ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುವ್ಯವಸ್ಥೆಗೆ 10 ಸ್ಕಾರ್ಪಿಯೊ

112 ಡಯಲ್ ಮಾಡಿದ ತಕ್ಷಣ ವಾಹನಕ್ಕೆ ಮಾಹಿತಿ ರವಾನೆ; ಬೆಂಗಳೂರಿನಿಂದಲೇ ನಿರ್ವಹಣೆ
Last Updated 10 ಏಪ್ರಿಲ್ 2021, 16:12 IST
ಅಕ್ಷರ ಗಾತ್ರ

ಕಲಬುರ್ಗಿ: ದೆಹಲಿಯ ನಿರ್ಭಯಾ ಘಟನೆ ಬಳಿಕ ನಗರ ಪ್ರದೇಶದಲ್ಲಿ ಮಹಿಳಾ ಸುರಕ್ಷತೆ ಸೇರಿದಂತೆ ಸಂಭವ ನೀಯ ಅವಘಡಗಳನ್ನು ತಡೆಯಲು ಕಲಬುರ್ಗಿ ಕಮಿಷನರೇಟ್‌ಗೆ ಗೃಹ ಇಲಾಖೆ 10 ಸುಸಜ್ಜಿತ ಸ್ಕಾರ್ಪಿಯೊ ಜೀಪ್‌ಗಳನ್ನು ಮಂಜೂರು ಮಾಡಿದೆ. ಕೆಲವೇ ದಿನಗಳಲ್ಲಿ ಅವು ಸೇವೆಗೆ ಸೇರ್ಪಡೆಗೊಳ್ಳಲಿವೆ.

ಈ ವಾಹನಕ್ಕೆ ಜಿಪಿಎಸ್‌ ವ್ಯವಸ್ಥೆ ಇರಲಿದ್ದು, 112 ಸಂಖ್ಯೆಗೆ ಯಾರಾದರೂ ಕರೆ ಮಾಡಿದರೆ ಅದರ ವಿವರಗಳು ಬೆಂಗಳೂರಿನ ಕಂಟ್ರೋಲ್‌ ರೂಮ್‌ಗೆ ಹೋಗಲಿದೆ. ಅಲ್ಲಿಂದ ಸಮೀಪದ ವಾಹನದಲ್ಲಿರುವ ಕಂಪ್ಯೂಟರ್‌ ಪರದೆಯ ಮೇಲೆ ಮೂಡಲಿವೆ. ನಂತರದ 15 ನಿಮಿಷಗಳ ಒಳಗೆ ಆ ವಾಹನದಲ್ಲಿರುವ ಸಿಬ್ಬಂದಿ ಸ್ಥಳವನ್ನು ತಲುಪಬೇಕು. ಒಂದು ಬದಿಯಿಂದ ಇನ್ನೊಂದು ಬದಿಗೆ 15 ನಿಮಿಷಗಳಲ್ಲಿ ತಲುಪಲು ಸಾಧ್ಯವಿರುವ ಸ್ಥಳಗಳಲ್ಲಿ ಈ ಸ್ಕಾರ್ಪಿಯೊ ನಿಂತಿರುತ್ತದೆ ಎನ್ನುತ್ತಾರೆ ಕಲಬುರ್ಗಿ ಪೊಲೀಸ್ ಕಮಿಷನರ್‌ ಎನ್. ಸತೀಶಕುಮಾರ್.

‘ನಿರ್ಭಯಾದಂತಹ ಘಟನೆ ಮರು ಕಳಿಸದಿರಲು ಕೇಂದ್ರ ಸರ್ಕಾರ ನಿರ್ಭಯಾ ನಿಧಿ ಆರಂಭಿಸಿತ್ತು. ಆ ಹಣದಲ್ಲಿಯೇ ಪೊಲೀಸ್ ವ್ಯವಸ್ಥೆಯ ಬಲವರ್ಧನೆಗೆ ಅನುದಾನ ನೀಡಲಾಗಿದೆ. ಕಲಬುರ್ಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ 10 ವಾಹನ ಮಂಜೂರಾಗಿವೆ. ಸ್ಕಾರ್ಪಿಯೊ ವಾಹನದ ಖರೀದಿ ಮೊತ್ತದ ಜೊತೆಗೆ ಜಿಪಿಎಸ್‌, ಸ್ಕ್ರೀನ್ ಅಳವಡಿಸಲೆಂದೇ ₹ 1 ಲಕ್ಷ ಖರ್ಚಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ವಾಹನದಲ್ಲಿ ಚಾಲಕ, ಎಎಸ್‌ಐ ಅಥವಾ ಪೊಲೀಸ್‌ ಕಾನ್‌ಸ್ಟೆಬಲ್ ಹಂತದ ಇಬ್ಬರು ಸಿಬ್ಬಂದಿ ಇರಲಿದ್ದಾರೆ. ಕಂಟ್ರೋಲ್‌ ರೂಮ್‌ನಿಂದ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಅಲ್ಲಿ ಸಮಸ್ಯೆ ಬಗೆಹರಿಸಲು ಯತ್ನಿಸಬೇಕು. ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳಿದ್ದರೆ ಅದನ್ನು ಪೊಲೀಸ್‌ ಇನ್‌ಸ್ಪೆಕ್ಟರ್‌ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಈ ವಾಹನಗಳಿಗೆ ಚಾಲಕರನ್ನಾಗಿ ಸಿಎಆರ್‌ ಕಾನ್‌ಸ್ಟೆಬಲ್‌ಗಳನ್ನು ಬಳಸಿಕೊಳ್ಳ ಲಾಗುತ್ತದೆ. ಅವರಿಗೆ ಚಾಲನಾ ತರಬೇತಿಯನ್ನೂ ಕೊಡಿಸಲಾಗುತ್ತಿದೆ.

ಕೆಕೆಆರ್‌ಡಿಬಿ ನೆರವು: 10 ಪೈಕಿ 5 ಸ್ಕಾರ್ಪಿಯೊ ವಾಹನಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅನುದಾನದಲ್ಲಿ ಖರೀದಿಸಲಾಗಿದೆ. ಉಳಿದ 5 ವಾಹನಗಳನ್ನು ಪೊಲೀಸ್‌ ಮಹಾನಿರ್ದೇಶಕರು (ಡಿಜಿ–ಐಜಿಪಿ) ಕಲಬುರ್ಗಿ ಜಿಲ್ಲೆಗೆ ಹಂಚಿಕೆ ಮಾಡಿದ್ದಾರೆ. ಇವುಗಳ ನಿರ್ವಹಣೆ ಪೊಲೀಸ್‌ ಕಮಿಷನರ್‌ ಕಚೇರಿ ನೋಡಿಕೊಳ್ಳಬೇಕಿದೆ.

ಇನ್‌ಸ್ಪೆಕ್ಟರ್‌ಗಳಿಗೆ ನೂತನ ಬೊಲೆರೊ

ಕಲಬುರ್ಗಿ ಪೊಲೀಸ್‌ ಕಮಿಷನರೇಟ್ ಅಸ್ತಿತ್ವಕ್ಕೆ ಬಂದ ಬಳಿಕ ನಗರ ವ್ಯಾಪ್ತಿಯ ಠಾಣೆಗಳ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಗೆ ಹಳೆಯ ಟಾಟಾ ಸುಮೊ, ಬೊಲೆರೊ ವಾಹನ ನೀಡಲಾಗಿತ್ತು. ಹಲವು ಬಾರಿ ಅವು ಕೆಟ್ಟು ನಿಲ್ಲುತ್ತಿದ್ದವು.

ಹೀಗಾಗಿ ಹೊಸ ವಾಹನಗಳಿಗೆ ಪೊಲೀಸ್ ಕಮಿಷನರ್ ಗೃಹ ಇಲಾಖೆಗೆ ಸಲ್ಲಿಸಿದ ಪ್ರಸ್ತಾವಕ್ಕೆ ಸ್ಪಂದಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು 10 ನೂತನ ಮಹಿಂದ್ರಾ ಬೊಲೆರೊ ಜೀಪ್‌ ಮಂಜೂರು ಮಾಡಿದ್ದಾರೆ. ವಿವಿಧ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಈ ಜೀಪ್‌ಗಳನ್ನು ಬಳಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT