರೆ. ಹೆಣ್ಣುಮಕ್ಕಳಿಗಿಂತ 10 ಸಾವಿರ ಕಡಿಮೆ ಅಂದರೆ 37,484 ಪುರುಷರು ಪರೀಕ್ಷೆ ಮಾಡಿಸಿದ್ದರೂ 163 ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು 2,312 ಲೈಂಗಿಕ ಅಲ್ಪಸಂಖ್ಯಾತರು ಪರೀಕ್ಷೆಗೆ ಒಳಗಾಗಿದ್ದು, ಮೂವರಲ್ಲಿ ಎಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ.

2020–21ನೇ ಸಾಲಿನಲ್ಲಿ 164 ಪುರುಷರು, 105 ಮಹಿಳೆಯರು ಹಾಗೂ 10 ಲೈಂಗಿಕ ಅಲ್ಪಸಂಖ್ಯಾತರು ಸೇರಿ 279 ಜನರಲ್ಲಿ ಎಚ್‌ಐವಿ ಸೋಂಕು ಕಂಡುಬಂದಿತ್ತು. 2021–22ರಲ್ಲಿ 194 ಪುರುಷರು, 150 ಮಹಿಳೆಯರು, 11 ಲೈಂಗಿಕ ಅಲ್ಪಸಂಖ್ಯಾತರು ಸೇರಿ 355 ಜನರಲ್ಲಿ ಸೋಂಕು ದೃಢಪಟ್ಟಿತ್ತು. 2022–23ರಲ್ಲಿ 235 ಪುರುಷರು, 166 ಮಹಿಳೆಯರು, 5 ಲೈಂಗಿಕ ಅಲ್ಪಸಂಖ್ಯಾತರು ಸೇರಿ 406 ಜನರಲ್ಲಿ ಎಚ್‌ಐವಿ ದೃಢಪಟ್ಟಿದೆ.

‘ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ರಕ್ತ ಪರೀಕ್ಷೆ ಹೆಚ್ಚು ಮಾಡುತ್ತಿರುವುದರಿಂದ ಸೋಂಕಿತರು ಹೆಚ್ಚಾಗಿ ಕಂಡುಬರುತ್ತಿದ್ದಾರೆ. 2020ರಲ್ಲಿ ಎಚ್‌ಐವಿ ಪರೀಕ್ಷೆ ಸಂಖ್ಯೆ 86 ಸಾವಿರ ಇದ್ದರೆ, ಕಳೆದ ಸಾಲಿನಲ್ಲಿ 1.49 ಲಕ್ಷ ಜನರಿಗೆ ಪರೀಕ್ಷೆ ಮಾಡಲಾಗಿದೆ. ಅಲ್ಲದೇ, ವಾಹನ ಚಾಲಕರು, ಲೈಂಗಿಕ ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ಕೈದಿಗಳು, ಕಾರ್ಖಾನೆ ಕಾರ್ಮಿಕರು ಸೇರಿದಂತೆ ಹೆಚ್ಚಿನ ಸೋಂಕಿತರು ಕಂಡುಬರುವ ಸಮೂಹಗಳನ್ನು ಜಾಗೃತಿ ಜೊತೆಗೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ, ಸೋಂಕಿತರ ಸಂಖ್ಯೆ ಹೆಚ್ಚಿದೆ’ ಎಂದು ಜಿಲ್ಲಾ ಏಡ್ಸ್‌ ತಡೆಗಟ್ಟುವ ಮತ್ತು ನಿಯಂತ್ರಣಾಧಿಕಾರಿ ಡಾ.ಚಂದ್ರಕಾಂತ ನರಬೋಳಿ ಹೇಳುತ್ತಾರೆ.

‘ಆರೋಗ್ಯ ಇಲಾಖೆಯು ಸತತ ಜಾಗೃತಿಯ ಮತ್ತು ಏಡ್ಸ್ ಬಾಧಿತರಿಗೆ ಉತ್ತಮವಾದ ಚಿಕಿತ್ಸೆ ಹಾಗೂ ಅವರಿಗೆ ಸ್ಥೈರ್ಯವನ್ನು ತುಂಬಲು ಪ್ರಯತ್ನಿಸುತ್ತಿದೆ. ಇದರಿಂದ ಎಚ್.ಐ.ವಿ ಸೋಂಕಿತರ ಶೇಕಡಾವಾರು ಪ್ರಮಾಣ ಈ ಮೊದಲಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ’ ಎಂದು ಅವರು ತಿಳಿಸಿದರು.

ಸೋಂಕಿತರೊಂದಿಗೆ ಊಟ, ಬಟ್ಟೆ ಹಂಚಿಕೊಳ್ಳುವುದರಿಂದ ಎಚ್‌ಐವಿ ಹರಡುವುದಿಲ್ಲ. ಶೇ 87ಕ್ಕಿಂತ ಹೆಚ್ಚು ಜನ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಏಡ್ಸ್‌ಗೆ ಒಳಗಾಗುತ್ತಿದ್ದಾರೆ. ಏಡ್ಸ್‌ ಒಮ್ಮೆ ದೃಢಪಟ್ಟರೆ ಅದು ಗುಣಮುಖ ಆಗಲ್ಲ. ಆದರೆ, ನಿಯಮಿತ ಔಷಧ, ಪೌಷ್ಟಿಕ ಆಹಾರ ಸೇವನೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಯಿಂದ ರೋಗಿಯ ಆಯಸ್ಸು ಹೆಚ್ಚುತ್ತದೆ. ಅಲ್ಲದೇ, ಅವರಲ್ಲಿ ಭೇದ–ಭಾವ ಮಾಡದಿದ್ದರೆ ಇನ್ನೂ ಚೆನ್ನಾಗಿ ಜೀವಿಸುತ್ತಾರೆ ಎಂಬುದು ತಜ್ಞರ ಅಭಿಪ್ರಾಯ.

ಎಚ್‍ಐವಿ ವೈರಸ್‌ನಿಂದ ಏಡ್ಸ್ ಹರಡುತ್ತದೆ. ಬಿಳಿ ರಕ್ತಕಣಗಳಾದ ಸಿಡಿ–4 ಜೀವಕೋಶಗಳ ಮೇಲೆ ದಾಳಿ ಮಾಡಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಜೀವಕೋಶಗಳು ನಾಶವಾದಂತೆ ಸೋಂಕಿತ ವ್ಯಕ್ತಿ ದುರ್ಬಲನಾಗುತ್ತಾನೆ. ಮುನ್ನೆಚ್ಚರಿಕೆ ಕ್ರಮಗಳೇ ಇದಕ್ಕೆ ಪರಿಹಾರವಾಗಿದೆ.

ಡಿಸೆಂಬರ್‌ 1ರಂದು ವಿಶ್ವ ಏಡ್ಸ್‌ ದಿನ ಆಚರಿಸಲಾಗುತ್ತಿದ್ದು, ‘ಸಮುದಾಯಗಳು ಮುನ್ನಡೆಸಲಿ’ ಈ ವರ್ಷದ ಘೋಷವಾಕ್ಯವಾಗಿದೆ.

ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಯಾವುದೇ ಆಸ್ಪತ್ರೆ ಅಥವಾ ವೈದ್ಯರು ತಾರತಮ್ಯ ಮಾಡುವಂತಿಲ್ಲ. ಒಂದು ವೇಳೆ ರೋಗಿಗಳಿಂದ ದೂರು ಬಂದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.

–ಡಾ.ಚಂದ್ರಕಾಂತ ನರಬೋಳಿ ಜಿಲ್ಲಾ ಏಡ್ಸ್‌ ತಡೆಗಟ್ಟುವ ಮತ್ತು ನಿಯಂತ್ರಣಾಧಿಕಾರಿ

ಏಡ್ಸ್‌ ಪೀಡಿತ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಪ್ರತಿ ತಿಂಗಳು ಮಾತ್ರೆ ತೆಗೆದುಕೊಳ್ಳುವ ಅನುಸರಣೆ ಪೌಷ್ಟಿಕ ಆಹಾರ ಸೇವನೆ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಲಾಗುತ್ತದೆ.

–ಸದಾನಂದ ಆರ್‌.ಗಂಜಿ ಎಆರ್‌ಟಿ ಕೇಂದ್ರದ ಜಿಲ್ಲಾ ಸಮಾಲೋಚಕ

357 ಮಕ್ಕಳು ಏಡ್ಸ್‌ ಬಾಧಿತರು

ಜಿಲ್ಲೆಯಲ್ಲಿ 2006ರಿಂದ ಈ ವರೆಗೆ 11270 ಏಡ್ಸ್‌ ರೋಗಿಗಳು ನೋಂದಣಿಯಾಗಿದ್ದಾರೆ. ವಲಸೆ ಮತ್ತು ಮೃತಪಟ್ಟವರು ಹೊರತುಪಡಿಸಿ ಸದ್ಯ 5789 ರೋಗಿಗಳಿದ್ದಾರೆ. ಇವರಲ್ಲಿ 16 ವರ್ಷದೊಳಗಿನ 208 ಗಂಡು 149 ಹೆಣ್ಣು ಸೇರಿ 357 ಮಕ್ಕಳಿದ್ದಾರೆ. 16ರಿಂದ 40 ವರ್ಷದೊಳಗಿನ 3538 ವಯಸ್ಕರು ಮತ್ತು 40 ವರ್ಷ ಮೇಲ್ಪಟ್ಟವರು 1894 ಜನ ಇದ್ದಾರೆ. ಎಚ್‌ಐವಿ ಸೋಂಕಿತರು ಉತ್ತಮ ಜೀವನ ಶೈಲಿಯನ್ನು ನಿರ್ವಹಣೆ ಮಾಡಲು ಕಲಬುರಗಿ ಜಿಲ್ಲಾ ಆಸ್ಪತ್ರೆ ಮತ್ತು ಜೇವರ್ಗಿಯ ತಾಲ್ಲೂಕು ಆಸ್ಪತ್ರೆಯಲ್ಲಿರುವ ಎಆರ್‌ಟಿಸಿ (ಆ್ಯಂಟಿ ರೆಟ್ರೋವೈರಲ್ ಥೆರಪಿ ಸೆಂಟರ್) ಕೇಂದ್ರಗಳು ನೆರವಾಗುತ್ತವೆ. ಈ ಎರಡು ಎಆರ್‌ಟಿ ಹಾಗೂ 17 ಲಿಂಕ್ ಎಆರ್‌ಟಿ ಕೇಂದ್ರಗಳ ಮೂಲಕ 5789 ರೋಗಿಗಳಿಗೆ ಪ್ರತಿ ತಿಂಗಳು ಮಾತ್ರೆ ವಿತರಿಸಲಾಗುತ್ತದೆ. ಅಲ್ಲದೇ ಎನ್‌ಜಿಒ ಮೂಲಕ ಆಪ್ತ ಸಮಾಲೋಚನೆ ಜೊತೆಗೆ ಮೇಲ್ವಿಚಾರಣೆ ನಡೆಯುತ್ತದೆ. ರೋಗಿಗಳ ವೈಯಕ್ತಿಕ ಮಾಹಿತಿ ಗೋಪ್ಯವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT