ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಸಾರಿಗೆ: 67 ಸಿಬ್ಬಂದಿ ವಜಾ

13ನೇ ದಿನ ಪೂರೈಸಿದ ಸಾರಿಗೆ ಮುಷ್ಕರ; ಕಠಿಣ ಕ್ರಮಕ್ಕೆ ಬಾಗದ ಸಿಬ್ಬಂದಿ
Last Updated 20 ಏಪ್ರಿಲ್ 2021, 2:46 IST
ಅಕ್ಷರ ಗಾತ್ರ

ಕಲಬುರ್ಗಿ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಹಮ್ಮಿಕೊಂಡಿರುವ ಅನಿರ್ದಿಷ್ಟ ಅವಧಿಯ ಮುಷ್ಕರವು ಸೋಮವಾರ 13ನೇ ದಿನ ಪೂರೈಸಿದ್ದು, ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗಲು ನಿರಾಕರಿಸಿದ್ದಾರೆ. ಇತ್ತ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಠಿಣ ಕ್ರಮಗಳನ್ನು ಮುಂದುವರೆಸಿದ್ದು, ಸಂಸ್ಥೆಯ ವ್ಯಾಪ್ತಿಯಲ್ಲಿ 67 ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಿದೆ. 39 ಜನರನ್ನು ಅಮಾನತುಗೊಳಿಸಿದೆ.

ಕಲಬುರ್ಗಿ ವಿಭಾಗ–2ರಲ್ಲಿ 18, ಕಲಬುರ್ಗಿ ವಿಭಾಗ–1ರಲ್ಲಿ 10, ಬೀದರ್‌ ವಿಭಾಗದಲ್ಲಿ 10, ರಾಯಚೂರು 7, ಯಾದಗಿರಿ ಹಾಗೂ ಕೊಪ್ಪಳ ವಿಭಾಗದಲ್ಲಿ ತಲಾ 6, ವಿಜಯಪುರ, ವಿಜಯನಗರ (ಹೊಸಪೇಟೆ) ವಿಭಾಗದಲ್ಲಿ ತಲಾ 4 ಹಾಗೂ ಬಳ್ಳಾರಿ ವಿಭಾಗದಲ್ಲಿ ಒಬ್ಬರನ್ನು ವಜಾ ಮಾಡಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ.

ಅಲ್ಲದೇ, 20 ಜನ ಚಾಲಕ ಕಂ ನಿರ್ವಾಹಕರು, 14 ಜನ ಚಾಲಕರು ಹಾಗೂ 5 ಜನ ನಿರ್ವಾಹಕರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಕರ್ತವ್ಯನಿರತ ಸಿಬ್ಬಂದಿಯ ಮೊಬೈಲ್‌ಗೆ ಅವಹೇಳನಕಾರಿ ಸಂದೇಶ ಕಳುಹಿಸಿದ ಆರೋಪದ ಮೇರೆಗೆ ಮಸ್ಕಿ ಡಿಪೊದ ನಾಗಪ್ಪ ಹಾಗೂ ಹೈದರಾಬಾದ್–ಜೇವರ್ಗಿ ಬಸ್ ತಡೆದ ಬಸವರಾಜ ಅಂಗಡಿ ಎಂಬುವವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಹನ ಜಖಂ, ಕರ್ತವ್ಯಕ್ಕೆ ಅಡ್ಡಿ, ಎಸ್ಮಾ ಕಾಯ್ದೆ ಉಲ್ಲಂಘನೆ ಹಾಗೂ ವಾಟ್ಸ್‌ಆ್ಯಪ್ ಮೂಲಕ ಪ್ರಚೋದನೆ ನೀಡಿದ ಆರೋಪದ ಮೇರೆಗೆ ವಿವಿಧ ಠಾಣೆಗಳಲ್ಲಿ 55 ಸಿಬ್ಬಂದಿ ವಿರುದ್ಧ 28 ಪ್ರಕರಣಗಳು ದಾಖಲಾಗಿದ್ದು, ಏಳು ಜನರನ್ನು ಬಂಧಿಸಲಾಗಿದೆ.

ಸೋಮವಾರ ಸಂಸ್ಥೆಯ ವ್ಯಾಪ್ತಿಯಲ್ಲಿ 4 ಸಾವಿರ ಬಸ್‌ಗಳ ಪೈಕಿ 979 ಬಸ್‌ಗಳು ಕಾರ್ಯಾಚರಣೆ ನಡೆಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT