ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಗೆ ಪುರಸಭೆ ನಿರ್ಲಕ್ಷ್ಯ: ಆರೋಪ

ಜಾಲಿಮರಗಳ ಹಾವಳಿ: ವಿಷ ಜಂತುಗಳ ಮಧ್ಯೆ ಬದುಕು
Last Updated 11 ಡಿಸೆಂಬರ್ 2019, 11:17 IST
ಅಕ್ಷರ ಗಾತ್ರ

ವಾಡಿ: ಮುಗಿಲೆತ್ತರ ಬೆಳೆದು ನಿಂತ ಜಾಲಿ ಮರಗಳು, ಹಾವು ಚೇಳುಗಳೆಂಬ ವಿಷ ಜಂತುಗಳ ನಡುವೆ ಭಯದ ಬದುಕು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ವಾರ್ಡ್ ನಿವಾಸಿಗಳು...

ಇದು ಸಿಮೆಂಟ್ ನಗರಿ ಖ್ಯಾತಿಯ ವಾಡಿ ಪಟ್ಟಣದ ವಾರ್ಡ್ ನಂ 1ರ ಬಸವನಖಣಿ ನಿವಾಸಿಗಳ ದೈನಂದಿನ ಗೋಳು.

ಬಡಾವಣೆಯ ತುಂಬಾ ಹರಡಿ ನಿಂತ ಜಾಲಿಗಿಡಗಳು ಹಾವು ಚೇಳುಗಳ ಹುತ್ತಗಳಾಗಿದ್ದು, ಸ್ಥಳೀಯರಲ್ಲಿ ಪ್ರಾಣ ಭೀತಿ ಎದುರಾಗಿದೆ. ವಿಷ ಸರ್ಪಗಳ ಭಯದಿಂದ ಸ್ಥಳೀಯರು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕುತ್ತಿದ್ದಾರೆ.

ಆಳೆತ್ತರ ಬೆಳೆದು ನಿಂತ ಜಾಲಿ ಮರಗಳು ನರಕದ ಅನುಭವ ನೀಡುತ್ತಿವೆ. ಜಾಲಿ ಮರಗಳ ಪೊದೆಗಳೇ ವಿಷಜಂತುಗಳಿಗೆ ನೆಚ್ಚಿನ ತಾಣವಾಗಿದ್ದು, ಮಕ್ಕಳನ್ನು ಹೊರಗಡೆ ಕಳುಹಿಸಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಉಂಟಾಗಿದೆ. ಸಾರ್ವಜನಿಕರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಾ ಸಮಸ್ಯೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸುವುದು ಸಾಮಾನ್ಯವಾಗಿದೆ.

ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಬೇಕಾದ ಪುರಸಭೆ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಸ್ಥಳೀಯರ ಗಂಭೀರ ಆರೋಪ. 'ಖಾಲಿ ಜಾಗದಲ್ಲಿ ಮುಳ್ಳಿನ ಗಿಡಗಳು ಬೆಳೆದು ನಿಂತು ಭಯ ಬರುವಂತಾಗಿದೆ. ರಾತ್ರಿ ವೇಳೆಯಲ್ಲಿ ಸಂಚರಿಸಲು ಹೆದರಬೇಕಾದ ಪರಿಸ್ಥಿತಿ ಇದೆ' ಎನ್ನುತ್ತಾರೆ ಸ್ಥಳೀಯ ನಿವಾಸಿ ಸೀತಾಬಾಯಿ ಚವ್ಹಾಣ.

ಹಾವು ಕಡಿತದಿಂದ ಕಳೆದ ವರ್ಷ ಪುರಸಭೆ ಸದಸ್ಯರೊಬ್ಬರು ಮೃತಪಟ್ಟರೆ ಸೋಮವಾರ 8 ವರ್ಷ ಬಾಲಕಿ ಶೌಚಾಲಯಕ್ಕೆ ತೆರಳಿದಾಗ ವಿಷ ಸರ್ಪ ಕಚ್ಚಿ ಮೃತಪಟ್ಟಿದ್ದಾಳೆ. ಇದರಿಂದ ಇಡೀ ಬಡಾವಣೆಯಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಇಲ್ಲಿ ಸಾರ್ವಜನಿಕ ಹಾಗೂ ವೈಯುಕ್ತಿಕ ಶೌಚಾಲಯಗಳು ಇಲ್ಲದ ಕಾರಣ ಗ್ರಾಮಸ್ಥರಿಗೆ ಜಾಲಿ ಮರಗಳೇ ಮಲ ವಿಸರ್ಜನೆಯ ತಾಣವಾಗಿವೆ. ಕಾಲ ಕಾಲಕ್ಕೆ 'ಜಂಗಲ್ ಕಟಿಂಗ್' ಹೆಸರಿನಲ್ಲಿ ಗಿಡಗಳ ಕಟಾವಿಗೆ ಹಣ ವ್ಯಯಿಸಲಾಗುತ್ತಿದೆ. ಆದರೆ ಪ್ರಗತಿ ಮಾತ್ರ ಶೂನ್ಯ ಎನ್ನುವಂತಾಗಿದೆ. ಖಾಲಿ ನಿವೇಶನ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಜಾಲಿ ಗಿಡಗಳನ್ನು ಕಡಿದು ಸ್ವಚ್ಛತೆ ಕಾಪಾಡಿಕೊಳ್ಳಲು ಸೂಚಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT