ಶುಕ್ರವಾರ, ಜುಲೈ 1, 2022
22 °C
ಕರ್ನಲ್ ಹುದ್ದೆ ಪಡೆದ 11 ಕುಲಪತಿಗಳ ಪೈಕಿ ಹಿರಿಯರಾದ ಡಾ. ನಿರಂಜನ ನಿಷ್ಠಿ

ಎನ್‌ಸಿಸಿಯ ಕರ್ನಲ್ ಗೌರವ ಪಡೆದ ಡಾ.ನಿಷ್ಠಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಿ. ನಿಷ್ಠಿ ಅವರಿಗೆ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂದೀಪ ಜಗತಾಪ್ ಮತ್ತು ನಿವೃತ್ತ ಕರ್ನಲ್ ಸುಶೀಲ್ ಕುಮಾರ್ ತಿವಾರಿ ಶನಿವಾರ ಗೌರವ ಕರ್ನಲ್ ಪ್ರಶಸ್ತಿ ಪ್ರದಾನ ಮಾಡಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅವರು ಡಾ.ನಿಷ್ಠಿ ಅವರಿಗೆ ಲಾಠಿ ಹಸ್ತಾಂತರಿಸಿದರು.

ಆಯಾ ಎನ್‌ಸಿಸಿ ಬೆಟಾಲಿಯನ್‌ಗಳಲ್ಲಿ ಕರ್ನಲ್ ಗೌರವ ಪಡೆದ ದೇಶದ ಆಯ್ದ ಹನ್ನೊಂದು ಕುಲಪತಿಗಳಲ್ಲಿ ಡಾ. ನಿಷ್ಠಿ ಕೂಡ ಒಬ್ಬರು. ಕುಲಪತಿಗಳು ತಮ್ಮ ತಮ್ಮ ವಿಶ್ವವಿದ್ಯಾಲಯಗಳಲ್ಲಿ ಎನ್‌ಸಿಸಿ ಘಟಕಗಳ ಕರ್ನಲ್ ಕಮಾಂಡೆಂಟ್ ಆಗಿರುತ್ತಾರೆ. ಈ ವರ್ಷ ಗೌರವಕ್ಕೆ ಆಯ್ಕೆಯಾದ ಎಲ್ಲಾ ಹನ್ನೊಂದು ಕುಲಪತಿಗಳಲ್ಲಿ ಡಾ.ನಿರಂಜನ ನಿಷ್ಠಿ ಅವರು ಹಿರಿಯ ಕುಲಪತಿಯಾಗಿದ್ದಾರೆ.

ಕರ್ನಲ್ ಸುಶೀಲ್ ಕುಮಾರ್ ತಿವಾರಿ ಅವರು 32 ಬೆಟಾಲಿಯನ್‌ನ ಕರ್ನಾಟಕ ಕಮಾಂಡಿಂಗ್ ಆಫೀಸರ್ ಆಗಿದ್ದಾಗ ಗೌರವಾರ್ಥವಾಗಿ ಡಾ.ನಿಷ್ಠಿ ಅವರ ಹೆಸರನ್ನು ಸೇರಿಸುವ ಪ್ರಸ್ತಾಪವನ್ನು ಪ್ರಾರಂಭಿಸಿದ್ದರು.

ಈ ಕುರಿತು ಮಾತನಾಡಿದ ತಿವಾರಿ, ಡಾ. ನಿಷ್ಠಿ ಅವರಿಗೆ ಕೆಡೆಟ್‌ಗಳು ಮತ್ತು ಅಧಿಕಾರಿಗಳು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಮತ್ತು ವಿಶ್ವವಿದ್ಯಾಲಯದಲ್ಲಿ ಎನ್‌ಸಿಸಿಯ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ ಎಂದರು.

ರಷ್ಯಾ–ಉಕ್ರೇನ್ ಸಂಘರ್ಷವನ್ನು ಉಲ್ಲೇಖಿಸಿದ ಕರ್ನಲ್ ತಿವಾರಿ, ‘ಯುದ್ಧವು ಒಬ್ಬರನ್ನೊಬ್ಬರು ತಿಳಿಯದೆ, ಪರಸ್ಪರ ದ್ವೇಷಿಸದ ಯುವಕರು, ಒಬ್ಬರಿಗೊಬ್ಬರು ತಿಳಿದಿರುವ ಹಿರಿಯರ ಆದೇಶದಂತೆ ಪರಸ್ಪರ ದ್ವೇಷಿಸುವ ಸ್ಥಳವಾಗಿದೆ. ಆದರೆ ಸೇನೆಯಲ್ಲಿರುವ ಸಿಬ್ಬಂದಿಗೆ ರಾಷ್ಟ್ರದ ಸೇವೆ ಮಾಡಲು ಮತ್ತು ಶತ್ರುಗಳನ್ನು ಸೋಲಿಸಲು ಸಿದ್ಧವಾಗಿರುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಸೈನಿಕನ ಜೀವನದ ಪ್ರತಿ ಕ್ಷಣವೂ ದೇಶಕ್ಕೆ ಸಮರ್ಪಿತವಾಗಿದೆ ಎಂದು ಹೇಳಿದರು.

ಡಾ. ನಿರಂಜನ ನಿಷ್ಠಿ ಮಾತನಾಡಿ, ’ಈ ಗೌರವ ನನಗಷ್ಟೇ ಸಲ್ಲುತ್ತದೆ ಎಂದು ಅಂದುಕೊಳ್ಳುವುದಿಲ್ಲ. ಬದಲಾಗಿ ಇಡೀ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ನನ್ನ ಚಿಕ್ಕಂದಿನ ದಿನಗಳಲ್ಲಿ ವೈದ್ಯನಾಗುವ ಕನಸನ್ನು ಹೊಂದಿದ್ದೆ, ಅದನ್ನು ನಾನು ಕಠಿಣ ಪರಿಶ್ರಮದಿಂದ ಸಾಧಿಸಿದೆ ಮತ್ತು ಸೇವಾ ಸಿಬ್ಬಂದಿಯ ಸಮವಸ್ತ್ರವನ್ನು ಧರಿಸುವುದು ನನ್ನ ಮತ್ತೊಂದು ಕನಸಾಗಿತ್ತು. ಈ ಕನಸು ಇಂದು ಎನ್‌ಸಿಸಿಯ ಕರ್ನಲ್ ಅವರ ಪ್ರಶಸ್ತಿಯೊಂದಿಗೆ ನನಸಾಗಿದೆ’ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಿಣಿ ಎಸ್‌. ಅಪ್ಪ, ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ಡಾ.ನಿಷ್ಠಿ ಅವರ ಪತ್ನಿ ನಂದಿನಿ ನಿಷ್ಠಿ, ಇಬ್ಬರು ಪುತ್ರರಾದ ಡಾ.ನಿಧೀಶ್ ನಿಷ್ಠಿ, ಡಾ.ಶಿವಲಿಂಗ ನಿಷ್ಠಿ, ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ವಿಶ್ವವಿದ್ಯಾಲಯದ ಡೀನ್ ಡಾ ಲಕ್ಷ್ಮಿ ಪಾಟೀಲ ಮಾಕಾ ಹಾಜರಿದ್ದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಸ್ವಾಗತಿಸಿ, ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು