ಭಾನುವಾರ, ಸೆಪ್ಟೆಂಬರ್ 19, 2021
31 °C
ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಮುರುಗೇಶ ನಿರಾಣಿ

ಕೈಗಾರಿಕೆಗಳಿಗೆ 5 ಸಾವಿರ ಎಕರೆ ಮೀಸಲು: ಸಚಿವ ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರವು ಈಗಾಗಲೇ ವಾಯು ಸಂಪರ್ಕ ಹೊಂದಿದ್ದರಿಂದ ಉದ್ಯಮಿಗಳನ್ನು ಇಲ್ಲಿ ಹೂಡಿಕೆಗೆ ಆಕರ್ಷಿಸಲು ಉದ್ದೇಶಿತ ಯೋಜನೆಗಳ ಹೊರತಾಗಿ ಒಂದೇ ಕಡೆ 5 ಸಾವಿರ ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡು ಬೇರೆ ಬೇರೆ ಉದ್ಯಮಗಳನ್ನು ಆರಂಭಿಸುವ ನಿಟ್ಟಿನಲ್ಲಿ ಕೈಗಾರಿಕಾ ವಲಯವನ್ನು ಆರಂಭಿಸುವ ಚಿಂತನೆ ನಡೆದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ಪ್ರಯುಕ್ತ ಇಲ್ಲಿನ ಪೊಲೀಸ್‌ ಪರೇಡ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಜಿಲ್ಲೆಗೆ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಮಂಜೂರು ಮಾಡಿದ್ದು, ಇದು 1000 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಇದಲ್ಲದೆ ಜಿಲ್ಲೆಯಲ್ಲಿ ಜ್ಯುವೆಲರಿ ಪಾರ್ಕ್ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದರು.

‘ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ರೈತ ಮಕ್ಕಳಿಗೆ ₹ 2500ರಿಂದ ₹ 11 ಸಾವಿರದವರೆಗೆ ವಾರ್ಷಿಕ ‘ವಿದ್ಯಾರ್ಥಿ ವೇತನ’ ಪ್ರಸಕ್ತ 2021–21ನೇ ಸಾಲಿನಿಂದಲೆ ಜಾರಿಗೊಳಿಸಿ ಆದೇಶಿಸಿದ್ದು, ಇದಕ್ಕಾಗಿ ₹ 1 ಸಾವಿರ ಕೋಟಿ ಮೀಸಲಿಡಲಾಗಿದೆ. ರಾಜ್ಯದ 17 ಲಕ್ಷ ಅನ್ನದಾತರ ಮಕ್ಕಳು ಇದರ ಫಲಾನುಭವಿಗಳಾಗಲಿದ್ದಾರೆ’ ಎಂದರು.

ಆಗಸ್ಟ್ ತಿಂಗಳಿಂದಲೇ ಅನ್ವಯವಾಗುವಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ ವೃದ್ಧಾಪ್ಯ ವೇತನ ₹ 1 ಸಾವಿರದಿಂದ ₹ 1200ಕ್ಕೆ ಹೆಚ್ಚಿಸಿದ್ದು, ಜಿಲ್ಲೆಯ 95,934 ಫಲಾನುಭವಿಗಳು ಇದರ ಸೌಲಭ್ಯ ಪಡೆಯಲಿದ್ದಾರೆ. ವಿಧವಾ ವೇತನ ಸಹ ₹ 600ರಿಂದ ₹ 800ರವರೆಗೆ ಹೆಚ್ಚಿಸಿದ್ದು, 50,163 ಜನರು ಇದರ ಲಾಭ ಪಡೆಯಲಿದ್ದಾರೆ. ಅದೇ ರೀತಿ ಶೇ 40ರಿಂದ ಶೇ 75ರವರೆಗೆ ಅಂಗವಿಕಲತೆ ಹೊಂದಿರುವ ವಿಶೇಷ ಚೇತನರಿಗೆ ₹ 600ರಿಂದ ₹ 800ಕ್ಕೆ ಹೆಚ್ಚಿಸಿದ್ದು, ಜಿಲ್ಲೆಯ 18 ಸಾವಿರ ಜನರು ಇದರ ಫಲಾನುಭವಿಗಳಿದ್ದಾರೆ’ ಎಂದು ಹೇಳಿದರು.

ರಾಜ್ಯದಲ್ಲಿನ ಸುಮಾರು 50 ಲಕ್ಷ ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ಮತ್ತು ಎಸ್.ಟಿ.ಪಿ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕವಾಗಿ ‘ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ’ ಸ್ಥಾಪಿಸಲಾಗುತ್ತಿದೆ ಎಂದು ಘೋಷಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2021–22ನೇ ಸಾಲಿಗೆ ₹ 1,493 ಕೋಟಿ ಅನುದಾನ ಹಂಚಿಕೆಯಾಗಿದೆ. ಇದರಲ್ಲಿ 1,078 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದುವರೆಗೆ ₹ 298 ಕೋಟಿ ಖರ್ಚು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗದ 6 ಜಿಲ್ಲೆಗಳ ಸರ್ವರ ಸಮಗ್ರ ಅಭಿವೃದ್ಧಿಗಾಗಿ ಮತ್ತು ಪರಿಣಾಮಕಾರಿ ಬದಲಾವಣೆ ತರಲು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವನ್ನು ರಚಿಸಿ ₹ 500 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದ ₹ 6 ಸಾವಿರದ ಜೊತೆಗೆ ರಾಜ್ಯ ಸರ್ಕಾರದ ₹ 4 ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆಯಡಿ ಜಿಲ್ಲೆಯಲ್ಲಿ 2.85 ಲಕ್ಷ ರೈತರು ಈ ಯೋಜನೆಯಡಿ ನೋಂದಣಿಯಾಗಿದ್ದು, 2019–20ನೇ ಸಾಲಿನಿಂದ ಇಲ್ಲಿಯವರೆಗೆ 2.68 ಲಕ್ಷ ರೈತರಿಗೆ ₹ 517.38 ಕೋಟಿ ಆರ್ಥಿಕ ನೆರವು ನೀಡಲಾಗಿದೆ.

ಶಹಾಬಾದ ಪಟ್ಟಣದಲ್ಲಿ ಕಳೆದ 20 ವರ್ಷದಿಂದ ಪಾಳು ಬಿದ್ದಿದ್ದ ಇಎಸ್ಐಸಿ ಆಸ್ಪತ್ರೆಯನ್ನು ₹ 12 ಕೋಟಿ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಣಗೊಳಿಸುತ್ತಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ಆರೋಗ್ಯ ಸೇವೆಗೆ ಇದು ಲಭ್ಯವಾಗಲಿದೆ ಎಂದು ನಿರಾಣಿ ಘೋಷಿಸಿದರು.

₹ 181 ಕೋಟಿ ಹಣವನ್ನು ವೆಚ್ಚ ಮಾಡಿ ಕಲಬುರ್ಗಿ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಿದ್ದು, ಈಗಾಗಲೆ ವಾಣಿಜ್ಯ ಹಾರಾಟ ಆರಂಭಗೊಂಡು ಇಲ್ಲಿನ ಬಹುದಿನಗಳನ್ನು ಕನಸನ್ನು ನಮ್ಮ ಸರ್ಕಾರ ಈಡೇರಿಸಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರವು ಇಲ್ಲಿ ಎರಡು ಫ್ಲೈಯಿಂಗ್ ಶಾಲೆ ಆರಂಭಿಸಲು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿನ ನಿರುದ್ಯೋಗಿ ಅಭ್ಯರ್ಥಿಗಳಿಗೆ ವಿಮಾನಯಾನ ಕ್ಷೇತ್ರದಲ್ಲಿ ವಿಫುಲ ಅವಕಾಶ ದೊರೆಯಲಿದೆ ಎಂದರು.

ಸಂಸದ ಡಾ.ಉಮೇಶ ಜಾಧವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಸುನೀಲ ವಲ್ಯಾಪುರ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಕರ್ನಾಟಕ ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಪ್ರಾದೇಶಿಕ ಆಯುಕ್ತ ಡಾ.ಎನ್‌.ವಿ. ಪ್ರಸಾದ್, ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಎಸ್ಪಿ ಡಾ. ಸಿಮಿ ಮರಿಯಂ ಜಾರ್ಜ್, ಜಿ.ಪಂ. ಸಿಇಓ ಡಾ. ದಿಲೀಷ್ ಶಶಿ ವೇದಿಕೆಯಲ್ಲಿದ್ದರು.

ಚಿಣ್ಣರಿಲ್ಲದೇ ಬಿಕೊ ಎಂದ ಕ್ರೀಡಾಂಗಣ

ಪ್ರತಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯೂ ವಿವಿಧ ಶಾಲೆಗಳ ಮಕ್ಕಳು ಧ್ವಜಾರೋಹಣದ ಬಳಿಕ ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ, ಗಾಯನ, ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಧರಿಸುವ ಮೂಲಕ ಕ್ರೀಡಾಂಗಣದಲ್ಲಿ ಹೊಸ ಮಿಂಚು ಹರಿಸುತ್ತಿದ್ದರು. ತಮ್ಮ ಮಕ್ಕಳ ನೃತ್ಯ ನೋಡಲೆಂದು ಪೋಷಕರೂ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ, ಕಳೆದ ಎರಡು ವರ್ಷಗಳಿಂದ ಕೊರೊನಾ ನಿಮಿತ್ತ ಜಿಲ್ಲಾಡಳಿತ ಸರಳವಾಗಿ ಮಕ್ಕಳ ಉಪಸ್ಥಿತಿಯಿಲ್ಲದೇ ಕಾರ್ಯಕ್ರಮ ನಡೆಸುತ್ತಿದೆ. ಹೀಗಾಗಿ ಭಾನುವಾರವೂ ಚಿಣ್ಣರ ಅನುಪಸ್ಥಿತಿಯಿಂದಾಗಿ ಕ್ರೀಡಾಂಗಣ ಖಾಲಿ ಖಾಲಿ ಎನಿಸಿತು. ಧ್ವಜಾರೋಹಣ ನೆರವೇರಿಸಿದ ಸಚಿವ ಮುರುಗೇಶ ನಿರಾಣಿ ಅವರೂ ಮುಖ್ಯ ಭಾಷಣ ಮಾಡಿದ ಬಳಿಕ ವಿವಿಧ ಪಡೆಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಆ ಬಳಿಕ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ, ಪ್ರಬಂಧ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಆಯ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದ ಬಳಿಕ ಇಡೀ ಕಾರ್ಯಕ್ರಮ ಮುಗಿದು ಹೋಯಿತು.

ದತ್ತಾತ್ರೇಯ ಪಾಟೀಲ ಗೈರು

ಪ್ರತಿ ಬಾರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಈ ಬಾರಿ ಭಾಗವಹಿಸಲಿಲ್ಲ.

ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪಾಟೀಲ ಅವರು ಸಚಿವ ಸಂಪುಟ ಪುನರ್ರಚನೆಯಾದ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇತ್ತೀಚೆಗೆ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕ್ರಮ ನಡೆಸಿದಾಗಲೂ ಶಾಸಕರು ಗೈರಾಗಿದ್ದರು. ಸಚಿವ ನಿರಾಣಿ ಶನಿವಾರ ಸಂಜೆ ಜಿಲ್ಲಾಡಳಿತದ ಅಧಿಕಾರಿಗಳನ್ನು ಭೇಟಿ ಮಾಡಿದಾಗಲೂ ಸಭೆಯಿಂದ ದೂರವೇ ಉಳಿದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು