ಶನಿವಾರ, ಆಗಸ್ಟ್ 20, 2022
21 °C
‘ಅಮರಗಣಂಗಳ ಕಾಯಕ ಚಿತ್ರ ದರ್ಶನ ಗ್ರಂಥ ಸಂಪುಟ–1’ ಲೋಕಾರ್ಪಣೆ; ಬಸವರಾಜ ಪಾಟೀಲ ಸೇಡಂ ಅಭಿಮತ

ಕಾಯಕಪ್ರಜ್ಞೆ ಮೂಡಿದರೆ ಭವಿಷ್ಯ ಉಜ್ವಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರತಿಯೊಬ್ಬರಲ್ಲೂ ಕಾಯಕ ಪ್ರಜ್ಞೆ ಮೂಡಿದರೆ ನವಭಾರತದ ಭವಿಷ್ಯ ಉಜ್ವಲವಾಗಲಿದೆ. ಬಸವಾದಿ ಶರಣರು ವಚನಗಳ ಮೂಲಕ ನೀಡಿ ಹೋದ ಪ್ರಜ್ಞೆ ಮಹತ್ತರವಾದುದು’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ವಚನೋತ್ಸವ ಸಮಿತಿಗಳ ಒಕ್ಕೂಟದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಅಮರಗಣಂಗಳ ಕಾಯಕ ಚಿತ್ರ ದರ್ಶನ ಗ್ರಂಥ ಸಂಪುಟ–1’ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘12ನೇ ಶತಮಾನದ 770 ಅಮರಗಣಂಗಳ ಜೀವನ ದರ್ಶನ ಮಾಡಿಸುವಂತ ಮಹತ್ವದ ಗ್ರಂಥ ಇದಾಗಿದೆ. ಇದನ್ನು ಪ್ರತಿಯೊಬ್ಬರೂ ಖರೀದಿಸಿ ಓದಬೇಕು.  ಹಣವುಳ್ಳವರು ಈ ಕೃತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಗ್ರಂಥಾಲಯಗಳಿಗೆ ಕೊಡಬೇಕು. ಬಸವಾದಿ ಶರಣ ಕಾಯಕ ಪ್ರಜ್ಞೆಗೆ ಕನ್ನಡಿಯಂತಿರುವ ಇಂಥ ಗ್ರಂಥ ಪ್ರತಿಯೊಬ್ಬರ ಮನೆ ತಲುಪಬೇಕು’ ಎಂದು ಅವರು ಹೇಳಿದರು.

‘ಕೃತಿಯ ಮೊದಲ ಸಂಪುಟದಲ್ಲಿ 400 ಶರಣರ ಜೀವನ ದರ್ಶನ ಪರಿಚಯಿಸಲಾಗಿದೆ. ಮುಂದಿನ ವರ್ಷದ ಹೊತ್ತಿಗೆ ಉಳಿದ ಕಾಯಕ ಶರಣರ ಮಾಹಿತಿ ಒಳಗೊಂಡ 2ನೇ ಸಂಪುಟವನ್ನು ಪ್ರಕಟಿಸಿ ಬಿಡುಗಡೆ ಮಾಡಲಾಗುವುದು’ ಎಂದರು.

ಇದಕ್ಕೂ ಮುನ್ನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಅಮರಗಣಂಗಳ ಕಾಯಕ ಚಿತ್ರದರ್ಶನ ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಿಳಾ ಪದಿವಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ಸುಜಾತಾ ಪಾಟೀಲ ಗ್ರಂಥ ಪರಿಚಯಿಸಿದರು. ಸೇಡಂನ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. 

ಗ್ರಂಥ ಪ್ರಕಟಣೆ ಸಮಿತಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಎಸ್.ಪಾಟೀಲ, ಗ್ರಂಥ ಸಂಪಾದಕ ಹಾಗೂ ಪ್ರಕಾಶಕ ಶಾಮಲಿಂಗ ಜವಳಗಿ, ಚಿತ್ರಕಲಾವಿದ ಚಂದ್ರಶೇಖರ ಸೋಮಶೆಟ್ಟಿ, ಗ್ರಂಥ ಪ್ರಕಟಣೆ ಸಮಿತಿ ಅಧ್ಯಕ್ಷ ಅಪ್ಪಾರಾವ್‌ ಜ್ಯಾಂತೆ ವೇದಿಕೆ ಮೇಲಿದ್ದರು.

ಶರಣಬಸವೇಶ್ವರ ಕಾಲೇಜಿನ ಪ್ರಾಧ್ಯಾಪಕ ಸುರೇಶ ನಂದಗಾಂವ ಸ್ವಾಗತಿಸಿದರು. ವೀರೇಶ ಹೂಗಾರ ವಂದಿಸಿದರು. ವಚನೋತ್ಸವ ಸಮಿತಿಯ ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು. ವಕೀಲ ವಿನೋದ ಜನೆವರಿ, ಶಿವಾನಂದ ಮಠಪತಿ, ಚನ್ನಬಸಪ್ಪ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು