ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಡಿ.ಪಾಟೀಲ ಮನೆಗೆ ಭೇಟಿ ನೀಡಿದ ಸಂಸದ ಜಾಧವ

ಬಿಜೆಪಿ ಬೆಂಬಲಿಸುವಂತೆ ಮಹಾಂತೇಶ ಪಾಟೀಲರನ್ನು ಕೋರಿದ ಜಾಧವ
Published 18 ಏಪ್ರಿಲ್ 2024, 6:04 IST
Last Updated 18 ಏಪ್ರಿಲ್ 2024, 6:04 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ಹಾಗೂ ಕೆಇಎ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ಅವರ ಮನೆಗೆ ಬಿಜೆಪಿ ಅಭ್ಯರ್ಥಿ, ಸಂಸದ ಡಾ.ಉಮೇಶ ಜಾಧವ ಅವರು ಬುಧವಾರ ತೆರಳಿ, ಆರ್.ಡಿ ಪಾಟೀಲ ಸಹೋದರ ಮಹಾಂತೇಶ ಪಾಟೀಲ ಅವರನ್ನು ಭೇಟಿಯಾಗಿ ಮತಯಾಚಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಿಎಸ್‌ಐ ನೇಮಕಾತಿ ಹಗರಣವು ಬಿಜೆಪಿಗೆ ಉರುಳಾಗಿದ್ದು, ಸದನದ ಹೊರ–ಒಳಗೆ ಬಹಳಷ್ಟು ಚರ್ಚೆಯಾಗಿತ್ತು. ಇದರ ನಡುವೆ ಸಂಸದ ಜಾಧವ ಅವರು, ಆರ್‌.ಡಿ. ಪಾಟೀಲ ಮನೆಗೆ ತೆರಳಿ, ಮತಯಾಚಿಸಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಉಪಾಹಾರ ಮಾಡಿದ್ದು, ಪಕ್ಷದ ಒಳಗೆ ಹಾಗೂ ಹೊರಗೆ ಪರ– ವಿರೋಧದ ಮಾತುಗಳು ಕೇಳಿಬರುತ್ತಿವೆ.

ಇದೇ ವೇಳೆ ಕೋಲಿ ಸಮಾಜದ ಹಲವು ಮುಖಂಡರನ್ನು ಜಾಧವ ಅವರು ಸನ್ಮಾನಿಸಿ ಮತಯಾಚಿಸಿದರು. ಕೋಲಿ, ಕಬ್ಬಲಿಗ ಸಮುದಾಯದ ಎಸ್‌ಟಿ ಸೇರ್ಪಡೆಯ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ನಡುವೆ ಪರಸ್ಪರ ಆರೋಪ– ಪ್ರತ್ಯಾರೋಪ ನಡೆಯುತ್ತಿವೆ. ಇದರ ನಡುವೆಯೇ ಜಾಧವ ಅವರು ಮಹಾಂತೇಶ ಅವರನ್ನು ಭೇಟಿಯಾಗಿ, ಸಮುದಾಯದ ಮುಖಂಡರನ್ನು ಸನ್ಮಾನಿಸಿದ್ದಾರೆ.

ಸೌಹಾರ್ದಯುತ ಭೇಟಿ: ‘ಸಂಸದರು ಸೌಹಾರ್ದಯುತವಾಗಿ ಭೇಟಿ ನೀಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ನಮ್ಮ ಮನೆಯ ಮುಂದೆ ಹೋಗುವಾಗ ನಾವು ಅವರ ಮನೆಯ ಮುಂದೆಯೇ ಇದ್ದೇವು. ಮನೆ ಒಳಗೆ ಬರುವಂತೆ ಕೇಳಿದ ಮೇಲೆಯೇ ಸಂಸದರು ಒಳಗೆ ಬಂದರು’ ಎಂದು ಸಮಾಜವಾದಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಹಾಂತೇಶ ಪಾಟೀಲ ಹೇಳಿದ್ದಾರೆ.

‘ಉಭಯ ಕುಶಲೋಪರಿ ಬಳಿಕ ಮತಯಾಚನೆ ಮಾಡಿದರು. ಬಿಜೆಪಿ ಬೆಂಬಲಿಸುವಂತೆ ಕೇಳಿಕೊಂಡರು. ಆದರೆ, ನಾವು ರಾಷ್ಟ್ರಮಟ್ಟದಲ್ಲಿ ‘ಇಂಡಿಯಾ’ ಒಕ್ಕೂಟದಲ್ಲಿದ್ದೇವೆ. ಹೀಗಾಗಿ, ಸಂಸದರನ್ನು ಬೆಂಬಲಿಸುವ ಮಾತು ಬರುವುದಿಲ್ಲ. ಅಲ್ಲದೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರೂ ಇದ್ದಾರೆ. ಹೀಗಾಗಿ, ಅವರನ್ನೇ ಬೆಂಬಲಿಸಬೇಕಾಗುತ್ತದೆ ಎಂಬುದನ್ನು ಸಂಸದರ ಗಮನಕ್ಕೆ ತಂದಿದ್ದೇನೆ’ ಎಂದಿದ್ದಾರೆ.

‘ಬಿಜೆಪಿ ಸೇರ್ಪಡೆಯ ಮಾತುಕತೆ ನಡೆದಿಲ್ಲ. ಆದರೆ, ಅವರ ಭೇಟಿಯನ್ನು ಸುಖಾಸುಮ್ಮನೆ ವಿವಾದ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹಗರಣದ ರೂವಾರಿಯೊಂದಿಗೆ ಅಕ್ರಮ ಸಂಬಂಧ: ಕಾಂಗ್ರೆಸ್

ಪಿಎಸ್‌ ಹಗರಣ ಹಾಗೂ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಯ ಮನೆಯಲ್ಲಿ ಸಂಸದ ಡಾ.ಉಮೇಶ ಜಾಧವ ಅವರ ಭರ್ಜರಿ ಭೋಜನ ಮಾಡಿದ್ದಾರೆ. ನೀವೇ ಆರ್.ಡಿ. ಪಾಟೀಲರ ರಕ್ಷಕರು ನೀವೇ ಆತನ ಬ್ಯಾಕ್ ಬೋನ್ ಎನ್ನುವುದು ಮತ್ತೊಮ್ಮೆ ಬಯಲಾಗಿದೆ. ಕರ್ನಾಟಕ ಕಂಡ ಪ್ರಮುಖ ಹಗರಣದ ರೂವಾರಿಯೊಂದಿಗೆ ಬಿಜೆಪಿಯವರ ಅಕ್ರಮ ಸಂಬಂಧವು ಸಕ್ರಮ ಸಂಬಂಧವಾಗಿ ಬದಲಾಗಿದೆ ಎಂದು ಕಾಂಗ್ರೆಸ್‌ ‘ಎಕ್ಸ್‌’ನಲ್ಲಿ ಬರೆದುಕೊಂಡಿದೆ. ವಿಜಯೇಂದ್ರ ಅವರೇ ಪರೀಕ್ಷಾ ಅಕ್ರಮವಾದಾಗ ಆರ್.ಡಿ. ಪಾಟೀಲ ತಲೆ ಮರೆಸಿಕೊಳ್ಳಲು ಸಹಕರಿಸಿದ್ದು ಯಾರು? ಕೇಶವಕೃಪವೋ? ಜಗನ್ನಾಥ ಭವನವೋ’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT