ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಶಾಸಕ ನಾಗರೆಡ್ಡಿ ಪಾಟೀಲ ನಿಧನ: ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

ಮಾಜಿ ಶಾಸಕ ನಾಗರೆಡ್ಡಿ ಪಾಟೀಲರು ಪಂಚಭೂತಗಳಲ್ಲಿ ಲೀನ
Published 6 ಮೇ 2024, 14:33 IST
Last Updated 6 ಮೇ 2024, 14:33 IST
ಅಕ್ಷರ ಗಾತ್ರ

ಸೇಡಂ: ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದ ಮಾಜಿ ಶಾಸಕ ನಾಗರೆಡ್ಡಿ ಪಾಟೀಲ (79)ಅವರು ಅಂತ್ಯಕ್ರಿಯೆ ಸೋಮವಾರ ಸಂಜೆ ಅವರ ಸ್ವಂತ ಹೊಲದಲ್ಲಿ ಸರ್ಕಾರಿ‌ ಗೌರವಗಳೊಂದಿಗೆ ಹಾಗೂ ವೀರಶೈವ ಲಿಂಗಾಯತ ಧಾರ್ಮಿಕ ವಿಧಿ ವಿಧಾನದಂತೆ ನೆರವೇರಿತು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ನಾಗರೆಡ್ಡಿ ಪಾಟೀಲ ಅವರ ಪಾರ್ಥಿವ ಶರೀರಕ್ಕೆ ಗೌರವಿಸಿ ನಮಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. 

ಇದಕ್ಕೂ ಮುನ್ನ ಮೃತರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಮಾತೃಛಾಯ ಕಾಲೇಜು ಆವರಣದಲ್ಲಿ ಗೌರವ ಸಲ್ಲಿಸಲಾಯಿತು. ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ ಸೇಡಂ, ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು. ಸಮಿತಿಯ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಪಾರ್ಥಿವ ಶರೀರದ ದರ್ಶನ ಪಡೆದರು.

ಶಾಸಕರಾಗಿ ಸೇವೆ: ನಾಗರೆಡ್ಡಿ ಪಾಟೀಲರು ಬಿಜೆಪಿಯಿಂದ ಸ್ಪರ್ಧಿಸಿ 1982-83 ರಿಂದ 1985 ರವರೆಗೆ ಸೇಡಂ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು. ಆಗ ರಾಮಕೃಷ್ಣ ಹೆಗಡೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ರಾಜಕೀಯದಲ್ಲಿ ಮುಂದುವರೆಯದೇ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡರು.

ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಯಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದರು. ನಂತರ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಜಕೀಯ ಕ್ಷೇತ್ರದಲ್ಲಿದ್ದು ಜನರ ಸೇವೆ ಮಾಡುವುದರ ಜೊತೆಗೆ ಶೈಕ್ಷಣಿಕವಾಗಿ ಅವರು ಮಾಡಿರುವ ಸೇವೆ ಜನಮನ್ನಣೆಯಲ್ಲಿತ್ತು.

ಸಚಿವ ಶರಣಬಸಪ್ಪ ದರ್ಶನಾಪುರ, ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಜಗದೇವ ಗುತ್ತೇದಾರ, ರಾಧಾಕೃಷ್ಣ ದೊಡ್ಡಮನಿ, ಡಿಎಸ್ಪಿ ಸಂಗಮನಾಥ ಹಿರೇಮಠ, ದೌಲತ್, ತಿರುಮಲೇಶ, ಮುಖಂಡರಾದ ನಾಗೇಶ್ವರರಾವ ಮಾಲಿ ಪಾಟೀಲ, ಲಿಂಗಾರೆಡ್ಡಿ ಬಾಸರೆಡ್ಡಿ, ಸಿದ್ರಾಮಪ್ಪ ದಂಗಾಪುರೆ, ಸುದರ್ಶನರೆಡ್ಡಿ ಪಾಟೀಲ, ಸಂತೋಷ ಕುಲಕರ್ಣಿ, ಸಿದ್ದಪ್ಪ ತಳ್ಳಳ್ಳಿ, ಶಿವಶರಣರೆಡ್ಡಿ ಪಾಟೀಲ, ಮಹಿಪಾಲರೆಡ್ಡಿ ಮುನ್ನೂರ, ಅನಂತಯ್ಯ ಮುಸ್ತಾಜರ್, ವೀರಾರರೆಡ್ಡಿ ಹೂವಿನಬಾವಿ, ಬಸವರಾಜ ಪಾಟೀಲ ಊಡಗಿ, ವಿಶ್ವನಾಥ ಪಾಟೀಲ, ಶಿವಶರಣರೆಡ್ಡಿ ಪಾಟೀಲ, ಅನಂತರೆಡ್ಡಿ ಪಾಟೀಲ, ತಹಶೀಲ್ದಾರ್ ಶಿವಾನಂದ ಮೇತ್ರೆ, ಅನಂತರೆಡ್ಡಿ ಪಾಟೀಲ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಶಿಕ್ಷಣ ಪ್ರೇಮಿಯಾಗಿ ಹಾಗೂ ಶಾಸಕರಾಗಿ ಮಾಡಿರುವ ಅವರ ಕಾರ್ಯ ಜನಮಾನಸದಲ್ಲಿ ನೆನಪಿಡುವಂತಹದ್ದಾಗಿದೆ.
ಪ್ರಿಯಾಂಕ ಖರ್ಗೆ, ಸಚಿವ
ಸಾರ್ವಜನಿಕ ಬದುಕಿನಲ್ಲಿ ವೈದ್ಯರಾಗಿ ರಾಜಕೀಯವಾಗಿ ಹಾಗೂ ಶೈಕ್ಷಣಿಕ ಕ್ಷೇತ್ರದ ಮೂಲಕ ಜನ ಸೇವೆಯನ್ನು ಮಾಡಿದ ಕೀರ್ತಿ ಅವರದ್ದಾಗಿದೆ. ಅವರ ಅಗಲಿಕೆ ಸೇಡಂ ಕ್ಷೇತ್ರಕ್ಕೆ ತುಂಬಲರಾದ ನಷ್ಟವಾಗಿದೆ.
ಡಾ.ಶರಣಪ್ರಕಾಶ ಪಾಟೀಲ, ಸಚಿವ
ನಮ್ಮ ಸಮಿತಿಯಲ್ಲಿ ನಾಗರೆಡ್ಡಿ ಪಾಟೀಲರು ಇದ್ದಾರೆಂದರೆ ಅದೊಂದು ಗೌರವ ಕಳೆ ಇರುತ್ತಿತ್ತು. ಅವರ ಸಹಕಾರ ಮತ್ತು ಸಲಹೆ ಸಂಸ್ಥೆಯ ಏಳಿಗೆಯಲ್ಲಿದೆ.
ಸದಾಶಿವ ಸ್ವಾಮೀಜಿ, ಅಧ್ಯಕ್ಷ, ಕೊ.ಬ.ಭಾ.ಶಿ ಸಮಿತಿ
ನಾಗರೆಡ್ಡಿ ಪಾಟೀಲರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಸೇವೆ ನಮ್ಮ ಸಂಸ್ಥೆಗೆ ಅಗಾಧವಾಗಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
ಬಸವರಾಜ ಪಾಟೀಲ ಸೇಡಂ, ಸಂರಕ್ಷಕ, ಕೊ.ಬ.ಭಾ.ಶಿ ಸಮಿತಿ
ನಾಗರೆಡ್ಡಿ ಪಾಟೀಲ
ನಾಗರೆಡ್ಡಿ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT