ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ದಮನಕ್ಕೆ ಹುನ್ನಾರ: ಎಸ್.ಎಚ್.ಜಗನ್ನಾಥ

ವಾಡಿ: ನೇತಾಜಿ ಜಯಂತಿ ಕಾರ್ಯಕ್ರಮದಲ್ಲಿ ಹೇಳಿಕೆ
Last Updated 1 ಫೆಬ್ರುವರಿ 2021, 5:40 IST
ಅಕ್ಷರ ಗಾತ್ರ

ವಾಡಿ: ‘ದೇಶದ ರೈತರು ತಮ್ಮ ಪ್ರಾಣದ ಹಂಗು ತೊರೆದು ದಿಟ್ಟ ಹೋರಾಟ ನಡೆಸುತ್ತಿದ್ದರೆ, ಅತ್ತ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಸಿ ಬಳಿಯಲು ನಾನಾ ಕುತಂತ್ರ ಹೆಣೆಯುತ್ತಿದೆ. ದೇಶದ ಕೆಲವು ಮಾಧ್ಯಮಗಳು ಇದರಲ್ಲಿ ಶಾಮೀಲಾಗಿವೆ’ ಎಂದು ಎಐಡಿವೈಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್.ಎಚ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಎಐಡಿಎಸ್ಒ, ರೈತ ಕೃಷಿ ಕಾರ್ಮಿಕರ ಸಂಘಟನೆ ಮತ್ತು ಎಐಡಿವೈಒ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿರುವ ಅಸಮಾನತೆ, ಬಡತನ, ನಿರುದ್ಯೋಗ, ಜಾತೀಯತೆಯಂತಹ ಸಮಸ್ಯೆಗಳನ್ನು ಬೇರು ಮಟ್ಟದಿಂದ ಕೀಳಲು ರಷ್ಯಾದ ಬಂಡವಾಳಶಾಹಿ ವಿರೋಧಿ ಸಮಾಜವಾದಿ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಆಶಯವನ್ನು ನೇತಾಜಿ ಹೊಂದಿದ್ದರು’ ಎಂದರು.

‘ಇಂದು ದೇಶ ಮತ್ತೆ ಸಂಕಷ್ಟದಲ್ಲಿದೆ. ಬಂಡವಾಳಶಾಹಿಗಳು ದೇಶದ ಜನರ ಶೋಷಣೆಗೆ ನಿಂತಿದ್ದಾರೆ. ರಾಜ್ಯಯಂತ್ರ ಅಂಥವರ ಸೇವೆಗೆ ಟೊಂಕಕಟ್ಟಿ ನಿಂತಿದೆ. ಬಂಡವಾಳಶಾಹಿಗಳ ಆಸ್ತಿ ಅತಿ ವೇಗವಾಗಿ ಬೆಳೆಯುತ್ತಿದ್ದರೆ ಬಡವರ ಬದುಕು ಬೀದಿಗೆ ಬೀಳುತ್ತಿದೆ. ನಿರುದ್ಯೋಗ ತಾಂಡಾವಡುತ್ತಿದೆ. ಇವುಗಳ ಮುಕ್ತಿಗೆ ನೇತಾಜಿ ಅವರ ಕನಸಿನಂತೆ ಭಾರತದಲ್ಲಿ ಸಮಾಜವಾದಿ ವ್ಯವಸ್ಥೆ ಸ್ಥಾಪನೆಯಿಂದ ಮಾತ್ರ ಸಾಧ್ಯ’ ಎಂದು ತಿಳಿಸಿದರು.

ಮಕ್ಕಳ ತಜ್ಞ ವೀರೇಶ ಶಿವಾನಂದ ಇಂಗಳೇಶ್ವರ ಮಾತನಾಡಿ,‘ಜಗತ್ತಿನಲ್ಲಿ ಮಾನವೀಯ ಧರ್ಮಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ಬಡವರ ಸಂಕಷ್ಟದ ಬಗ್ಗೆ ಮನಸ್ಸು ಮಿಡಿಯದಿದ್ದರೆ ಅದು ವ್ಯರ್ಥ. ಯುವಶಕ್ತಿ ಜಾಗೃತಗೊಂಡು ಹೋರಾಟಕ್ಕೆ ಧುಮುಕಬೇಕು ಎನ್ನುವ ಸಂದೇಶ ನೇತಾಜಿ ಜೀವನದಿಂದ ನಾವು ಕಲಿಯುವ ದೊಡ್ಡ ಪಾಠ’ ಎಂದರು.

ಎಐಡಿವೈಒ ಸ್ಥಳೀಯ ಸಮಿತಿ ಕಾರ್ಯದರ್ಶಿ ಶರಣು ವಿ.ಕೆ, ಆರ್‌ಕೆಎಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಗುಂಡಣ್ಣಾ ಎಂ.ಕೆ. ಮಾತನಾಡಿದರು. ಎಐಡಿಎಸ್ಓ ಸ್ಥಳೀಯ ಸಮಿತಿ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಯುಸಿಐ ಪಕ್ಷದ ಸ್ಥಳೀಯ ಕಾರ್ಯದರ್ಶಿಆರ್.ಕೆ.ವೀರಭದ್ರಪ್ಪ ಸೂಕ್ತಿ ಪ್ರದರ್ಶನ ಉದ್ಘಾಟಿಸಿದರು. ಸಭೆಯಲ್ಲಿ ಮುಖಂಡರಾದ ವಿ.ಕೆ.ಕೇದಿಲಾಯಿ, ಜಯದೇವ ಹಿರೇಮಠ, ಭೀಮರಾವ ದೊರಿ, ಶಕುಂತಲಾ ಪೊದ್ದಾರ, ಸುಮಿತ್ರಾ ದೊರಿ, ಪದ್ಮರೇಖಾ ಆರ್ ಕೆ, ಶರಣು ಹೆರೂರು, ಮಲ್ಲಣ್ಣ ದಂಡಬಾ, ಯೇಶಪ್ಪಾ ಕೇದಾರ, ಮಲ್ಲಿನಾಥ ಹುಂಡೆಕಲ, ಗೌತಮ ಪರ್ತೂರಕರ, ವಿಠ್ಠಲ ರಾಠೋಡ, ಮಲ್ಲಿಕಾರ್ಜುನ ಗಂಧಿ, ಅರುಣ ಹಿರೇಬಾನುರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT