ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ–ಯಾದಗಿರಿ ಬೈಪಾಸ್‌: ರಾಜ್ಯ ತನ್ನ ಪಾಲಿನ ಹಣ ಒದಗಿಸಲಿ -ನಿತಿನ್ ಗಡ್ಕರಿ

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರಕ್ಕೆ ಸಚಿವ ನಿತಿನ್ ಗಡ್ಕರಿ ಉತ್ತರ
Last Updated 8 ಫೆಬ್ರುವರಿ 2022, 4:29 IST
ಅಕ್ಷರ ಗಾತ್ರ

ಕಲಬುರಗಿ: ‘ಕಲಬುರಗಿ ಬೈಪಾಸ್–ಯಾದಗಿರಿ ಬೈಪಾಸ್ ರಸ್ತೆ ನಿರ್ಮಾಣ ವಿಚಾರ ಕುರಿತಂತೆ ಭೂ ಸ್ವಾಧೀನಕ್ಕೆ ತಗುಲುವ ವೆಚ್ಚದ ಶೇ 50ರಷ್ಟನ್ನು ರಾಜ್ಯ ಸರ್ಕಾರ ಒದಗಿಸಬೇಕು. ಅದಾದ ಮೇಲೆ ಯೋಜನೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬರೆದ ಪತ್ರಕ್ಕೆ ಉತ್ತರಿಸಿರುವ ಗಡ್ಕರಿ, ಕಲಬುರಗಿ ಹಾಗೂ ಯಾದಗಿರಿ ಬೈಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಎರಡು ಬೈಪಾಸ್‌ಗಳು ಗ್ರೀನ್ ಫೀಲ್ಡ್ ಗೆ ಜೋಡಣೆಯಾಗಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ತಗುಲುವ ವೆಚ್ಚದ ಶೇ 50ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಈ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ತನ್ನ ಪಾಲನ್ನು ಒದಗಿಸುವಂತೆ ಕೋರಲಾಗಿದೆ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲು ಹಲವಾರು ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡು ಉದ್ದೇಶಿತ ಗೋಲಗೇರಿಯಿಂದ ತೆಲಂಗಾಣದ ಗಡಿಯವರೆಗಿನ ರಾಜ್ಯ ಹೆದ್ದಾರಿ 16ರ ಉಳಿದ ಭಾಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಚಿವಾಲಯ ಪರಿಶೀಲನೆ ನಡೆಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕಲಬುರಗಿ ಬೈಪಾಸ್ ರಸ್ತೆ 41ರಿಂದ 42 ಕಿ.ಮೀ. ಉದ್ದದ ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದಾರಿಯಾಗಿದೆ. ರಾಜ್ಯ ಹೆದಾರಿ 16ರ ಉಳಿದ ಭಾಗ ಅಂದರೆ ಗೋಲಗೇರಿಯಿಂದ ತೆಲಂಗಾಣದ ಗಡಿಯವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ರಾಜ್ಯದ ಅಥವಾ ಕ್ಷೇತ್ರದಲ್ಲಿನ ಹೆದ್ದಾರಿ ಮೂಲಸೌಕರ್ಯ ಯೋಜನೆಯ ಪ್ರಾಮುಖ್ಯತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಹೊಸ ರಾಷ್ಟ್ರೀಯ ಹೆದ್ದಾರಿಗಳ ಘೋಷಣೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ನೀತಿಗಳ ಕುರಿತು ಸರಕಾರ ಪರಿಗಣನೆ ನಡೆಸುತ್ತಿರುವುದರಿಂದಾಗಿ ಉದ್ದೇಶಿತ ರಸ್ತೆಗಳ ಸಾಮಾಜಿಕ ಮತ್ತು ಆರ್ಥಿಕ ಮಹತ್ವವನ್ನು ವಿಶ್ಲೇಷಿಸಲು ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದಿದ್ದಾರೆ.

‌‘ಸಂಚಾರದ ನಿರ್ಧಾರಿತ ಸ್ಥಳ, ಸರಕು ಸಾಗಾಣಿಕೆಯಲ್ಲಿ ದಕ್ಷತೆಯ ಬಲವರ್ಧನೆ, ಪ್ರದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿ, ಸಂಪರ್ಕ ಕಲ್ಪಿಸುವ ರಸ್ತೆಗಳು, ಅಸ್ತಿತ್ವದಲ್ಲಿರುವ ಹೆದ್ದಾರಿಗಳು, ಪ್ರವಾಸೋದ್ಯಮ ಅಭಿವೃದ್ದಿಗೆ ರಸ್ತೆಗಳ ಪ್ರಾಮುಖ್ಯತೆ, ಪ್ರದೇಶದ ಅಭಿವೃದ್ದಿಗೆ ರಸ್ತೆಗಳ ಪ್ರಾಮುಖ್ಯತೆ ಹೀಗೆ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಇವುಗಳ ಆಧಾರದ ಮೇಲೆ ಆದ್ಯತೆಗೆ ಅನುಗುಣವಾಗಿ ಉದ್ದೇಶಿತ ಯೋಜನೆಗಳ ಮೌಲ್ಯಮಾಪನ ಮಾಡಲಾಗುವುದು ಹಾಗೂ ಅದರಂತೆ ಹೊಸ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯಕ್ರಮಗಳನ್ನು ಸಚಿವಾಲಯ ಕೈಗೊಳ್ಳಲಿದೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT