ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ ಅಭಿವೃದ್ಧಿಗೆ ಸಾಕಷ್ಟು ನೆರವು

₹ 122 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿಸಿಎಂ ಗೋವಿಂದ ಕಾರಜೋಳ
Last Updated 17 ಆಗಸ್ಟ್ 2020, 5:45 IST
ಅಕ್ಷರ ಗಾತ್ರ

ಸೇಡಂ: ‘ರಾಷ್ಟ್ರಕೂಟರ ನಾಡು ಸೇಡಂ ಕ್ಷೇತ್ರದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಇಲಾಖೆಯಿಂದ ವಸತಿ ನಿಲಯ, ಸಂಪರ್ಕ ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಕೆಲವು ಪ್ರಗತಿಯಲ್ಲಿವೆ’ ಎಂದು ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ₹ 122 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಸಮಾಜ ಕಲ್ಯಾಣ ಇಲಾಖೆಯಿಂದ ₹ 232 ಕೋಟಿ, ಲೋಕೋಪಯೋಗಿ ಇಲಾಖೆಯಿಂದ ₹ 150 ಕೋಟಿ ಮತ್ತು ಜಿಲ್ಲಾ ಖನಿಜ ನಿಧಿಯಿಂದ ₹ 70 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನಡೆದಿವೆ. ಸುಸಜ್ಜಿತ ರಸ್ತೆ, ಸೇತುವೆ, ವಸತಿ ಶಾಲೆಗಳ ನಿರ್ಮಾಣವೂ ನಡೆದಿದೆ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಕೊರೊನಾ ಸಂಕಷ್ಟದಲ್ಲೂ ಹೆಚ್ಚು ಅನುದಾನ ಬಿಡುಗಡೆ ಮಾಡಿದ್ದೇವೆ. ವಸತಿ ಶಾಲೆಗಳನ್ನು ಎಸ್ಸೆಸ್ಸೆಲ್ಸಿಯಿಂದ ಪಿಯುಸಿವರೆಗೆ ಮೇಲ್ದರ್ಜೆಗೇರಿಸಲು ಬಯಸಿದ್ದೆವು. ಯಡಿಯೂರಪ್ಪ ಸರ್ಕಾರ ಬಂದ ಬಳಿಕ ಬರ, ನೆರೆ ಮತ್ತು ಕೊರೊನಾ ನಿರಂತರ ಕಾಡುತ್ತಿವೆ. ಹೀಗಾಗಿ, ಸರ್ಕಾರಕ್ಕೆ ಬರಬೇಕಿದ್ದ ಆದಾಯವೂ ಕಡಿಮೆಯಾಗಿದೆ’ ಎಂದರು.

‘ಪ್ರವಾಹದಿಂದ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಇಂತಹ ಪರಿಸ್ಥಿಯಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ₹ 10 ಸಾವಿರ ವರ್ಗಾಯಿಸಲಾಗಿದೆ. ರಾಜ್ಯ ಸರ್ಕಾರ ಕುಲಕಸುಬು ಅವಲಂಬಿತ ಕುಟುಂಬಗಳ ನೆರವಿಗೆ ₹ 2280 ಕೋಟಿ ಮೊತ್ತದ ಪ್ಯಾಕೇಜನ್ನು ಘೋಷಿಸಿ ಸಂಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಲಾಗಿದೆ’ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ, ‘ಸಮಾಜದಲ್ಲಿ ನಾವು ಮಾಡುವ ಕೆಲಸ ಇತರರಿಗೆ ಮಾದರಿಯಾಬೇಕು’ ಎಂದರು.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಸೇಡಂ ಕ್ಷೇತ್ರದ ಅಭಿವೃದ್ಧಿಗೆ ಕೆಕೆಆರ್‌ಡಿಬಿಯಿಂದ ₹ 40 ಕೋಟಿ, ಡಿಎಂಎಫ್ ನಿಧಿಯಿಂದ ₹ 40 ಕೋಟಿ, ವಿವಿಧ ಇಲಾಖೆಗಳಿಂದ ₹ 100 ಕೋಟಿ ಸೇರಿ ₹ 200 ಕೋಟಿ ಮೊತ್ತದ ದೀರ್ಘ ಕಾಲ ಬಳಕೆಗೆ ಬರುವ ಯೋಜನೆಗಳ ಕ್ರಿಯಾ ಯೋಜನೆ ರೂಪಿಸಿದ್ದೇನೆ’ ಎಂದರು.

‘ಕಾಗಿಣಾ ನದಿಗೆ 2 ಟಿಎಂಸಿ ಅಡಿ ನೀರು ಹಂಚಿಕೆ ಇರುವುದರಿಂದ ನದಿ ಪಾತ್ರದ 20 ಸಾವಿರ ರೈತರ ಅನುಕೂಲಕ್ಕಾಗಿ ಏತ ಮತ್ತು ಹನಿ ನೀರಾವರಿ ಕೈಗೊಳ್ಳಲು ವಿದ್ಯುತ್ ಲೈನ್ ಹಾಕಿಸಲು ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಕಮಲಾವತಿ ನದಿಯು ಕೊಚ್ಚೆಯಾಗಿದ್ದು, ಅದನ್ನು ಗಂಗಾ ನದಿ ಮಾದರಿಯಲ್ಲಿ ಪುನರುಜ್ಜೀವನಗೊಳಿಸಲು ಬಸವರಾಜ ಪಾಟೀಲ ಸೇಡಂ ಅವರ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಲಾಗುವುದು’ ಎಂದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ಜಿಲ್ಲೆಯ ಹೆಣ್ಣುಮಕ್ಕಳೂ ಸಾಧನೆ ಮಾಡುವ ನಿಟ್ಟಿನಲ್ಲಿ ಕಾರಜೋಳ ಅವರು 10 ಹೆಣ್ಣುಮಕ್ಕಳ ವಸತಿ ನಿಲಯಗಳನ್ನು ಮಂಜೂರು ಮಾಡಬೇಕು’ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮಲಾಜಿ, ಜಿಲ್ಲಾಧಿಕಾರಿ ಶರತ್ ಬಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ರಾಜಾ ಪಿ., ಎಸ್ಪಿ ಡಾ.ಸಿಮಿ ಮರಿಯಮ್ ಜಾರ್ಜ್, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಜಿ.ಪಂ. ಸದಸ್ಯ ನಾಗೇಶ ಕಾಳಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ತಾಲೂಕು ಅಧ್ಯಕ್ಷ ಪರ್ವತರಡ್ಡಿ ಪಾಟೀಲ್ ನಾಮವಾರ, ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಆಡಕಿ ಲೋಕೋಪಯೋಗಿ ಇಲಾಖೆ ಇಇ ಕೃಷ್ಣ ಅಗ್ನಿಹೋತ್ರಿ, ರವಿ ಕುದುರೆನ ಮತ್ತು ಶಿವಶಂಕ್ರಯ್ಯಸ್ವಾಮಿ ಇಮಡಾಪುರ ಇದ್ದರು.

ಪತ್ರಕರ್ತರ ಕಪ್ಪು ಮಾಸ್ಕ್ ತೆಗೆಸಿದ ಪೊಲೀಸರು!

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೋವಿಂದ ಕಾರಜೋಳ ಅವರು ಜಿಲ್ಲೆಗೆ ಭೇಟಿ ನೀಡಿ 3 ತಿಂಗಳು ಆಗಿದ್ದರಿಂದ ಕೆಲ ಸಂಘಟನೆಗಳು ಅವರ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ತೋರಿಸಿ ಪ್ರತಿಭಟಿಸುವುದಾಗಿ ಬೆದರಿಕೆ ಒಡ್ಡಿದ್ದವು. ಇದರಿಂದ ಕಾರ್ಯಕ್ರಮ ನಡೆಯುವ ಸಭಾಂಗಣದಲ್ಲಿ ಭಾರಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿತ್ತು.

ಕಪ್ಪು ಬಣ್ಣದ ಎಲ್ಲ ವಸ್ತುಗಳನ್ನೂ ಪೊಲೀಸರು ಹದ್ದಿನ ಕಣ್ಣಿನಿಂದ ವೀಕ್ಷಿಸಿದರು. ‍ಪತ್ರಕರ್ತರೂ ಸೇರಿ ಎಲ್ಲರನ್ನೂ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡುವಂತೆ ತಪಾಸಣೆ ಮಾಡಿದರು. ಕೊರೊನಾ ಪ್ರಯುಕ್ತ ಬಾಯಿಗೆ ಕಪ್ಪು ಮಾಸ್ಕ್ ಹಾಕಿಕೊಂಡು ಬಂದಿದ್ದ ಕಲಬುರ್ಗಿಯ ಹಿರಿಯ ಪತ್ರಕರ್ತರೊಬ್ಬರಿಗೆ ಆ ಮಾಸ್ಕ್ ತೆಗೆದು ಹಾಕಿ ಬಿಳಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದರು. ಅನ್ಯಮಾರ್ಗವಿಲ್ಲದೇ ಅವರು ಪೊಲೀಸರು ನೀಡಿದ ಬಿಳಿ ಮಾಸ್ಕ್ ಹಾಕಿಕೊಂಡರು!

ಸಂಸದ ಉಮೇಶ ಜಾಧವ ಕಪ್ಪು ಜಾಕೆಟ್‌ ಧರಿಸಿದ್ದರೆ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಕಪ್ಪು ಬಣ್ಣದ ಮಾಸ್ಕ್ ಹಾಕಿಕೊಂಡಿದ್ದರು.

₹ 2700 ಕೋಟಿ ಹಾನಿ

‘ರಾಜ್ಯದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಲೋಕೋಪಯೋಗಿ ಇಲಾಖೆಗೆ ಸೇರಿದ ₹ 2700 ಕೋಟಿ ಮೌಲ್ಯದ ರಸ್ತೆ, ಸೇತುವೆಗಳು ನಾಶವಾಗಿವೆ. ಮಳೆ ಮುಂದುವರಿದಿರುವ ಕಾರಣ ಸರ್ವೆ ಕಾರ್ಯ ಇನ್ನೂ ಮುಕ್ತಾಯವಾಗಿಲ್ಲ. ಅಂತಿಮ ಸರ್ವೆ ನಡೆಸಿದ ಬಳಿಕ ನಿಖರ ನಷ್ಟದ ಲೆಕ್ಕ ಸಿಗಲಿದೆ’ ಎಂದು ಗೋವಿಂದ ಕಾರಜೋಳ ತಿಳಿಸಿದರು.

‘ಕಳೆದ ಬಾರಿ ನೆರೆ ಸಂಭವಿಸಿದಾಗ ಲೋಕೋಪಯೋಗಿ ‌ಇಲಾಖೆಯ ₹ 8 ಸಾವಿರ ಕೋಟಿ ಮೊತ್ತದ ಆಸ್ತಿಗೆ ಹಾನಿಯಾಗಿತ್ತು. ನೆರೆ ಸಂತ್ರಸ್ತರ ವಿಚಾರದಲ್ಲಿ ದೇಶದ ಇತರ ರಾಜ್ಯಗಳಿಗಿಂತ ಹೆಚ್ಚು ಉದಾರವಾಗಿ ವರ್ತಿಸಿದ ನಮ್ಮ ಸರ್ಕಾರ ಸಂಪೂರ್ಣ ನೆಲಸಮಗೊಂಡ ಮನೆಗ ಪುನರ್‌ ನಿರ್ಮಾಣಕ್ಕೆ ₹ 5 ಲಕ್ಷ ನೀಡಿದೆ. ಉಳಿದ ರಾಜ್ಯಗಳು ಕೇವಲ ₹ 1 ಲಕ್ಷ ನೀಡಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT