ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ನರೇಂದ್ರ ಮೋದಿ

Published 12 ಮಾರ್ಚ್ 2024, 4:59 IST
Last Updated 12 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ–ಬೆಂಗಳೂರು ಮಧ್ಯೆ ವಾರದಲ್ಲಿ ಆರು ದಿನ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ವರ್ಚುವಲ್ ಮೂಲಕ ಗುಜರಾತ್‌ನ ಅಹಮದಾಬಾದ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಇಂದು) ಚಾಲನೆ ನೀಡಿದರು.

ಕಲಬುರಗಿ ನಿಲ್ದಾಣದಲ್ಲಿ ನಿಂತಿದ್ದ ವಂದೇ ಭಾರತ್ ರೈಲಿಗೆ ಬಲೂನ್, ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 9.40ಕ್ಕೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸುತ್ತಿದ್ದಂತೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಚಲಿಸಲು ಆರಂಭಿಸಿತು. ಈ ವೇಳೆ ನಿಲ್ದಾಣದಲ್ಲಿದ್ದ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ‘ವಂದೇ ಭಾರತ್‌, ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದರು.

ಹೊಸ ವಿನ್ಯಾಸದಿಂದ ಕಂಗೊಳಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸ್ಪರ್ಶಿಸಿದ ಪ್ರಯಾಣಿಕರು ಸಂಭ್ರಮಿಸಿದರು. ರೈಲಿನ ಮುಂಭಾಗ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ರೈಲಿನೊಳಗೆ ಓಡಾಡಿ ಖುಷಿಪಟ್ಟು, ವಿಡಿಯೊ ತುಣುಕುಗಳನ್ನು ಸ್ನೇಹಿತರು, ಬಂಧುಗಳೊಂದಿಗೆ ಹಂಚಿಕೊಂಡರು.

ಕೂಲಿ ಕಾರ್ಮಿಕ ಮಹಿಳೆಯರು ಕುತೂಹಲದಿಂದ ನಿಲ್ದಾಣಕ್ಕೆ ಬಂದು ದೂರದಿಂದಲೇ ರೈಲು ನೋಡಿ ಸಂತಸಪಟ್ಟರು. ಕೆಲವರು ಗಾಜಿನ ಕಿಟಕಿಯಿಂದ ರೈಲಿನೊಳಗೆ ಇಣುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶಿಕ್ಷಕರೊಂದಿಗೆ ಬಂದಿದ್ದ ಆರ್ಯನ್ ಶಾಲೆಯ ವಿದ್ಯಾರ್ಥಿಗಳು ವಂದೇ ಭಾರತ್ ರೈಲಿನಲ್ಲಿ ಸಂತಸದಿಂದ ಪ್ರಯಾಣಿಸಿದರು. ಭಾರತ 'ಮಾತಾಕೀ ಜೈ' ಎನ್ನುವ ಘೋಷಣೆ ಮೊಳಗಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಸಂಸದ ಡಾ.ಉಮೇಶ ಜಾಧವ, 'ಕಲಬುರಗಿ ಭಾಗದ ಬಹುದಿನಗಳ ಬೇಡಿಕೆಯಾದ ಬೆಂಗಳೂರಿಗೆ ನೇರ ರೈಲು ಸೇವೆ ಮೂರು ದಿನಗಳ ಹಿಂದೆಯೇ ಆರಂಭವಾಗಿತ್ತು. ಇವತ್ತು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರ ಶುರುವಾಗಿದೆ. ಪ್ರಯಾಣಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT