‘ಶುಲ್ಕ ಪಾವತಿಸಿಲ್ಲ ಎಂದು ಶಾಲೆಯಿಂದ ಹೊರಹಾಕುವಂತಿಲ್ಲ’

ಗುರುವಾರ , ಜೂಲೈ 18, 2019
28 °C
ಪ್ರವೇಶ ನೀಡದಿದ್ದರೆ ಶಾಲೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಆಯೋಗ ಸೂಚನೆ

‘ಶುಲ್ಕ ಪಾವತಿಸಿಲ್ಲ ಎಂದು ಶಾಲೆಯಿಂದ ಹೊರಹಾಕುವಂತಿಲ್ಲ’

Published:
Updated:
Prajavani

ಕಲಬುರ್ಗಿ: ಶುಲ್ಕ ಪಾವತಿಸಿಲ್ಲ ಎಂಬ ಕಾರಣದಿಂದ ಶಾಲೆಯಿಂದ ಯಾವುದೇ ಮಗುವನ್ನು ಹೊರಹಾಕುವಂತಿಲ್ಲ ಎಂದು ಡಾ.ಆರ್.ಜಿ.ಆನಂದ ಮತ್ತು ಪ್ರಜ್ಞಾ ಪರಾಂಡೆ ನೇತೃತ್ವದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದ್ವಿಸದಸ್ಯ ಪೀಠ ನಿರ್ದೇಶನ ನೀಡಿದೆ.

ಶುಕ್ರವಾರ ಕಲಬುರ್ಗಿಯಲ್ಲಿ ವಿಭಾಗ ಮಟ್ಟದ ಮಕ್ಕಳ ಹಕ್ಕುಗಳ ಉಲ್ಲಂಘನೆ ಕುರಿತಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ದ್ವಿಸದಸ್ಯ ಪೀಠವು ಸಾರ್ವಜನಿಕ ಅಹವಾಲು ಮತ್ತು ವಿಚಾರಣೆ ನಡೆಸಿತು.

ಬಳ್ಳಾರಿಯ ವಿರುಪಣ್ಣಗೌಡ ಮೂರು ವರ್ಷದ ಶಾಲಾ ಶುಲ್ಕ ಪಾವತಿಸಿಲ್ಲ ಅಂತ ಮಗನಿಗೆ ಶಾಲೆಯಲ್ಲಿ ಪ್ರವೇಶ ನೀಡುತ್ತಿಲ್ಲ ಮತ್ತು ವರ್ಗಾವಣೆ ಪ್ರಮಾಣ ಪತ್ರವನ್ನೂ ನೀಡುತ್ತಿಲ್ಲ ಎಂಬ ದೂರನ್ನು ಹೊತ್ತು ತಂದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೀಠ, ಆರ್.ಟಿ.ಇ ಸೆಕ್ಷನ್ (ಎ) ಪ್ರಕಾರ ಯಾವುದೇ ಮಗುವನ್ನು ಶುಲ್ಕ ಪಾವತಿಸಿಲ್ಲ ಎಂಬ ಕಾರಣದಿಂದ ಹೊರಹಾಕುವಂತಿಲ್ಲ ಎಂದು ನಿರ್ದೇಶನ ನೀಡಿತು. ಮಗು ಬಯಸಿದಂತೆ ಅದೇ ಶಾಲೆಯಲ್ಲಿ ಒಂದು ವಾರದಲ್ಲಿ ಮರು ಪ್ರವೇಶಾತಿ ಒದಗಿಸಬೇಕು. ಇದಕ್ಕೆ ಒಪ್ಪದಿದ್ದಲ್ಲಿ ಸದರಿ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿತು.

ಬಳ್ಳಾರಿ ಜಿಲ್ಲೆಯ ಮೈಲೂರಿನ ಶಾಲೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ ಎಂದು ದೂರುದಾರ ವೆಂಕಟೇಶ್ ಮನವಿಗೆ ಸ್ಪಂದಿಸಿದ ಆಯೋಗವು ಒಂದು ದಿನದಲ್ಲಿ ಕುಡಿಯುವ ನೀರು ಮತ್ತು 3 ದಿನದಲ್ಲಿ ಶೌಚಾಲಯ ವ್ಯವಸ್ಥೆ ಮಾಡುವಂತೆ ಬಳ್ಳಾರಿ ಡಿಡಿಪಿಐ ಅವರಿಗೆ ನಿರ್ದೇಶನ ನೀಡಿತು. ಇತರೆ ಶಾಲೆಗಳಲ್ಲಿಯೂ ಕುಡಿಯುವ ನೀರು ಮತ್ತು ಶೌಚಾಲಯ ಸಮಸ್ಯೆಗಳಿಗೆ ಇದೇ ನಿರ್ದೇಶನ ಪಾಲಿಸಬೇಕು ಎಂದು ಸೂಚಿಸಿತು.

ರಾಯಚೂರು ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಕಾರಣ ಮಕ್ಕಳಿಗೆ ಶಿಕ್ಷಣ ಕುಂಠಿತಗೊಂಡಿದೆ ಎಂಬ ದೂರುದಾರರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಪೀಠವು 2 ವಾರದಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಬೇಕು ಎಂದು ರಾಯಚೂರು ಡಿಡಿಪಿಐ ಬಿ.ಕೆ.ನಂದನೂರ ಅವರಿಗೆ ಆದೇಶ ನೀಡಿತು.

ಬೀದರ್ ಜಿಲ್ಲೆಯಲ್ಲಿ ಶಾಲೆಗಳ ಮೂಲಸೌಲಭ್ಯಕ್ಕೆ ಸಂಬಂಧಿಸಿದಂತೆ 68 ದೂರುಗಳ ಬಂದಿದ್ದವು. ಈ ಪೈಕಿ ಬಸ್ಸುಗಳ ಕಾಯಾಚರಣೆ ಸಮಯ ಬದಲಾವಣೆ, ಶೌಚಾಲಯ, ಕುಡಿಯುವ ನೀರು, ಸ್ಯಾನಿಟರಿ ಪ್ಯಾಡ್, ಶಾಲಾ ಸ್ವಚ್ಛತೆ ಸೇರಿದಂತೆ ಬಹುತೇಕ ಸೌಲಭ್ಯಗಳು ಕಲ್ಪಿಸಲಾಗಿದೆ. ಶೌಚಾಲಯ, ಶಾಲೆಗಳಿಗೆ ರಸ್ತೆ ಮುಂತಾದವುಗಳ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯು ಕ್ರಿಯಾ ಯೋಜನೆ ರೂಪಿಸಿರುವುದಕ್ಕೆ ಆಯೋಗವು ಪ್ರಶಂಸೆ ವ್ಯಕ್ತಪಡಿಸಿತು. ಶೌಚಾಲಯ, ಕುಡಿಯುವ ನೀರು, ವಿದ್ಯುತ್, ರಸ್ತೆ ಮುಂತಾದ ಸೌಲಭ್ಯ ಒದಗಿಸಲು ಕೋರಿ ಯಾದಗಿರಿ ಜಿಲ್ಲೆಯ ಶಾಲಾ ಮಕ್ಕಳ ದೂರನ್ನು ಮಕ್ಕಳ ಸಹಾಯವಾಣಿ ಡಾನ್ ಬಾಸ್ಕೊ ಸಂಸ್ಥೆಯ ಪ್ರತಿನಿಧಿಗಳು ಅತಿ ಹೆಚ್ಚು 602 ಸಮಸ್ಯೆಗಳನ್ನು ಆಯೋಗದ ಗಮನಕ್ಕೆ ತಂದರು.

ಮೂರು ದಿನದೊಳಗೆ ಪ್ರಮಾಣಪತ್ರ: ಕಲಬುರ್ಗಿ ಜಿಲ್ಲೆಯ ವಾಸುದೇವ ಎಂಬ ವಿದ್ಯಾರ್ಥಿ ತನಗೆ 371 (ಜೆ) ಅರ್ಹತಾ ಪ್ರಮಾಣ ಪತ್ರ ಪಡೆಯಲು ಹತ್ತು ವರ್ಷದ ವ್ಯಾಸಂಗ ಪ್ರಮಾಣ ಕೇಳಲಾಗುತ್ತಿದೆ. 2 ಮತ್ತು 3ನೇ ತರಗತಿಯ ವ್ಯಾಸಂಗ ಪತ್ರ ಇಲ್ಲ. ದಯವಿಟ್ಟು ನನ್ನ ಸಮಸ್ಯೆಯನ್ನು ಬಗೆಹರಿಸಿ ಎಂದು ಪೀಠಕ್ಕೆ ಮನವಿ ಮಾಡಿಕೊಂಡರು. ಪೀಠವು ಈ ಕುರಿತು ಡಿಡಿಪಿಐ ಶಾಂತಗೌಡ ಅವರಿಗೆ ವಿವರಣೆ ಕೇಳಿತು.

ಸೇತು ಬಂಧು ಬ್ರಿಡ್ಜ್ ಕೋರ್ಡ್‌ನಡಿ ವಿದ್ಯಾರ್ಥಿಗೆ ಸೂಕ್ತ ತರಬೇತಿ ನೀಡಿ ಆ ಎರಡು ವರ್ಷಗಳ ವ್ಯಾಸಂಗ ಪ್ರಮಾಣ ಪತ್ರವನ್ನು ಮೂರುದಿನದೊಳಗೆ ನೀಡಲಾಗುವುದು ಎಂದರು.

ಕಲಬುರ್ಗಿಯ ಹೀರಾಪುರ ಬಳಿಯ ಮದರಸಾದಲ್ಲಿ 28 ಮಕ್ಕಳು ಕೇವಲ ಧಾರ್ಮಿಕ ಶಿಕ್ಷಣ ಬೋಧನೆಗೆ ಸೀಮಿತಗೊಂಡಿದ್ದು, ಸಾಮಾನ್ಯ ಶಿಕ್ಷಣದಿಂದ ವಂಚಿರಾಗಿದ್ದಾರೆ ಎಂದು ಕಲಬುರ್ಗಿ ಮಕ್ಕಳ ಕಲ್ಯಾಣ ಸಮಿತಿ ಪೀಠಕ್ಕೆ ದೂರು ನೀಡಿತು. ಈಗಾಗಲೇ ಈ ವಿಷಯ ನನ್ನ ಗಮನಕ್ಕೆ ಬಂದಿರುವುದರಿಂದ 14 ಮಕ್ಕಳನ್ನು ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸೇರಿಸಿದ್ದು, ಉಳಿದವರನ್ನು ಶೀಘ್ರವೇ ಸೇರಿಸಲಾಗುವುದು ಎಂದು ಡಿಡಿಪಿಐ ಹೇಳಿದರು.

ಸಲ್ಲಿಕೆಯಾದ 867 ದೂರುಗಳ ಪೈಕಿ 150 ದೂರುಗಳ ವಿಚಾರಣೆ ನಡೆಯಿತು. ಉಳಿದ ದೂರುಗಳನ್ನು ದೆಹಲಿಗೆ ತರಿಸಿಕೊಂಡು ಆದೇಶ ನೀಡಲಾಗುವುದು ಎಂದು ಆಯೋಗ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !