ಸೋಮವಾರ, ಡಿಸೆಂಬರ್ 9, 2019
18 °C
ಗುಲಬರ್ಗಾ ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದಿಂದ ಮನವಿ ಸಲ್ಲಿಕೆ

ನೂತನ ಶಿಕ್ಷಣ ನೀತಿ ಪ್ರಸ್ತಾವ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಸರ್ಕಾರ ತರಲು ಹೊರಟಿರುವ ರಾಷ್ಟ್ರೀಯ ಶಿಕ್ಷಣ ನೀತಿ–2019ರ ಕರಡು ಪ್ರಸ್ತಾವಗಳಲ್ಲಿ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಇನ್ನಷ್ಟು ಒಯ್ಯುವ ಹುನ್ನಾರ ಅಡಗಿದೆ. ಹೀಗಾಗಿ ಪ್ರಸ್ತಾವಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ಸದಸ್ಯರು ವಿ.ವಿ. ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ವರ್ಷದಿಂದ ವರ್ಷಕ್ಕೆ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಕಡಿಮೆ ಹಣವನ್ನು ಮೀಸಲಾಗಿಡುತ್ತಿದೆ. ಈಗಲೂ ಒಟ್ಟು ನಿವ್ವಳ ಉತ್ಪನ್ನ (ಜಿಡಿಪಿ)ದ ಶೇ 2.7ರಷ್ಟು ಮಾತ್ರ ಹಣವನ್ನು ಶಿಕ್ಷಣಕ್ಕೆ ನೀಡಲಾಗುತ್ತದೆ. ವಿಶ್ವವಿದ್ಯಾಲಯದ ಮಹತ್ವವನ್ನು ಕಡಿಮೆ ಮಾಡುವ ಉದ್ದೇಶದಿಂದ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ನೇಮಕ ಮಾಡುತ್ತಿಲ್ಲ. ಶಿಕ್ಷಕೇತರ ನೌಕರರನ್ನು ಅನಾಥ ಶಿಶುಗಳಂತೆ ನಿರ್ಲಕ್ಷ್ಯದಿಂದ ಕಾಣಲಾಗುತ್ತಿದೆ. ಎ ಮತ್ತು ಬಿ ದರ್ಜೆಯ ಸಿಬ್ಬಂದಿ ಯುಜಿಸಿ ವೇತನವನ್ನು ಪಡೆಯುತ್ತಿದ್ದರೆ, ಸಿ ಮತ್ತು ಡಿ ವೃಂದದ ನೌಕರರಿಗೆ ಈ ಸೌಲಭ್ಯವನ್ನು ನಿರಾಕರಿಸಲಾಗಿದೆ. ಕೂಡಲೇ ಈ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂಬ ನಿರ್ದೇಶನವಿದೆ. ಆದಾಗ್ಯೂ, ಈ ನಿಯಮವನ್ನು ಗಾಳಿಗೆ ತೂರಿ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಗುಲಬರ್ಗಾ ವಿ.ವಿ. ಪ್ರಭಾರ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಮೂಲಕ ಕಳಿಸಿಕೊಡಲಾಯಿತು.

ಸಂಘದ ಗೌರವ ಅಧ್ಯಕ್ಷ ಎಂ.ಬಿ.ಸಜ್ಜನ, ಕಾರ್ಯಾಧ್ಯಕ್ಷ ಬಸಣ್ಣ ಪಿ.ಉದನೂರ, ಉಪಾಧ್ಯಕ್ಷರಾದ ಅರ್ಜುನ ಹೀರಾಪುರ, ಶೈಲಜಾ ಅಂಗಡಿ, ಸಿದ್ದಪ್ಪ ಎಂ. ದೊಡ್ಡಮನಿ, ಖಜಾಂಚಿ ರಾಮಚಂದ್ರ ರೇಣುಕೆ, ಜಂಟಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ, ಸಂಜು ಎಸ್‌. ಕೊಟ್ರೆ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)