ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ವಂಚಿತ ಶ್ರೀಚಂದ ಗ್ರಾಮ

ಶೈಕ್ಷಣಿಕ ದಾಖಲೆಗೆ ಆಳಂದಕ್ಕೆ ಅಲೆದಾಟ; ನೀರು, ನೈರ್ಮಲ್ಯ ಕೊರತೆ
Last Updated 26 ಫೆಬ್ರುವರಿ 2020, 12:41 IST
ಅಕ್ಷರ ಗಾತ್ರ

ಕಮಲಾಪುರ:ತಾಲ್ಲೂಕಿನ ಶ್ರೀಚಂದ ಗ್ರಾಮ ಅನೇಕ ಸಮಸ್ಯೆಗಳಿಂದ ನಲುಗಿ ಹೋಗಿದೆ.ಐದು ಗ್ರಾಮಗಳನ್ನು ಒಳಗೊಂಡ ಗ್ರಾಮ ಪಂಚಾಯಿತಿಯ ಕೇಂದ್ರ ಕಚೇರಿ ಹೊಂದಿರುವ ಈ ಗ್ರಾಮದಲ್ಲಿ ನಾಲ್ವರು ಗ್ರಾ.ಪಂ ಸದಸ್ಯರು ಇದ್ದಾರೆ.

ಜನಸಂಖ್ಯೆ ಸುಮಾರು 3 ಸಾವಿರ ಇದೆ. ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳಿವೆ. ಆಳಂದ ತಾಲ್ಲೂಕಿನಲ್ಲಿದ್ದ ಈ ಗ್ರಾಮವು ತಾಲ್ಲೂಕು ಪುನರ್ ರಚನೆ ನಂತರ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆಯಾಗಿದೆ. ಕಂದಾಯ ಮತ್ತಿತರ ದಾಖಲೆಗಳು ಕಮಲಾಪುರದಲ್ಲೇ ಸಿಗುತ್ತಿವೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಂಬಂಧಿಸಿದ, ಶೈಕ್ಷಣಿಕ ದಾಖಲೆಗಳು ಆಳಂದ ತಾಲ್ಲೂಕಿನಲ್ಲಿಯೇ ಉಳಿದಿವೆ.

‘ಕಮಲಾಪುರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಾಪನೆ ಆಗದಿರುವುದರಿಂದ ದಾಖಲೆಗಳು ವರ್ಗಾವಣೆಗೊಂಡಿಲ್ಲ. ನಮ್ಮ ದಾಖಲೆಗಳು ಆಳಂದ ಕಚೇರಿಯಲ್ಲೇ ಉಳಿದಿವೆ. ಹೀಗಾಗಿ ನಾವು ಆಳಂದಕ್ಕೆ ಅಲೆಯುವುದು ಇನ್ನೂ ತಪ್ಪಿಲ್ಲ. ಕೂಡಲೇ ಶೈಕ್ಷಣಿಕ ದಾಖಲೆಗಳನ್ನು ಕಮಲಾಪುರಕ್ಕೆ ವರ್ಗಾಯಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು’ ಎಂದು ಗ್ರಾಮಸ್ಥರ ಒತ್ತಾಯ.

ಗ್ರಾಮದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ಎರಡು ವರ್ಷಗಳಾದರೂ ಕಟ್ಟಡ ಉದ್ಘಾಟನೆ ಆಗಿಲ್ಲ. ಆರೋಗ್ಯ ಸಹಾಯಕಿಯರನ್ನು ಸಹ ನೇಮಿಸಿಲ್ಲ. ಸ್ವಲ್ಪ ಆರೋಗ್ಯ ಹದಗೆಟ್ಟರೂ ಕಲಬುರ್ಗಿಗೆ ಅಲೇಯಬೇಕಾದ ಪರಿಸ್ಥಿತಿ ಇದೆ. ಪ್ರಸವ ಮತ್ತಿತರ ಸಂದರ್ಭದಲ್ಲಿ ಬೇರೆಡೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ನಮ್ಮೂರಲ್ಲಿ ಕಿರಿಯ ಆರೋಗ್ಯ ಸಹಾಯಕಿಯರ ಉಪ ಕೇಂದ್ರ ಇದ್ದೂ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರಾಥಮಿಕ ಶಾಲೆಯ ಮೂರು ಕೋಣೆಗಳ ಚಾವಣಿ ಸೋರುತ್ತಿದೆ. ಈ ಕೋಣೆಗಳನ್ನು ತೆರವುಗೊಳಿಸಿ ಹೊಸ ಕೋಣೆ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಇದುವರೆಗೂ ಸ್ಪಂದಿಸಿಲ್ಲ. 20 ದಿನಗಳಿಂದ ಬಸ್‌ ಸಂಚಾರ ಸ್ಥಗಿತಗೊಂಡಿದೆ. ವಿದ್ಯಾರ್ಥಿಗಳು, ಸಾರ್ವಜನಿಕರ ಸಂಚಾರಕ್ಕೆ ಎಲ್ಲಿಲ್ಲದ ತೊಂದರೆ ಆಗುತ್ತಿದೆ.

ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಇಲ್ಲ. ಚರಂಡಿ ನೀರು ರಸ್ತೆ ಮೇಲೆಯೇ ಹರಡಿಕೊಳ್ಳುತ್ತಿದೆ. ಇದರಿಂದ ನೈರ್ಮಲ್ಯ ಮರೀಚಿಕೆಯಾಗಿದೆ. ಅಪಚಂದ ರಸ್ತೆಯಲ್ಲಿನ ಸೇತುವೆ ಹಾಳಾಗಿದ್ದು, ಸಂಚಾರಕ್ಕೆ ತುಂಬ ತೊಂದರೆ ಆಗುತ್ತಿದೆ. ಬಬಲಾದ ರಸ್ತೆಗೆ ಅಂಟಿಕೊಂಡಿರುವ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದೆ. ಕೂಡಲೇ ಪರಿಹರಿಸಬೇಕು ಎಂದು ಗ್ರಾಮಸ್ಥ ಸಚಿನ್‌ ಬಿರಾದಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT